ಬೆಂಗಳೂರು, ಏ.16 www.bengaluruwire.com: ರಾಜಧಾನಿಯ ಪೂರ್ವ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿವಿಧ ಪ್ರಕರಣಗಳಲ್ಲಿ ಕಳುವಾಗಿದ್ದ ಹಾಗೂ ಕಳೆದುಹೋಗಿದ್ದ ಅಂದಾಜು 1.15 ಕೋಟಿ ರೂಪಾಯಿ ಮೌಲ್ಯದ 385 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರ ಸರ್ಕಾರದ ಸಿಇಐಆರ್ (CEIR) ಪೋರ್ಟಲ್ ಮೂಲಕ ಸಾರ್ವಜನಿಕರು ನೀಡಿದ್ದ ದೂರುಗಳನ್ನಾಧರಿಸಿ ಮಾರ್ಚ್ ತಿಂಗಳ ಅವಧಿಯಲ್ಲಿ ಈ ಮೊಬೈಲ್‌ಗಳನ್ನು ಮರುಪಡೆಯಲಾಗಿದೆ.
ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 14 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಠಾಣಾವಾರು ಪತ್ತೆಯಾದ ಮೊಬೈಲ್‌ಗಳ ವಿವರ ಹೀಗಿದೆ:

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ 87 ಮೊಬೈಲ್‌ಗಳು, ಜೆ.ಬಿ ನಗರ ಠಾಣೆಯಲ್ಲಿ 81, ಗೋವಿಂದಪುರ ಠಾಣೆಯಲ್ಲಿ 35, ಕೆ.ಜಿ ಹಳ್ಳಿ ಮತ್ತು ಹುಲಸೂರು ಠಾಣೆಗಳಲ್ಲಿ ತಲಾ 30 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ. ಡಿ.ಜೆ ಹಳ್ಳಿ ವ್ಯಾಪ್ತಿಯಲ್ಲಿ 29, ಹೆಣ್ಣೂರು ಠಾಣೆಯಲ್ಲಿ 19, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ 16 ಹಾಗೂ ಪುಲಕೇಶಿನಗರ ಠಾಣೆಯಲ್ಲಿ 15 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಇಂದಿರಾನಗರ ಠಾಣೆಯಲ್ಲಿ 12, ಆರ್.ಎಂ ನಗರದಲ್ಲಿ 10, ಬೈಯಪ್ಪನಹಳ್ಳಿ ಮತ್ತು ಶಿವಾಜಿನಗರ ಠಾಣೆಗಳಲ್ಲಿ ತಲಾ 8 ಹಾಗೂ ಭಾರತಿನಗರ ಪೊಲೀಸ್ ಠಾಣೆಯಲ್ಲಿ 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಕೊಂಡಾಗ ತಕ್ಷಣವೇ ಸಿಇಐಆರ್ ಪೋರ್ಟಲ್‌ನಲ್ಲಿ ವಿವರಗಳನ್ನು ದಾಖಲಿಸುವುದರಿಂದ ಇಂತಹ ಯಶಸ್ವಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆಯಾದ ಈ ಮೊಬೈಲ್‌ಗಳನ್ನು ಶೀಘ್ರದಲ್ಲೇ ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.























