ಬೆಂಗಳೂರು, ಮೇ.06 www.bengaluruwire.com: ಹಳೆ ವಿಮಾನ ನಿಲ್ದಾಣ ರಸ್ತೆಯ ಅತಿ ಪ್ರಮುಖ ಜಂಕ್ಷನ್ ಆದ ವಿಂಡ್ ಟನಲ್ ಬಳಿ ನಿರ್ಮಾಣವಾಗುತ್ತಿರುವ ಕೆಳಸೇತುವೆ ಕಾಮಗಾರಿಯನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಜಿಬಿಎ (GBA) ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಬುಧವಾರ ಯು.ಆರ್. ರಾವ್ ಉಪಗ್ರಹ ಕೇಂದ್ರದ ಸಮೀಪವಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿಳಂಬಕ್ಕೆ ಆಸ್ಪದ ನೀಡದೆ ಯುದ್ಧೋಪಾದಿಯಲ್ಲಿ ಕೆಲಸ ಮುಗಿಸುವಂತೆ ಸೂಚಿಸಿದರು.
ಮೂರು ಪಾಳಿಗಳಲ್ಲಿ ಕೆಲಸ:
ಈ ಭಾಗದಲ್ಲಿ ವಾಹನ ಸಂಚಾರ ದಟ್ಟಣೆ ವಿಪರೀತವಾಗಿರುವುದರಿಂದ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಯಂತ್ರೋಪಕರಣಗಳನ್ನು ಬಳಸಿಕೊಂಡು ದಿನದ 24 ಗಂಟೆಯೂ (ಮೂರು ಪಾಳಿಗಳಲ್ಲಿ) ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದರು. ಈಗಾಗಲೇ ಶೇ. 60ರಷ್ಟು ಕಾಮಗಾರಿ ಮುಗಿದಿದ್ದು, ಬಾಕಿ ಉಳಿದಿರುವ ಆರ್‌ಸಿಸಿ ಗೋಡೆ ನಿರ್ಮಾಣ ಮತ್ತು ಬಾಕ್ಸ್ ಅಳವಡಿಕೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲು ತಿಳಿಸಿದರು.

ಸುರಕ್ಷತೆಗೆ ಆದ್ಯತೆ:
ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳು, ಬ್ಯಾರಿಕೇಡ್‌ಗಳು ಮತ್ತು ಕಾಷನ್ ಟೇಪ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಯುಕ್ತರು ತಿಳಿಸಿದರು. ವಾಹನ ಸಂಚಾರಕ್ಕೆ ಪರ್ಯಾಯವಾಗಿ ಇಸ್ರೋ, ಎನ್.ಎ.ಎಲ್ ಸೇರಿದಂತೆ ಖಾಸಗಿ ಜಾಗಗಳಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ವಿಳಂಬಕ್ಕೆ ಕಾರಣವೇನು?
17 ಕಿ.ಮೀ ಉದ್ದದ ಈ ಮಾರ್ಗದ ಅಭಿವೃದ್ಧಿ ಯೋಜನೆ 2015ರಲ್ಲೇ ಆರಂಭವಾಗಿದ್ದರೂ, ವಿಂಡ್ ಟನಲ್ ಜಂಕ್ಷನ್‌ನಲ್ಲಿ ಸಂಚಾರಿ ಪೊಲೀಸರ ಅನುಮತಿ ಸಿಗದ ಕಾರಣ ವಿಳಂಬವಾಗಿತ್ತು. ಈಗ ಅನುಮತಿ ಸಿಕ್ಕಿರುವುದರಿಂದ 19 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು 90 ದಿನಗಳಲ್ಲಿ ಸಾರ್ವಜನಿಕ ಅರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಅಭಿವೃದ್ಧಿ ಹೆಚ್ಚುವರಿ ಆಯುಕ್ತ ದಲ್ಜಿತ್ ಕುಮಾರ್ ಹಾಗೂ ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ಉಪಸ್ಥಿತರಿದ್ದರು.






















