ಬೆಂಗಳೂರು, ಏ.10 www.bengaluruwire.com: ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ, ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ತಡೆಗಟ್ಟಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಮರೋಪಾದಿಯಲ್ಲಿ ಸಿದ್ಧತೆ ಆರಂಭಿಸಿದೆ.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಇಂದು ನಗರದ ವಿವಿಧ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜಕಾಲುವೆ ಹೂಳೆತ್ತಲು ಡ್ರೋನ್ ಹದ್ದಿನ ಕಣ್ಣು:
ನಗರದ ಪ್ರಮುಖ ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ವೈಜ್ಞಾನಿಕವಾಗಿ ನಡೆಸಲು ನಿರ್ಧರಿಸಲಾಗಿದೆ. ಹೂಳೆತ್ತುವ ಮೊದಲು ಮತ್ತು ನಂತರದ ಸ್ಥಿತಿಯನ್ನು ಡ್ರೋನ್ ಮೂಲಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಡ್ರೋನ್ ದೃಶ್ಯಾವಳಿಗಳ ಮೂಲಕ ನೀರಿನ ಹರಿವಿಗೆ ತಡೆಯೊಡ್ಡುವ ‘ಚೋಕಿಂಗ್ ಪಾಯಿಂಟ್’ಗಳನ್ನು ಗುರುತಿಸಿ, ತಕ್ಷಣವೇ ದುರಸ್ತಿ ಕೈಗೊಳ್ಳಲು ತುಷಾರ್ ಗಿರಿನಾಥ್ ಕಟ್ಟುನಿಟ್ಟಿನ ಆದೇಶ ನೀಡಿದರು.


ಪ್ರಮುಖ ಪ್ರದೇಶಗಳ ಪರಿಶೀಲನೆ ಮತ್ತು ಕಾಮಗಾರಿ ಗಡುವು:
ಯಲಹಂಕದ ಕೇಂದ್ರೀಯ ವಿಹಾರ್ ಮತ್ತು ಕೋಗಿಲು ಜಂಕ್ಷನ್‌ನಲ್ಲಿ ಪ್ರವಾಹ ತಡೆಗೆ 2.7 ಕಿ.ಮೀ ಉದ್ದದ ರಾಜಕಾಲುವೆ ನಿರ್ಮಾಣವಾಗುತ್ತಿದ್ದು, ಈಗಾಗಲೇ 1.5 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಕಚ್ಚಾ ಕಾಲುವೆ ನಿರ್ಮಿಸಲಾಗಿದೆ.
ಟಾಟಾ ನಗರದಲ್ಲಿ 900 ಮೀಟರ್ ಉದ್ದದ ತಡೆಗೋಡೆ: ಎತ್ತರಿಸುವ ಕೆಲಸ ನಡೆಯುತ್ತಿದ್ದು, 15 ದಿನಗಳಲ್ಲಿ ಮಿಸ್ಸಿಂಗ್ ಲಿಂಕ್‌ಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಹೆಬ್ಬಾಳ ಕೆರೆಯ 16 ಎಕರೆ ಒತ್ತುವರಿ ತೆರವುಗೊಳಿಸಿದ ಬಳಿಕ ವೆಟ್‌ಲ್ಯಾಂಡ್ ಅಭಿವೃದ್ಧಿ ವೇಗ ಪಡೆದುಕೊಂಡಿದೆ. ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿಯ ಮೊದಲ ಹಂತದ ಬಾಕ್ಸ್ ಪುಶಿಂಗ್ ಮೇ 2ರೊಳಗೆ ಮತ್ತು ಎರಡನೇ ಹಂತ ಮೇ ಅಂತ್ಯಕ್ಕೆ ಮುಕ್ತಾಯವಾಗಲಿದೆ.
ಸಿಲ್ಕ್ ಬೋರ್ಡ್ ಮತ್ತು ಜಲಮಂಡಳಿ ಸಮನ್ವಯ:
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿನ ಜಲಾವೃತ ಸಮಸ್ಯೆ ನೀಗಿಸಲು ಕಲ್ವರ್ಟ್ ಎತ್ತರವನ್ನು 3.5 ಮೀಟರ್‌ಗೆ ಹೆಚ್ಚಿಸಲಾಗುತ್ತಿದೆ. ನಾಗವಾರ ಜಂಕ್ಷನ್ ಮತ್ತು ಹೆಚ್.ಬಿ.ಆರ್ ಲೇಔಟ್‌ನಲ್ಲಿ ಜಲಮಂಡಳಿಯ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಮುಗಿಸಲು ಗಡುವು ನೀಡಲಾಗಿದೆ. ಮಳೆಗಾಲದ ತುರ್ತು ನಿರ್ವಹಣೆಗಾಗಿ ಬೆಸ್ಕಾಂ, ಜಲಮಂಡಳಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಒಳಗೊಂಡ ಕಂಟ್ರೋಲ್ ರೂಮ್‌ಗಳನ್ನು ಸಕ್ರಿಯಗೊಳಿಸಲು ಸೂಚಿಸಲಾಗಿದೆ.
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, “ಕಾಮಗಾರಿ ಮುಗಿಯದ ಕಡೆ ತಾತ್ಕಾಲಿಕ ಪಂಪ್‌ಸೆಟ್ ವ್ಯವಸ್ಥೆ ಮಾಡಬೇಕು ಮತ್ತು ರಸ್ತೆ ಬದಿಯ ಸೈಡ್ ಡ್ರೈನ್‌ಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು” ಎಂದರು.























