ವಿಜಯಪುರ, ಏ.4 www.bengaluruwire.com : ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿ ಕೊಳವೆ ಬಾವಿಗೆ (Borewell) ಬಿದ್ದ 2 ವರ್ಷದ ಸಾತ್ವಿಕ್ ರಕ್ಷಣೆಗಾಗಿ ನಿನ್ನೆ ಅಹೋರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಿದ್ದು ಸಾರ್ಥಕವಾಗಿದೆ. ನಡೆಯುತ್ತಿದ್ದು, ಕ್ಯಾಮೆರಾದಲ್ಲಿ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿತ್ತು. ಸತತ ಕಾರ್ಯಾಚರಣೆ ಬಳಿಕ ಬಾಲಕನನ್ನು ಬೋರ್ ವೆಲ್ ನಿಂದ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಇದರಿಂದ ಬಾಲಕನ ತಂದೆ ತಾಯಿ, ಬಂಧುವರ್ಗದವರು ನಿಟ್ಟುಸಿರು ಬಿಡುವಂತಾಗಿದೆ.
ಬಾಲಕನ್ನು ಕೂಡಲೇ ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ಆರೋಗ್ಯ ಸಿಬ್ಬಂದಿ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಬುಧವಾರ ಸಂಜೆ 4.45ಕ್ಕೆ ಈ ಘಟನೆ ನಡೆದಿದ್ದು, ಸಂಜೆ 5.30ರಿಂದ ಬಾಲಕನ ರಕ್ಷಣೆಗಾಗಿ ಕಾರ್ಯಾಚರಣೆ ಆರಂಭವಾಗಿತ್ತು. 400 ಅಡಿ ಆಳದ ಕೊಳವೆ ಬಾವಿ ಇದಾಗಿದ್ದು ಗುರುವಾರ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಮಗುವನ್ನು ಉಳಿಸುವ ಕಾರ್ಯಾಚರಣೆ 15 ಗಂಟೆ ಪೂರೈಸಿತ್ತು. 15 ಗಂಟೆಗಳಿಂದ ಮಗು ಅನ್ನ ನೀರು ಇಲ್ಲದೆ 20 ಅಡಿ ಆಳದಲ್ಲಿ ಮಗು ನರಳಾಡುತ್ತಿತ್ತು.

ಬೆಳಗಾವಿ, ಕಲಬುರಗಿಯಿಂದ ಎಸ್‌ಡಿಆರ್‌ಎಫ್ (SDRF), ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್ (NDRF) ತಂಡ ನಿನ್ನೆ ರಾತ್ರಿಯೇ ಸ್ಥಳಕ್ಕೆ ಬಂದು ಬೀಡು ಬಿಟ್ಟು ಬಾಲಕನ ರಕ್ಷಣಾ ಕಾರ್ಯದಲ್ಲಿ ತೊಡಗಿ ಕೊಂಡಿತ್ತು. ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಜೊತೆಗೂಡಿದ್ದು ರಕ್ಷಣಾ ಕಾರ್ಯಾಚರಣೆ ವೇಗಗತಿಯಲ್ಲಿ ನಡೆಸಿದರು. ಮಗುವಿನ ಅಳುವಿನ ಶಬ್ದ ಕೇಳಿ ಬಾಲಕನನ್ನು ರಕ್ಷಣೆ ಮಾಡಲು ಸಿಬ್ಬಂದಿ ಉತ್ಸಾಹ ಮೇರೆ ಮೀರಿತ್ತು. ಕೊನೆಗೂ ಸುರಕ್ಷಿತವಾಗಿ ಬಾಲಕನನ್ನು ಸಂರಕ್ಷಿಸಲಾಯಿತು.
ಸತೀಶ್ ಮತ್ತು ಪೂಜಾ ದಂಪತಿಗೆ ನಾಲ್ಕು ಎಕರೆ ಜಮೀನಿದ್ದು, ನಿಂಬೆ ಮತ್ತು ಕಬ್ಬಿಗೆ ನೀರಿನ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಕೊಳವೆ ಬಾವಿ ಕೊರೆಸಿದ್ದರು. ನೀರು ಸಿಕ್ಕಿದ ಹಿನ್ನೆಲೆಯಲ್ಲಿ ಅದನ್ನು ಹಾಗೆಯೇ ಬಿಟ್ಟಿದ್ದರು. ಈ ಬೋರ್ ವೆಲ್ ನಲ್ಲಿ ಎರಡು ವರ್ಷದ ಬಾಲಕ ಆಕಸ್ಮಿಕವಾಗಿ ಬಿದ್ದಿದ್ದನು.

