ನವದೆಹಲಿ, ಅ.17 www.bengaluruwire.com: ದುಬಾರಿ ವೆಚ್ಚದಿಂದಾಗಿ ಕ್ಯಾನ್ಸರ್ ಚಿಕಿತ್ಸೆಗೆ ಪರದಾಡುತ್ತಿರುವ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ 137 ಕ್ಯಾನ್ಸರ್ ವಿರೋಧಿ ಔಷಧಗಳ ವ್ಯಾಪಾರಿ ಲಾಭಾಂಶವನ್ನು (Trade Margin) ತರ್ಕಬದ್ಧಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದಾಗಿ ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಶೇ. 70 ರಷ್ಟು ಇಳಿಕೆಯಾಗಲಿದೆ.
ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು (NPPA) ಈ ಮಹತ್ವದ ಕ್ರಮ ಕೈಗೊಂಡಿದೆ. ಔಷಧಗಳ (ಬೆಲೆ ನಿಯಂತ್ರಣ) ಆದೇಶ 2013ರ (DPCO) ಅಡಿಯಲ್ಲಿ, ಗುರುತಿಸಲಾದ 137 ಕ್ಯಾನ್ಸರ್ ವಿರೋಧಿ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯ (MRP) ಮೇಲೆ ವ್ಯಾಪಾರಿ ಲಾಭಾಂಶವನ್ನು ಶೇ. 30ಕ್ಕೆ ಮಿತಿಗೊಳಿಸಲಾಗಿದೆ. ಈ ಸಂಬಂಧ ಅಕ್ಟೋಬರ್ 17, 2026 ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ಯಾವೆಲ್ಲಾ ಪ್ರಮುಖ ಔಷಧಗಳ ಬೆಲೆ ಇಳಿಕೆ?:

ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ (DGHS) ಅಡಿಯಲ್ಲಿರುವ ಪ್ರಮುಖ ಕ್ಯಾನ್ಸರ್ ತಜ್ಞರು ಮತ್ತು ವೈದ್ಯಕೀಯ ಪರಿಣತರನ್ನೊಳಗೊಂಡ ಸಮಿತಿಯ ಶಿಫಾರಸಿನ ಮೇರೆಗೆ ಈ 137 ಔಷಧಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ:
20ಕ್ಕೂ ಹೆಚ್ಚು ಬಗೆಯ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಇಮ್ಯುನೊಥೆರಪಿ (Immunotherapy) ಔಷಧಗಳು.
ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳಿಗೆ ನೀಡುವ ‘ಡೆನೊಸುಮಾಬ್’ (Denosumab).
ಕ್ಯಾನ್ಸರ್ ರೋಗಿಗಳಲ್ಲಿ ನ್ಯೂಟ್ರೋಪೆನಿಯಾ ತಡೆಗಟ್ಟಲು ಬಳಸುವ ‘ಪೆಗ್ಫಿಲ್ಗ್ರಾಸ್ಟಿಮ್’ (Pegfilgrastim).
ಕರುಳು, ಅಂಡಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆಗೆ ಅನುಮೋದಿಸಲಾದ ‘ಬೆವಾಸಿಜುಮಾಬ್’ (Bevacizumab).
ವ್ಯಾಪಕವಾಗಿ ಬಳಕೆಯಲ್ಲಿರುವ ಪೆಂಬ್ರೊಲಿಜುಮಾಬ್ (Pembrolizumab), ದುರ್ವಲುಮಾಬ್ (Durvalumab) ಮತ್ತು ಒಸಿಮೆರ್ಟಿನಿಬ್ (Osimertinib) ನಂತಹ ಜೀವ ರಕ್ಷಕ ಔಷಧಗಳು ಇನ್ನು ಮುಂದೆ ಕೈಗೆಟುಕುವ ದರದಲ್ಲಿ ರೋಗಿಗಳಿಗೆ ಲಭ್ಯವಾಗಲಿವೆ.
ನವೆಂಬರ್ 9 ರಿಂದ ಹೊಸ ದರ ಜಾರಿ:
ಪರಿಷ್ಕೃತ ಔಷಧ ದರಗಳು ನವೆಂಬರ್ 9, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ. ಗೆಜೆಟ್ ಅಧಿಸೂಚನೆ ಪ್ರಕಟವಾದ 7 ದಿನಗಳ ಒಳಗಾಗಿ ಎಲ್ಲಾ ಔಷಧ ತಯಾರಕ ಕಂಪನಿಗಳು ತಮ್ಮ ಪರಿಷ್ಕೃತ ದರ ಪಟ್ಟಿಯನ್ನು NPPA ಗೆ ಸಲ್ಲಿಸಬೇಕು ಮತ್ತು ತಮ್ಮ ವೆಬ್ಸೈಟ್ಗಳಲ್ಲಿ ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ, ನವೆಂಬರ್ 9 ರಿಂದ ಎಲ್ಲಾ ಮೆಡಿಕಲ್ ಸ್ಟೋರ್ಗಳು (ಚಿಲ್ಲರೆ ವ್ಯಾಪಾರಿಗಳು) ಮತ್ತು ಆಸ್ಪತ್ರೆಗಳು ಕಡ್ಡಾಯವಾಗಿ ಇಳಿಕೆಯಾದ ಹೊಸ ದರದಲ್ಲೇ ಔಷಧಗಳನ್ನು ಮಾರಾಟ ಮಾಡಬೇಕು ಹಾಗೂ ಪರಿಷ್ಕೃತ ದರ ಪಟ್ಟಿಯನ್ನು ತಮ್ಮ ಮಳಿಗೆ ಮತ್ತು ವೆಬ್ಸೈಟ್ಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಗ್ರಾಹಕರು ‘ಫಾರ್ಮಾ ಸಹಿ ದಾಮ್’ (Pharma Sahi Daam) ಆ್ಯಪ್ ಅಥವಾ NPPA ಅಧಿಕೃತ ವೆಬ್ಸೈಟ್ (https://nppa.gov.in/en) ಮೂಲಕ ಪರಿಷ್ಕೃತ ದರಗಳನ್ನು ಪರಿಶೀಲಿಸಬಹುದು.
