ಬೆಂಗಳೂರು, ಏ.16 www.bengaluruwire.com:ನಗರದ ಆಸ್ತಿ ಮಾಲೀಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ನಾಗರಿಕರು ತಮ್ಮ ಖಾತಾ ವಿವರಗಳಲ್ಲಿರುವ ಸಣ್ಣಪುಟ್ಟ ದೋಷಗಳನ್ನು ತಾವೇ ಖುದ್ದಾಗಿ ಆನ್‌ಲೈನ್ ಮೂಲಕ ತಿದ್ದುಪಡಿ ಮಾಡಿಕೊಳ್ಳುವ ಹೊಸ ಸೌಲಭ್ಯವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಶೀಘ್ರದಲ್ಲೇ ಪರಿಚಯಿಸಲಿದೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು, ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಯಾವೆಲ್ಲಾ ತಿದ್ದುಪಡಿಗೆ ಅವಕಾಶ?:ಮಾಲೀಕರ ಹೆಸರು ಮತ್ತು ಆಸ್ತಿಯ ಅಳತೆಯನ್ನು ಹೊರತುಪಡಿಸಿ, ಆಸ್ತಿಯ ಸ್ಥಳ, ವಾರ್ಡ್ ಸಂಖ್ಯೆ ಸೇರಿದಂತೆ ಇತರ ಪ್ರಮುಖ ವಿವರಗಳನ್ನು ನಾಗರಿಕರು ಸ್ವತಃ ಆನ್‌ಲೈನ್ ಮೂಲಕವೇ ತಿದ್ದುಪಡಿ ಮಾಡಿಕೊಳ್ಳಲು ಈ ನೂತನ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಇದರಿಂದ ನಾಗರಿಕರು ಕಚೇರಿಗಳಿಗೆ ಅಲೆಯುವುದು ತಪ್ಪಲಿದ್ದು, ವಿಳಂಬವಿಲ್ಲದೆ ದೋಷಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ವೇಗವಾಗಿ ಸಾಗುತ್ತಿದೆ ಇ-ಖಾತಾ ವಿತರಣೆ:ಸದ್ಯದ ಅಂಕಿಅಂಶಗಳ ಪ್ರಕಾರ, ಸುಮಾರು 25 ಲಕ್ಷ ಡ್ರಾಫ್ಟ್ ಖಾತಾ ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿದ್ದು, ಈ ಪೈಕಿ 10 ಲಕ್ಷಕ್ಕೂ ಹೆಚ್ಚು ಜನರಿಗೆ ಅಂತಿಮ ಇ-ಖಾತಾ ವಿತರಿಸಲಾಗಿದೆ. ದಾಖಲೆಗಳು ಸರಿಯಾಗಿದ್ದಲ್ಲಿ ಕೇವಲ ಐದು ದಿನಗಳಲ್ಲಿ ಖಾತಾ ಕೈಸೇರುತ್ತಿದೆ. ವಿಶೇಷವೆಂದರೆ, ಪ್ರತಿ 30 ಸೆಕೆಂಡಿಗೆ ಒಂದು ಇ-ಖಾತಾ ವಿತರಣೆಯಾಗುತ್ತಿದ್ದು, ಡಿಜಿಟಲ್ ಆಡಳಿತದಲ್ಲಿ ಜಿಬಿಎ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಸ್ವಯಂಚಾಲಿತ ಮ್ಯೂಟೇಷನ್ ಜಾರಿ:ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿನ ವಿಳಂಬ ತಪ್ಪಿಸಲು ‘ಸ್ವಯಂಚಾಲಿತ ಮ್ಯೂಟೇಷನ್’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಉಪ-ನೋಂದಣಾಧಿಕಾರಿ ಕಚೇರಿಯಲ್ಲಿ ವಹಿವಾಟು ನಡೆದ ತಕ್ಷಣ ಪ್ರಕ್ರಿಯೆ ಆರಂಭವಾಗಲಿದ್ದು, ನೋಟಿಸ್ ಅವಧಿ ಮುಗಿದ ಏಳನೇ ದಿನಕ್ಕೆ ನಾಗರಿಕರ ಮೊಬೈಲ್‌ಗೆ ಸಂದೇಶ ರವಾನೆಯಾಗಲಿದೆ. ವಾರಸುದಾರರ (ಪೌತಿ) ಪ್ರಕರಣಗಳಿಗೂ ಈ ಸ್ವಯಂ ಮ್ಯೂಟೇಷನ್ ವ್ಯವಸ್ಥೆ ಅನ್ವಯವಾಗಲಿದೆ ಎಂದು ಮೌದ್ಗಿಲ್ ಸ್ಪಷ್ಟಪಡಿಸಿದರು.

ತಿರಸ್ಕೃತಗೊಂಡ ಅರ್ಜಿಗಳ ಮರುಪರಿಶೀಲನೆಗಾಗಿ ‘ರಿಜೆಕ್ಷನ್ ಆಡಿಟ್’ ತಂಡವನ್ನು ರಚಿಸಲಾಗಿದ್ದು, ಸಣ್ಣ ತಪ್ಪುಗಳಿಂದ ತಿರಸ್ಕೃತಗೊಂಡ ಅರ್ಜಿಗಳನ್ನು ಪುನಃ ಪರಿಶೀಲಿಸಿ ಮಂಜೂರಾತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.























