ಬೆಂಗಳೂರು, ಅ.09 www.bengaluruwire.com: ಕರ್ನಾಟಕದಲ್ಲಿ ಹುಲಿಗಳ ಸಂರಕ್ಷಣಾ ಕಾರ್ಯಕ್ಕೆ ದೊಡ್ದ ಮಟ್ಟದ ಫಲ ದೊರೆತಿದ್ದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಇದೀಗ 700ರ ಗಡಿ ದಾಟಿರಬಹುದು ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ 72ನೇ ವನ್ಯಜೀವಿ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವನ್ಯಜೀವಿ ಸಂತತಿ ಗಣನೀಯವಾಗಿ ಹೆಚ್ಚುತ್ತಿರುವ ಅಂಶವನ್ನು ಹಂಚಿಕೊಂಡರು.

ಗಣನೀಯ ಏರಿಕೆ ಕಂಡ ಹುಲಿ ಸಂತತಿ: 2022ರ ರಾಷ್ಟ್ರೀಯ ಹುಲಿ ಗಣತಿಯ ಪ್ರಕಾರ ಕರ್ನಾಟಕದಲ್ಲಿ 563 ಹುಲಿಗಳು ದಾಖಲಾಗಿದ್ದವು. ನಂತರ 2023ರ ಅಂದಾಜಿನ ಪ್ರಕಾರ ಈ ಸಂಖ್ಯೆ 650ಕ್ಕೆ ತಲುಪಿತ್ತು. ಪ್ರಸ್ತುತ ರಾಜ್ಯದಲ್ಲಿ ಹುಲಿಗಳ ಆವಾಸಸ್ಥಾನಗಳನ್ನು 51 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಹುಲಿಗಳ ಸಂಖ್ಯೆ 700ರ ಗಡಿ ದಾಟಿದೆ ಎಂದು ಅಂದಾಜಿಸಲಾಗಿದೆ.
ಹುಲಿ ಸಂತತಿ ವೃದ್ಧಿಯಾಗಿರುವುದು ಹೆಮ್ಮೆಯ ಸಂಗತಿಯಾದರೂ, ಇದರ ಜತೆಯಲ್ಲೇ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲಿನ ಕಾರ್ಯದೊತ್ತಡ ತೀವ್ರವಾಗಿ ಹೆಚ್ಚುತ್ತಿದೆ ಎಂದು ತಿಳಿಸಿದರು.

ಹೊಸ ಸವಾಲುಗಳು ಮತ್ತು ಮಾನವ-ವನ್ಯಜೀವಿ ಸಂಘರ್ಷ: ಹುಲಿಗಳ ಸಂಖ್ಯೆ ಹೆಚ್ಚಾದಂತೆ ಅವು ತಮ್ಮ ಆವಾಸಸ್ಥಾನಗಳನ್ನು ಹೊಸ ಪ್ರದೇಶಗಳಿಗೂ ವಿಸ್ತರಿಸುತ್ತಿವೆ. ಈ ಹಿಂದೆ ಹುಲಿಗಳ ಸಂಚಾರವೇ ಇಲ್ಲದ ಪ್ರದೇಶಗಳಿಗೂ ಅವು ಕಾಲಿಡುತ್ತಿರುವುದು ಅರಣ್ಯ ಇಲಾಖೆಗೆ ಹೊಸ ರಕ್ಷಣಾ ಸವಾಲುಗಳನ್ನು ಒಡ್ಡಿದೆ.
ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಹುಲಿಗಳ ದಾಳಿಗೆ ಸುಮಾರು 6,500ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಈ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ, ಹುಲಿಗಳ ಒಟ್ಟು ಆಹಾರ ಸರಪಳಿಯಲ್ಲಿ ಶೇಕಡಾ 30ರಿಂದ 40ರಷ್ಟು ಪಾಲು ಸಾಕು ಜಾನುವಾರುಗಳದ್ದೇ ಆಗಿದೆ ಎಂದು ಅಂದಾಜಿಸಬಹುದಾಗಿದೆ. ಇದು ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕುಮಾರ್ ಪುಷ್ಕರ್ ವಿವರಿಸಿದರು.



