ಕೃತಕ ಅಭಾವ ಸೃಷ್ಟಿಸಿದರೆ ಕ್ರಮ:
ಕ್ಯಾನ್ಸರ್ ಔಷಧಗಳು ಹೆಚ್ಚಿನ ಪ್ರಮಾಣದಲ್ಲಿ ನೇರವಾಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಪೂರೈಕೆಯಾಗುವುದರಿಂದ, ರೋಗಿಗಳಿಗೆ ಪರಿಷ್ಕೃತ ದರದ ಲಾಭ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಸ್ಪತ್ರೆಗಳ ಮೇಲಿದೆ. ಮಾರುಕಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಔಷಧಗಳ ಕೃತಕ ಅಭಾವ ಸೃಷ್ಟಿಯಾಗದಂತೆ ಪ್ರಸ್ತುತ ಇರುವ ಉತ್ಪಾದನೆ ಮತ್ತು ಪೂರೈಕೆ ಮಟ್ಟವನ್ನು ಕಾಯ್ದುಕೊಳ್ಳುವಂತೆ ಔಷಧ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಯಮ ಪಾಲನೆಯಾಗುತ್ತಿರುವ ಬಗ್ಗೆ ರಾಜ್ಯ ಔಷಧ ನಿಯಂತ್ರಕರು (State Drug Controllers) ನಿಗಾ ವಹಿಸಲಿದ್ದಾರೆ.
ಇದಕ್ಕೂ ಮುನ್ನ 2019 ರಲ್ಲಿ NPPA ಪ್ರಾಯೋಗಿಕವಾಗಿ 42 ಕ್ಯಾನ್ಸರ್ ವಿರೋಧಿ ಔಷಧಗಳ ವ್ಯಾಪಾರಿ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸಿತ್ತು. ಆಗ 526 ಬ್ರ್ಯಾಂಡ್ಗಳ ಔಷಧಗಳ ಬೆಲೆ ಶೇ.90 ರಷ್ಟು ಇಳಿಕೆಯಾಗಿ ಯಶಸ್ವಿಯಾದ ಹಿನ್ನೆಲೆಯಲ್ಲಿ, ಇದೀಗ ಮತ್ತೆ 137 ಔಷಧಗಳಿಗೆ ಈ ನಿಯಮವನ್ನು ವಿಸ್ತರಿಸಲಾಗಿದೆ.
ಕೇಂದ್ರದ ನಿರ್ಧಾರ ಸ್ವಾಗತಿಸಿದ ರಾಜ್ಯ ಆರೋಗ್ಯ ಸಚಿವರು:
ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ ಮಾಡಿರುವ ಕೇಂದ್ರದ ಕ್ರಮವನ್ನು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸ್ವಾಗತಿಸಿದ್ದಾರೆ.
“ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FDA) ನಡೆಸಿದ ಪರಿಶೀಲನೆಯಲ್ಲಿ 254 ಕಂಪನಿಗಳ ಕ್ಯಾನ್ಸರ್ ಔಷಧಗಳ ಉತ್ಪಾದನಾ ವೆಚ್ಚಕ್ಕೂ ಮತ್ತು ಮಾರಾಟ ದರಕ್ಕೂ (MRP) ಭಾರೀ ವ್ಯತ್ಯಾಸವಿರುವುದು ಪತ್ತೆಯಾಗಿತ್ತು. ಈ ಕುರಿತು ದಾಖಲೆಗಳ ಸಮೇತ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರದ (NPPA) ಗಮನಕ್ಕೆ ತಂದು ದರ ನಿಯಂತ್ರಣಕ್ಕೆ ಒತ್ತಾಯಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಚಿಕಿತ್ಸೆಗಾಗಿ ರೋಗಿಗಳ ಕುಟುಂಬಗಳು ಸಾಲ ಮಾಡುವ ಅಥವಾ ಆಸ್ತಿ ಮಾರಾಟ ಮಾಡುವ ಪರಿಸ್ಥಿತಿ ತಪ್ಪಲಿದ್ದು, ದೇಶಾದ್ಯಂತ ರೋಗಿಗಳಿಗೆ ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ಸಿಗಲಿದೆ” ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

















