ಬೆಂಗಳೂರು, ಏ.16 www.bengaluruwire.com: ಸಿಲಿಕಾನ್ ಸಿಟಿಯ ನಿವಾಸಿಗಳೇ ರಾಷ್ಟ್ರೀಯ ಜನಗಣತಿ 2027ರ ಮೊದಲ ಹಂತದ ಮನೆ-ಮನೆ ಭೇಟಿ ಹಾಗೂ ಪಟ್ಟಿ ಮಾಡುವ ಕಾರ್ಯಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಾಳೆಯಿಂದ ಅಂದರೆ ಏಪ್ರಿಲ್ 16ರಿಂದ ಅಧಿಕೃತವಾಗಿ ಚಾಲನೆ ನೀಡಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ನಗರದ ಎಲ್ಲಾ ಮನೆಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ವಾಣಿಜ್ಯ ಮಳಿಗೆಗಳ ನಿವಾಸಿಗಳು ಈ ಬೃಹತ್ ಅಭಿಯಾನಕ್ಕೆ ಕಡ್ಡಾಯವಾಗಿ ಸಹಕರಿಸಬೇಕೆಂದು ಸೂಚಿಸಿದ್ದಾರೆ.
ಈ ಗಣತಿ ಕಾರ್ಯವು ಬೆಂಗಳೂರಿನ ಉತ್ತರ, ಪಶ್ಚಿಮ, ಪೂರ್ವ, ಕೇಂದ್ರ ಮತ್ತು ದಕ್ಷಿಣ ಎಂಬ ಐದು ಪ್ರಮುಖ ವಲಯಗಳಲ್ಲಿ ಏಕಕಾಲಕ್ಕೆ ನಡೆಯಲಿದೆ.
ಸುಗಮ ಗಣತಿಗಾಗಿ ಪ್ರಾಧಿಕಾರವು ಬರೋಬ್ಬರಿ 23,705 ಗಣತಿದಾರರನ್ನು ಹಾಗೂ 2,912 ಮೇಲ್ವಿಚಾರಕರನ್ನು ಒಳಗೊಂಡಂತೆ ಒಟ್ಟು 26,616 ಸಿಬ್ಬಂದಿಗಳ ಬೃಹತ್ ಪಡೆಯನ್ನು ನಿಯೋಜಿಸಿದೆ. ಜನಗಣತಿ ಅಧಿಕಾರಿಗಳು ನಿಮ್ಮ ಮನೆಗೆ ಭೇಟಿ ನೀಡಿದಾಗ ಅವರಿಗೆ ನಿಖರವಾದ ಮಾಹಿತಿ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಸಂಘ-ಸಂಸ್ಥೆಗಳು ಗಣತಿದಾರರಿಗೆ ಆವರಣದೊಳಗೆ ಪ್ರವೇಶ ನೀಡಲು ಮತ್ತು ಅಗತ್ಯ ಮಾಹಿತಿಯನ್ನು ಒದಗಿಸಲು ಸಹಕರಿಸಬೇಕು. ಒಂದು ವೇಳೆ ಯಾರಾದರೂ ಮಾಹಿತಿ ನೀಡಲು ನಿರಾಕರಿಸಿದರೆ ಅಥವಾ ಗಣತಿ ಕಾರ್ಯಕ್ಕೆ ಅಡ್ಡಿಪಡಿಸಿದರೆ, 1948ರ ಜನಗಣತಿ ಕಾಯ್ದೆಯಡಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರವು ಎಚ್ಚರಿಕೆ ನೀಡಿದೆ.























