ಬೆಂಗಳೂರು, ಸೆ.10 www.bengaluruwire.com : ನಿಯಮಿತ ನಿರ್ವಹಣಾ ಕಾಮಗಾರಿಗಳ ಕಾರಣದಿಂದ, ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸೆಪ್ಟೆಂಬರ್ 15, 16, ಮತ್ತು 17 ರಂದು ಕಾವೇರಿ ನೀರು ಸರಬರಾಜು ಯೋಜನೆಯ (Cauvery Water Supply Scheme) ವಿವಿಧ ಹಂತಗಳ ಜಲರೇಚಕ ಯಂತ್ರಾಗಾರಗಳನ್ನು (pumping stations) ಸ್ಥಗಿತಗೊಳಿಸಲಾಗುತ್ತದೆ.
ಈ ಬಗ್ಗೆ ಬೆಂಗಳೂರು ಜಲಮಂಡಳಿ (Bangalore Water Supply and Sewerage Board – BWSSB) ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮಾಹಿತಿ ನೀಡಿದ್ದಾರೆ.
ನಗರದ ನಿವಾಸಿಗಳಿಗೆ ನಿರಂತರವಾಗಿ ಕುಡಿಯುವ ನೀರು ಒದಗಿಸಲು, ಜಲರೇಚಕ ಯಂತ್ರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳನ್ನು ಸುಸ್ಥಿತಿಯಲ್ಲಿ ಇಡುವುದು ಅವಶ್ಯಕ. ಈ ಉದ್ದೇಶದಿಂದ ಜಲಮಂಡಳಿ ಈ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡಿದೆ.
ವ್ಯತ್ಯಯದ ಮಾಹಿತಿ ಹೀಗಿವೆ:

* ಕಾವೇರಿ 5ನೇ ಹಂತ: ಸೆಪ್ಟೆಂಬರ್ 15ರ ಬೆಳಗ್ಗೆ 1ರಿಂದ ಸೆಪ್ಟೆಂಬರ್ 17ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳ ಕಾಲ ಪಂಪಿಂಗ್ ಸ್ಟೇಷನ್ ಸ್ಥಗಿತಗೊಳ್ಳಲಿದೆ.
* ಕಾವೇರಿ 1, 2, 3, 4ನೇ ಹಂತಗಳು: ಸೆಪ್ಟೆಂಬರ್ 16ರ ಬೆಳಗ್ಗೆ 6ರಿಂದ ಸೆಪ್ಟೆಂಬರ್ 17ರ ಬೆಳಗ್ಗೆ 6ರವರೆಗೆ ಒಟ್ಟು 24 ಗಂಟೆಗಳ ಕಾಲ ಪಂಪಿಂಗ್ ಸ್ಟೇಷನ್‌ಗಳು ಸ್ಥಗಿತಗೊಳ್ಳಲಿವೆ.
ಈ ಅವಧಿಯಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆಯಾಗುವುದಿಲ್ಲ. ಆದ್ದರಿಂದ, ನಾಗರಿಕರು ಸಹಕರಿಸಬೇಕೆಂದು ಮತ್ತು ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಮನವಿ ಮಾಡಿದ್ದಾರೆ.





















