ಬೆಂಗಳೂರು, ಮಾ.24 www.bengaluruwire.com:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಮುಂಬರುವ ಸಾರ್ವತ್ರಿಕ ಚುನಾವಣೆ-2026ರ ಹಿನ್ನೆಲೆಯಲ್ಲಿ, ವಾರ್ಡ್ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
ಮತದಾರರು ತಮ್ಮ ಹೆಸರುಗಳು ಸರಿಯಾದ ವಾರ್ಡ್ಗಳಲ್ಲಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ತಿದ್ದುಪಡಿಗಳಿದ್ದಲ್ಲಿ ದೂರು ಸಲ್ಲಿಸಲು ಈಗ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ.
ಹೆಚ್ಚುವರಿ ಕಾಲಾವಕಾಶ:

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ, ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ದೂರು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು ಮಾರ್ಚ್ 30 ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ನಿಗದಿಯಾಗಿದ್ದ ಅಂತಿಮ ಮತದಾರರ ಪಟ್ಟಿ ಪ್ರಕಟಣೆಯ ದಿನಾಂಕವನ್ನು ಸಹ ಏಪ್ರಿಲ್ 06 ರಿಂದ ಏಪ್ರಿಲ್ 18ಕ್ಕೆ ವಿಸ್ತರಿಸಲಾಗಿದೆ.
ಪರಿಶೀಲಿಸುವುದು ಹೇಗೆ?:
ಮತದಾರರು ತಮ್ಮ ಹೆಸರು ಮತ್ತು ವಾರ್ಡ್ ವಿವರಗಳನ್ನು ಈ ಕೆಳಗಿನ ವಿಧಾನಗಳ ಮೂಲಕ ಪರಿಶೀಲಿಸಬಹುದು:
ಆನ್ಲೈನ್ ಮೂಲಕ: ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://gba.karnataka.gov.in/electoral2026 ಗೆ ಭೇಟಿ ನೀಡಿ ‘Search tool by name’ ಅಥವಾ ‘Search by EPIC’ ಆಯ್ಕೆಯನ್ನು ಬಳಸಬಹುದು.
ಕಛೇರಿಗಳಲ್ಲಿ: ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿ ಅಥವಾ ಆಯಾ ವಾರ್ಡ್ ಕಛೇರಿಗಳಲ್ಲಿ ಕರಡು ಪಟ್ಟಿಯ ಪ್ರತಿಗಳು ವೀಕ್ಷಣೆಗೆ ಲಭ್ಯವಿರುತ್ತವೆ.
ದೂರು ಸಲ್ಲಿಕೆ:
ಒಬ್ಬ ಮತದಾರನ ಹೆಸರು ಬೇರೆ ಬೇರೆ ವಾರ್ಡ್ಗಳಲ್ಲಿ ನಮೂದಾಗಿದ್ದರೆ ಅಥವಾ ಪ್ರಸ್ತುತ ವಾಸವಿರುವ ವಾರ್ಡ್ ಬಿಟ್ಟು ಬೇರೆಡೆ ದಾಖಲಾಗಿದ್ದರೆ, ತಕ್ಷಣವೇ ಸಂಬಂಧಪಟ್ಟ ನಗರ ಪಾಲಿಕೆ ಅಥವಾ ವಾರ್ಡ್ ಕಛೇರಿಗಳಲ್ಲಿ ಲಿಖಿತ ದೂರು ಸಲ್ಲಿಸಲು ಕೋರಲಾಗಿದೆ. ಮತದಾರರು ತಮ್ಮ ಸಾಮಾನ್ಯ ನಿವಾಸವಿರುವ ವಾರ್ಡ್ನಲ್ಲಿಯೇ ನೋಂದಾಯಿತರಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಚುನಾವಣಾ ಪ್ರಕ್ರಿಯೆಯ ದೃಷ್ಟಿಯಿಂದ ಅತ್ಯಗತ್ಯವಾಗಿದೆ.