20 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದು, ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಿ ಮಣ್ಣನ್ನು ಹೊರಗೆ ತೆಗೆದು ಮಗುವಿರುವ ಸ್ಥಳದ ಬಳಿಗೆ ರಕ್ಷಣಾ ತಂಡ ಸಮೀಪಕ್ಕೆ ತಲುಪಿತ್ತು. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನ ಗಮನಿಸಲಾಗುತ್ತಿದೆ. ಜಿಲ್ಲಾಡಳಿತ ಪೈಪ್ ಮೂಲಕ ಆಮ್ಲಜನಕ ಒದಗಿಸುತ್ತು. ಈ ಕ್ಯಾಮೆರಾದಲ್ಲಿ ಬಾಲಕ ಸಾತ್ವಿಕ್ ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆಯಾಗಿದ್ದರಿಂದ ಬಿರುಸಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು.
ರಕ್ಷಣಾ ಕಾರ್ಯಾಚರಣೆಗೆ ಗಟ್ಟಿ ಕಲ್ಲು, ಬಂಡೆ ಅಡ್ಡಿ ಆಗಿತ್ತು. ಸುರಂಗ ಕೊರೆಯುವ ನಡುವೆ ಇರೋ ಬಂಡೆ ಒಡೆಯಲು ರಕ್ಷಣಾ ತಂಡ ಸ್ಟೋನ್ ಬ್ರೇಕರ್ ಬಳಕೆ ಮಾಡಲಾಗಿತ್ತು. ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಕೂಡ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದರು.

ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ವಿಶೇಷ ಪೂಜೆ.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ ಪಿ ಋಷಿಕೇಶ ಸೋನಾವಣೆ, ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದರು.
ರಾಜ್ಯದಲ್ಲಿ ಕೊಳವೆಬಾವಿ ದುರಂತ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕರ್ನಾಟಕದಲ್ಲಿ ಒಟ್ಟು 8 ಕೊಳವೆಬಾವಿ ದುರಂತಗಳು ನಡೆದಿದೆ. 2000 ನೇ ಇಸವಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ , ದಾವಣಗೆರೆ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 8 ದುರ್ಘಟನೆ ಪ್ರಕರಣಗಳು ನಡೆದಿದೆ. ಆದರೆ ಬದುಕಿ ಬಂದಿದ್ದು ಕೇವಲ ಒಂದು ಘಟನೆಯಲ್ಲಿ ಮಾತ್ರ. ಇದೀಗ ಸಾತ್ವಿಕ್ ಈ ರೀತಿಯ ಘಟನೆಯಲ್ಲಿ ಬದುಕುಳಿದವರಲ್ಲಿ ಎರಡನೆಯವನಾಗಿದ್ದಾನೆ.
ಬಾಗಲಕೋಟೆ ತಾಲೂಕಿನ ಸಿಕ್ಕೇರಿಯಲ್ಲೂ 2008ರಲ್ಲಿ ಕೊಳವೆಬಾವಿ ದುರಂತ ಸಂಭವಿಸಿತ್ತು. ಆಗ ಇಲ್ಲಿ 20 ವರ್ಷದ ಕಲ್ಲವ್ವ ಎಂಬುವವರು ಕೊಳವೆ ಬಾವಿಗೆ ಬಿದ್ದಿದ್ದರು ಹೊಲಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದಳು. ಸುರಂಗ ಕೊರೆದು ಕಲ್ಲವ್ವಳನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು. ಆಗ ಅವಳಿಗೆ ಬದುಕಿ ಬಂದ ಫ್ರಿನ್ಸ್ ಅಂತ ಹೆಸರು ಕೊಡಲಾಗಿತ್ತು.





















