ಬೆಂಗಳೂರು, ಮೇ. 28 www.bengaluruwire.com: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಗೃಹಕಚೇರಿ ಕೃಷ್ಣಾದಲ್ಲಿ ಗುರುವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಮುಂದಿನ ರಾಜಕೀಯ ನಡೆ ಹಾಗೂ ಭವಿಷ್ಯದ ಕುರಿತು ಅತ್ಯಂತ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಹೈಕಮಾಂಡ್‌ನಿಂದ ಬಂದಿದ್ದ ದೆಹಲಿ ರಾಜಕಾರಣದ ಆಫರ್ ಅನ್ನು ನಯವಾಗಿ ತಿರಸ್ಕರಿಸಿರುವ ಅವರು, ಕೊನೆಯುಸಿರಿರುವವರೆಗೂ ರಾಜ್ಯ ರಾಜಕಾರಣದಲ್ಲೇ ಉಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ದೆಹಲಿ ರಾಜಕಾರಣಕ್ಕೆ ‘ನೋ’ ಎಂದ ಸಿದ್ದು:
ಸುದ್ದಿಗೋಷ್ಠಿಯಲ್ಲಿ ತಮ್ಮ ಭವಿಷ್ಯದ ಹೆಜ್ಜೆಗಳ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, “ಕಾಂಗ್ರೆಸ್ ಹೈಕಮಾಂಡ್ ನಾಯಕರು ನನಗೆ ದೆಹಲಿಗೆ ಬರುವಂತೆ ಹಾಗೂ ರಾಜ್ಯಸಭೆಗೆ ಹೋಗುವಂತೆ ಸೂಚಿಸಿದ್ದರು. ಆದರೆ, ನಾನು ಅತ್ಯಂತ ವಿನಮ್ರವಾಗಿ ಆ ಆಫರ್ ನಿರಾಕರಿಸಿದ್ದೇನೆ. ನನಗೆ ದೆಹಲಿ ರಾಜಕಾರಣ ಬೇಡ, ಕರ್ನಾಟಕದ ರಾಜ್ಯ ರಾಜಕಾರಣದಲ್ಲೇ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದೇನೆ” ಎಂದರು.

”ಈ ನಾಡಿನ ಜನ ನನ್ನನ್ನು ಐದು ವರ್ಷಗಳ ಕಾಲ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಾನು ಸಕ್ರಿಯ ರಾಜಕಾರಣದಲ್ಲೇ ಮುಂದುವರಿಯಲಿದ್ದೇನೆ. ಯಾರ ಒತ್ತಡಕ್ಕೂ ಮಣಿಯದೆ ನಾನೇ ಸ್ವಯಂ ಪ್ರೇರಿತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ” ಎಂದು ಅವರು ಸ್ಪಷ್ಟನೆ ನೀಡಿದರು.
ಅಂಬೇಡ್ಕರ್ ಸ್ಮರಿಸಿ ಭಾವುಕರಾದ ಮಾಜಿ ಸಿಎಂ:
ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನು ಮೆಲುಕು ಹಾಕುವಾಗ ಸಿದ್ದರಾಮಯ್ಯ ಭಾವುಕರಾದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿದ ಅವರು, “ನನ್ನ ರಾಜಕೀಯ ಜೀವನ ಒಂದು ತೆರೆದ ಪುಸ್ತಕ. ಈ ದೇಶದಲ್ಲಿ ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು ವಿದ್ಯಾವಂತನಾಗಲು ಸಾಧ್ಯವಿರಲಿಲ್ಲ. ಸಂವಿಧಾನ ಇದ್ದಿದ್ದಕ್ಕೆ ಇಂದು ನಾನು ಶಾಸಕ, ಉಪಮುಖ್ಯಮಂತ್ರಿ, ಎರಡು ಬಾರಿ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಇಲ್ಲದಿದ್ದರೆ ನಾನು ಹಳ್ಳಿಯಲ್ಲಿ ಕುರಿ ಮೇಯಿಸಿಕೊಂಡು ಇರಬೇಕಿತ್ತು” ಎಂದು ಭಾವುಕರಾಗಿ ನುಡಿದರು. “ನನ್ನ ದೇಹದಲ್ಲಿ ಕೊನೆ ಉಸಿರಿರುವವರೆಗೂ ಸಂವಿಧಾನಕ್ಕೆ ಧಕ್ಕೆ ತರುವವರ ವಿರುದ್ಧ ಹಾಗೂ ಕೋಮುವಾದಿ ಶಕ್ತಿಗಳ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ,” ಎಂದು ಗುಡುಗಿದರು.

