ಬೆಂಗಳೂರು, ಆ.20 www.bengaluruwire.com: ಉತ್ತರ ಕರ್ನಾಟಕ ಭಾಗದ ವಿಮಾನ ಪ್ರಯಾಣಿಕರಿಗೆ ಇಂಡಿಗೋ ಏರ್‌ಲೈನ್ಸ್ ಸಿಹಿ ಸುದ್ದಿ ನೀಡಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹುಬ್ಬಳ್ಳಿ ಹಾಗೂ ಬೆಳಗಾವಿ ನಗರಗಳಿಗೆ ಅಕ್ಟೋಬರ್ 1ರಿಂದಲೇ ಪ್ರತಿನಿತ್ಯ ನೇರ ವಿಮಾನ ಸೇವೆ ಆರಂಭವಾಗಲಿದೆ.
ಈ ಭಾಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಹಾಗೂ ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳಿಗೆ ನಿತ್ಯ ವಿಮಾನ ಸಂಚಾರ ಆರಂಭಿಸುವಂತೆ ಮನವಿ ಮಾಡಿದ್ದರು. ಸಚಿವರ ಮನವಿಗೆ ತಕ್ಷಣ ಸ್ಪಂದಿಸಿರುವ ವಿಮಾನಯಾನ ಸಂಸ್ಥೆಯು, ಅಕ್ಟೋಬರ್ 1ರಿಂದ ಎರಡೂ ಮಾರ್ಗಗಳಲ್ಲಿ ದೈನಂದಿನ ವಿಮಾನ ಕಾರ್ಯಾಚರಣೆ ನಡೆಸುವುದಾಗಿ ಪ್ರಕಟಿಸಿದೆ.
ವಿಮಾನಗಳ ವೇಳಾಪಟ್ಟಿ:
ದೆಹಲಿ – ಹುಬ್ಬಳ್ಳಿ (Flight No: 6E758): ಪ್ರತಿದಿನ ಸಂಜೆ 4:30ಕ್ಕೆ ದೆಹಲಿಯಿಂದ ನಿರ್ಗಮಿಸಿ, ಸಂಜೆ 6:55ಕ್ಕೆ ಹುಬ್ಬಳ್ಳಿ ತಲುಪಲಿದೆ.

ಹುಬ್ಬಳ್ಳಿ – ದೆಹಲಿ (Flight No: 6E2115): ಪ್ರತಿದಿನ ಸಂಜೆ 7:30ಕ್ಕೆ ಹುಬ್ಬಳ್ಳಿಯಿಂದ ಹೊರಟು, ರಾತ್ರಿ 10:05ಕ್ಕೆ ದೆಹಲಿ ತಲುಪಲಿದೆ.
ದೆಹಲಿ – ಬೆಳಗಾವಿ (Flight No: 6E2511): ಪ್ರತಿದಿನ ಬೆಳಗ್ಗೆ 6:15ಕ್ಕೆ ದೆಹಲಿಯಿಂದ ಹೊರಟು, ಬೆಳಗ್ಗೆ 8:40ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿ – ದೆಹಲಿ (Flight No: 6E2512): ಪ್ರತಿದಿನ ಬೆಳಗ್ಗೆ 9:10ಕ್ಕೆ ಬೆಳಗಾವಿಯಿಂದ ನಿರ್ಗಮಿಸಿ, ಬೆಳಗ್ಗೆ 11:40ಕ್ಕೆ ದೆಹಲಿ ತಲುಪಲಿದೆ.
ನಿತ್ಯ ವಿಮಾನ ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಭಾಗದಲ್ಲಿ ಕೈಗಾರಿಕೆ, ವಾಣಿಜ್ಯ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಭಾರಿ ಉತ್ತೇಜನ ಸಿಗಲಿದೆ. ಉತ್ತರ ಕರ್ನಾಟಕದ ಮೂಲಸೌಕರ್ಯ ಹಾಗೂ ಸಂಪರ್ಕ ವ್ಯವಸ್ಥೆ ಬಲಪಡಿಸಲು ನಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
















