ಟೆಕ್ ದೈತ್ಯ ಆಪಲ್ (Apple) ಮುಂಬರುವ ವರ್ಷಗಳಲ್ಲಿ ಭಾರಿ ಬದಲಾವಣೆಗೆ ಸಜ್ಜಾಗುತ್ತಿರುವಂತಿದೆ. ವರದಿಗಳ ಪ್ರಕಾರ, 2026 ಮತ್ತು 2027 ರ ನಡುವೆ ಆಪಲ್ ಹಲವು ಹೊಸ ಮತ್ತು ನವೀನ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ಈ ಪಟ್ಟಿಯಲ್ಲಿ ಬಹುನಿರೀಕ್ಷಿತ ಮಡಚುವ (ಫೋಲ್ಡಬಲ್) ಐಫೋನ್‌ಗಳು, ಎಐ-ಚಾಲಿತ ಸ್ಮಾರ್ಟ್ ಗ್ಲಾಸ್‌ಗಳು, ಅತ್ಯಾಧುನಿಕ ಏರ್‌ಪಾಡ್ಸ್, ಅಪ್‌ಗ್ರೇಡ್ ಆದ ಮ್ಯಾಕ್, ಐಪ್ಯಾಡ್ ಮತ್ತು ಸ್ಮಾರ್ಟ್ ಹೋಮ್ ಸಾಧನಗಳು ಸೇರಿವೆ.
ಬ್ಲೂಮ್‌ಬರ್ಗ್‌ನ ಪ್ರಸಿದ್ಧ ಟೆಕ್ ವಿಶ್ಲೇಷಕ ಮಾರ್ಕ್ ಗುರ್ಮನ್ ಅವರ ವರದಿಯ ಪ್ರಕಾರ, ಈ ಮುಂಬರುವ ಲೈನ್‌ಅಪ್ ಆಪಲ್ ಇತಿಹಾಸದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯದ್ದಾಗಿದೆ. ಇದುವರೆಗೆ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳ ಮೂಲಕ ಮಾರುಕಟ್ಟೆ ಆಳುತ್ತಿದ್ದ ಆಪಲ್, ಈಗ ಹೊಸ ದಿಕ್ಕಿನತ್ತ ಹೆಜ್ಜೆ ಇಡುತ್ತಿದೆ. ಆಪಲ್ ಈ ಹಿಂದೆಂದೂ ಬಿಡುಗಡೆ ಮಾಡದ ಉತ್ಪನ್ನಗಳಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಸ್ಮಾರ್ಟ್ ಗ್ಲಾಸ್, ಕ್ಯಾಮೆರಾ ಹೊಂದಿರುವ ಏರ್‌ಪಾಡ್ಸ್ ಮತ್ತು ಸ್ಮಾರ್ಟ್ ಹೋಮ್‌ಗಾಗಿ ಟೇಬಲ್‌ಟಾಪ್ ರೋಬೋಟ್ ಅನ್ನು ಸಹ ಪರಿಚಯಿಸುವ ಸಾಧ್ಯತೆಯಿದೆ.
ಎಲ್ಲಕ್ಕಿಂತ ಮಿಗಿಲಾಗಿ, ಆಪಲ್ ತನ್ನ ಮೊದಲ ‘ಮಡಚುವ ಐಫೋನ್’ (Foldable iPhone) ಅನ್ನು ಇದೇ ವರ್ಷ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಎಲ್ಲಾ ಯೋಜನೆಗಳು ಸಾಕಾರಗೊಂಡರೆ, ಆಪಲ್ ಮತ್ತೊಮ್ಮೆ ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸುವುದರಲ್ಲಿ ಯಾವುದೇ ಅನುಮಾನವಿಲ್ಲ.




















