ಬೆಂಗಳೂರು, ಏ.04 www.bengaluruwire.com : ರಾಜಧಾನಿಯಲ್ಲಿ ಅನಧಿಕೃತವಾಗಿ ಮಕ್ಕಳ ಆರೈಕೆ ಕೇಂದ್ರಗಳನ್ನು ತೆರೆದು ಮಕ್ಕಳನ್ನು ಅಭಿರಕ್ಷಣೆಯಲ್ಲಿ ಇಟ್ಟುಕೊಂಡು ಬಾಲ ನ್ಯಾಯ ಕಾಯ್ದೆ 2015 ಹಾಗೂ ನಿಯಮಗಳ 2016 ರನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ದಯಾನಂದ್ ತಿಳಿಸಿದ್ದಾರೆ.
ನೋಂದಣಿ ಇಲ್ಲದೇ ಮಕ್ಕಳನ್ನು ಅಭಿರಕ್ಷಣೆಯಲ್ಲಿ ಇಟ್ಟುಕೊಂಡಿದ್ದೇ ಆದರೆ ಕಾನೂನು ಬಾಹಿರ ಅಭಿರಕ್ಷಣೆ ಎಂದು ಅವರ ಮೇಲೆ ಬಾಲನ್ಯಾಯ ( ಮಕ್ಕಳ ಪಾಲನೆ ಮತ್ತು ರಕ್ಷಣೆ ) ಕಾಯ್ದೆ ಸೆಕ್ಷನ್ 42 ರ ಅನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ನೋಂದಣಿ ಇಲ್ಲದೆ ಮಕ್ಕಳನ್ನು ಅನಧಿಕೃತವಾಗಿ ಆಭಿರಕ್ಷಣೆ ಮಾಡುತ್ತಿರುವ ಸಂಸ್ಥೆಗಳು ಏಪ್ರಿಲ್ 20 ರೊಳಗೆ ಕಡ್ಡಾಯವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಬೆಂಗಳೂರು ನಗರ ಪಶ್ಚಿಮ, ಆನೇಕಲ್ ತಾಲ್ಲೂಕು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲೆಕ್ಟ್ರಾನಿಕ ಸಿಟಿ, ಪರಪ್ಪನ ಅಗ್ರಹಾರ, ಬೇಗೂರು, ಬಂಡೆಪಾಳ್ಯ ಹಾಗೂ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ವ್ಯಕ್ತಿಗಳು ಸಂಘ ಸಂಸ್ಥೆಗಳು ಮಕ್ಕಳ ಕುಟೀರ, ಅನಾಥ ಆಶ್ರಮ, ಮಕ್ಕಳ ತಂಗುಧಾಮ, ಮಠಗಳು, ಚರ್ಚ್ ಗಳು, ಮಸೀದಿಗಳು ಹಾಗೂ ಮದರಸಾಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು ತೆರೆದು ಬಾಲ ನ್ಯಾಯ ಕಾಯ್ದೆ 2015 ಹಾಗೂ ನಿಯಮಗಳ 2016 ರನ್ನು ಉಲ್ಲಂಘಿಸಿ ಮಕ್ಕಳನ್ನು ತಮ್ಮ ಸಂಸ್ಥೆಗಳಲ್ಲಿ ಅನಧಿಕೃತವಾಗಿಟ್ಟುಕೊಂಡಿರುವುದು ಜಿಲ್ಲಾ ರಕ್ಷಣಾ ಘಟಕದ ಕಛೇರಿಯ ಗಮನಕ್ಕೆ ಬಂದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಛೇರಿ, ಬೆಂಗಳೂರು ಪಶ್ಚಿಮ, ನಂ. 141, ನಂದಿ ಗಾರ್ಡನ್ ಮುಂಬಾಗ, ಶ್ರೀ ವಾಣಿ ಕಾಲೇಜ್ ಹತ್ತಿರ, ಅತ್ತಿಬೆಲೆ ಮುಖ್ಯ ರಸ್ತೆ, ಅನೇಕಲ್- 562106 ಅಥವಾ ದೂರವಾಣಿ ಸಂಖ್ಯೆ: 080-22076833 ಗೆ ಸಂಪರ್ಕಿಸಬಹುದಾಗಿದೆ.






















