ಬೆಂಗಳೂರು, ಏ.21 www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ಕೊಳಚೆ ನೀರು ಕೇವಲ ತ್ಯಾಜ್ಯವಲ್ಲ, ಅದು ಕೋಟಿ ಕೋಟಿ ಆದಾಯ ತರುವ ಅಕ್ಷಯ ಪಾತ್ರೆ!
ಸುಸ್ಥಿರ ನಗರಾಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿರುವ ಬೆಂಗಳೂರು ಜಲಮಂಡಳಿ (BWSSB), ಕೊಳಚೆ ನೀರಿನ ತ್ಯಾಜ್ಯದಿಂದ (Sewage Sludge) ಹೆಚ್ಚಿನ ಮೌಲ್ಯದ ಕಂಪ್ರೆಸ್ಡ್ ಬಯೋ-ಗ್ಯಾಸ್ (CBG) ಉತ್ಪಾದಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರೂಪಿಸಲಾದ ಈ ಯೋಜನೆಗೆ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಮುಂದಿನ 20 ವರ್ಷಗಳಲ್ಲಿ ಜಲಮಂಡಳಿಗೆ ಬರೋಬ್ಬರಿ 120 ಕೋಟಿ ರೂಪಾಯಿಗಳಿಗೂ ಅಧಿಕ ಹೆಚ್ಚುವರಿ ಆದಾಯ ಹರಿದುಬರಲಿದೆ.
ಏನಿದು ಯೋಜನೆ? ಇದರ ವಿಶೇಷತೆಗಳೇನು?:

ಪ್ರಸ್ತುತ ಬೆಂಗಳೂರಿನ ಐದು ಪ್ರಮುಖ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ (STPs) ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಕೇವಲ ವಿದ್ಯುತ್ ಉತ್ಪಾದನೆಗೆ ಅಥವಾ ಸುಟ್ಟು ಹಾಕಲು ಬಳಸಲಾಗುತ್ತಿದೆ. ಆದರೆ, ಈ ಹೊಸ ಯೋಜನೆಯಡಿ ಅದನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ‘ಕಂಪ್ರೆಸ್ಡ್ ಬಯೋ-ಗ್ಯಾಸ್’ (CBG) ಆಗಿ ಪರಿವರ್ತಿಸಲಾಗುತ್ತದೆ. ಈ ಅನಿಲವನ್ನು ಸಿಟಿ ಗ್ಯಾಸ್ ನೆಟ್‌ವರ್ಕ್ ಅಥವಾ ವಾಹನಗಳ ಇಂಧನವಾಗಿ ಬಳಸಬಹುದಾಗಿದೆ.
ಸೂರತ್ ಹಿಂದಿಕ್ಕಿದ ಬೆಂಗಳೂರು:
ಗುಜರಾತ್‌ನ ಸೂರತ್‌ನಲ್ಲಿ 120 ದಶಲಕ್ಷ ಲೀಟರ್ ಸಾಮರ್ಥ್ಯದ ಇಂತಹ ಯೋಜನೆಯಿದ್ದರೆ, ಬೆಂಗಳೂರು ಬರೋಬ್ಬರಿ 550 ದಶಲಕ್ಷ ಲೀಟರ್ ಸಾಮರ್ಥ್ಯದೊಂದಿಗೆ ದೇಶದಲ್ಲೇ ಮೊದಲ ಮತ್ತು ಅತಿದೊಡ್ಡ ಸಿಬಿಜಿ ಯೋಜನೆಯನ್ನು ಜಾರಿಗೆ ತರುತ್ತಿದೆ.
ಸರ್ಕಾರಕ್ಕೆ ಶೂನ್ಯ ವೆಚ್ಚ, ಆದಾಯ ಮಾತ್ರ ಲಕ್ಷ ಲಕ್ಷ:
ಈ ಯೋಜನೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ನಡೆಯಲಿದೆ.
ಖಾಸಗಿ ಹೂಡಿಕೆ: ಸುಮಾರು 85 ಕೋಟಿ ರೂ. ಬಂಡವಾಳ ಮತ್ತು ನಿರ್ವಹಣಾ ವೆಚ್ಚವನ್ನು ಖಾಸಗಿ ಸಂಸ್ಥೆಯೇ ಭರಿಸಲಿದೆ.
ಜಲಮಂಡಳಿಯ ಪಾಲು: ಮಂಡಳಿಯು ಕೇವಲ 13,000 ಚದರ ಮೀಟರ್ ಜಾಗವನ್ನು ನೀಡಲಿದೆ (ಮಾಲೀಕತ್ವ ಮಂಡಳಿಯದ್ದೇ ಇರುತ್ತದೆ).
ಲಾಭ: ಸರ್ಕಾರಕ್ಕೆ ಯಾವುದೇ ಹಣಕಾಸಿನ ಹೊರೆ ಇಲ್ಲದೆ 120 ಕೋಟಿ ರೂ. ಆದಾಯ ಬರಲಿದೆ.
ತ್ಯಾಜ್ಯ ಸಂಪತ್ತು:
“ನಾವು ಅಕ್ಷರಶಃ ತ್ಯಾಜ್ಯವನ್ನು ಸಂಪತ್ತನ್ನಾಗಿ ಪರಿವರ್ತಿಸುತ್ತಿದ್ದೇವೆ. ಇದು ನಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವುದಲ್ಲದೆ, ದೇಶದ ಇಂಧನ ಭದ್ರತೆಗೆ ಮಾದರಿಯಾಗಲಿದೆ,” ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
(Note: AI Regenerated Image)






