ಗ್ಯಾರಂಟಿ ಯೋಜನೆಗಳೇ ನನ್ನ ಹೆಮ್ಮೆ, ಸಿದ್ಧಾಂತದೊಂದಿಗೆ ರಾಜಿ ಇಲ್ಲ:
ತಮ್ಮ ಆಡಳಿತಾವಧಿಯ ಯೋಜನೆಗಳನ್ನು ಹೆಮ್ಮೆಯಿಂದ ಸ್ಮರಿಸಿದ ಸಿದ್ದರಾಮಯ್ಯ, ತಾವು ಎಂದಿಗೂ ಸಿದ್ಧಾಂತದ ಜೊತೆ ರಾಜಿ ಮಾಡಿಕೊಂಡಿಲ್ಲ ಎಂದರು.
ಬಡವರ ಪರ ಯೋಜನೆಗಳು: ಉಚಿತ ಅನ್ನ, ಗೃಹಲಕ್ಷ್ಮಿ (ರೂ. 2,000), ಗೃಹಜ್ಯೋತಿ (1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್) ಹಾಗೂ ಶಕ್ತಿ ಯೋಜನೆಗಳು ಜನರಿಗೆ ತಲುಪಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ಬರಗಾಲ ನಿರ್ವಹಣೆ: ರಾಜ್ಯದಲ್ಲಿ ಭೀಕರ ಬರಗಾಲ ಬಂದಾಗಲೂ ಸರ್ಕಾರ ಪ್ರಾಮಾಣಿಕವಾಗಿ ಎದುರಿಸಿದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ಸಿಎಂ ಯಾರು? ಜೆಡಿಎಸ್‌ನಿಂದ ಹೊರಬಿದ್ದ ದಿನಗಳ ಸ್ಮರಣೆ
ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ, “ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಹಾಗೂ ಹೈಕಮಾಂಡ್ ನಾಯಕರು ಒಟ್ಟಾಗಿ ತೀರ್ಮಾನ ಮಾಡುತ್ತಾರೆ” ಎಂದು ಜಾಣ್ಮೆಯ ಉತ್ತರ ನೀಡಿದರು. ಇದೇ ವೇಳೆ ಜೆಡಿಎಸ್‌ನಿಂದ ಉಚ್ಚಾಟನೆಗೊಂಡಾಗ ಪೀರಾನ್ ಅವರ ಮೂಲಕ ಅಹ್ಮದ್ ಪಟೇಲ್, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರಿದ ದಿನಗಳನ್ನು ನೆನೆದು, ತಮ್ಮ ಜೊತೆಗಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಒಗ್ಗಟ್ಟು ಪ್ರದರ್ಶಿಸಿದ ‘ಕೈ’ ನಾಯಕರು ಹಾಗೂ ದೆಹಲಿ ಪ್ರಯಾಣ:

ಸುದ್ದಿಗೋಷ್ಠಿಯ ಮುಕ್ತಾಯದ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಸಿದ್ದರಾಮಯ್ಯ ಅವರ ಕೈಹಿಡಿದು ಮೇಲಕ್ಕೆ ಎತ್ತಿ, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂಬ ಸಂದೇಶ ಸಾರಿದರು. ಇದಕ್ಕೂ ಮುನ್ನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಉಪಾಹಾರ ಕೂಟ ಏರ್ಪಡಿಸಿದ್ದರು.
ಸಂಜೆ 4.30ರ ಸುಮಾರಿಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳಿದ ಸಿದ್ದರಾಮಯ್ಯ, ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಮತ್ತೊಂದೆಡೆ, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲು ತೆರೆಮರೆಯ ಸಿದ್ಧತೆಗಳು ಚುರುಕುಗೊಂಡಿವೆ. ಈ ಮಧ್ಯೆ ಅವರು ಸಹ ರಾತ್ರಿ 7.40 ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಲಿದ್ದು, ಕೈ ನಾಯಕರನ್ನು ಭೇಟಿ ಮಾಡಿ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಲಿದ್ದಾರೆ.


















