ಬೆಂಗಳೂರು, ಮೇ.06 www.bengaluruwire.com: ದಶಕಗಳ ಕಾಲ ಆಡಳಿತ ನಡೆಸಿದ್ದ ಬಿಬಿಎಂಪಿ ಇತಿಹಾಸ ಪುಟ ಸೇರಿದ್ದು, ಅದರ ಬದಲಿಗೆ ಅಸ್ತಿತ್ವಕ್ಕೆ ಬಂದಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಸಜ್ಜಾಗಿದೆ.
ಈ ಸಂಬಂಧ ಚುನಾವಣೆ ದಿನಾಂಕ ನಿಗದಿಪಡಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ನಿರ್ಣಾಯಕ ಸಭೆಯನ್ನು ಮೇ 08ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಆಯೋಜಿಸಲಾಗಿದೆ.
ಸ್ಥಳ ಬದಲಾವಣೆ ಮತ್ತು ಸಭೆಯ ಗಾಂಭೀರ್ಯ:
ಪ್ರಾಧಿಕಾರದಲ್ಲಿ ಪದನಿಮಿತ್ತ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳು, ಉಪಾಧ್ಯಕ್ಷರಾದ ಉಪಮುಖ್ಯಮಂತ್ರಿಗಳು ಹಾಗೂ ಸುಮಾರು 100 ಗಣ್ಯರು ಈ ಸಭೆಯಲ್ಲಿ ಭಾಗವಹಿಸುತ್ತಿರುವ ಕಾರಣ, ಭದ್ರತೆ ಮತ್ತು ಸ್ಥಳಾವಕಾಶದ ದೃಷ್ಟಿಯಿಂದ ಸಭೆಯನ್ನು ಚುನಾವಣಾ ಆಯೋಗದ ಸಭಾಂಗಣದ ಬದಲಿಗೆ ವಿಧಾನಸೌಧದ ಕೊಠಡಿ ಸಂಖ್ಯೆ: 334 (3ನೇ ಮಹಡಿ) ಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆಯೋಗದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಹಿನ್ನೆಲೆ ಮತ್ತು ಮಹತ್ವ:
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024ರ ಪ್ರಕರಣ 34(4)ರ ಅನ್ವಯ, ರಾಜ್ಯ ಚುನಾವಣಾ ಆಯೋಗವು ಪ್ರಾಧಿಕಾರದೊಂದಿಗೆ ಸಮಾಲೋಚನೆ ನಡೆಸಿ ಚುನಾವಣೆ ದಿನಾಂಕವನ್ನು ನಿಗದಿಪಡಿಸಬೇಕಿದೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ 2026ರ ಜೂನ್ 30ರ ಒಳಗಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಆದರೆ, ರಾಷ್ಟ್ರೀಯ ಜನಗಣತಿ ಮತ್ತು ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರವು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ಕೋರಿತ್ತು. ಆದಾಗ್ಯೂ, ಈಗಿನ ಸಭೆಯು ಚುನಾವಣಾ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಲಕ್ಷಣಗಳನ್ನು ತೋರುತ್ತಿದೆ.
ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಂಬ ಐದು ಹೊಸ ನಗರ ಪಾಲಿಕೆಗಳಿಗೆ ಒಟ್ಟು 369 ವಾರ್ಡ್‌ಗಳ ಮೀಸಲಾತಿ ಮತ್ತು ಮತದಾರರ ಪಟ್ಟಿ ಸಿದ್ಧತೆಯ ಬಗ್ಗೆಯೂ ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆಯಿದೆ. ಹಿಂದಿನಿ ಬಿಬಿಎಂಪಿ ಪಾಲಿಲೆ ಸಧ್ಯರ ಅವಧಿ ಪೂರ್ಣಗೊಂಡ ಬಳಿಕ 2020 ರಿಂದ ಬಾಕಿ ಉಳಿದಿರುವ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯು ನಗರದ ಅಭಿವೃದ್ಧಿ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿದೆ.





















