ಬೆಂಗಳೂರು, ಮಾ.30 www.bengaluruwire.com: ಇಲ್ಲಿನ ಮೈಸೂರು ರಸ್ತೆಯ ಜವಳಿ ವಿನ್ಯಾಸ ಮುದ್ರಣ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭೀಕರ ಕೈಗಾರಿಕಾ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐವರು ಕಾರ್ಮಿಕರನ್ನು ನಗರದ ಸ್ಪರ್ಶ್ ಆಸ್ಪತ್ರೆಯ ವೈದ್ಯರು ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಹಿರಿಯ ಸಮಾಲೋಚಕ ಡಾ. ಗುಣಶೇಖರ್ ವುಪ್ಪಲಪತಿ, “ಬೆಂಕಿ ಅವಘಡದಿಂದ ಗಾಯಾಳುಗಳ ಮುಖ, ಕೈ ಮತ್ತು ಬೆನ್ನಿನ ಭಾಗ ಶೇ. 40ಕ್ಕೂ ಹೆಚ್ಚು ಸುಟ್ಟಿದ್ದವು. ಒಬ್ಬ ಗಾಯಾಳು ಶ್ವಾಸನಾಳಕ್ಕೆ ಹೊಗೆ ನುಗ್ಗಿ ಉಸಿರಾಟದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದರು. ಇಂತಹ ಪ್ರಕರಣಗಳಲ್ಲಿ ಮೊದಲ 48 ಗಂಟೆಗಳು ಅತ್ಯಂತ ನಿರ್ಣಾಯಕ,” ಎಂದು ತಿಳಿಸಿದರು.
ತಜ್ಞರ ತಂಡದಿಂದ ಸಮರೋಪಾದಿ ಚಿಕಿತ್ಸೆ:
ಘಟನೆ ನಡೆದ ತಕ್ಷಣ ಆಸ್ಪತ್ರೆಯ ‘ಸಾಮೂಹಿಕ ಅಪಘಾತ ಮತ್ತು ಸುಟ್ಟ ಗಾಯಗಳ ನಿರ್ವಹಣೆ’ ತಂಡವು ಕಾರ್ಯಪ್ರವೃತ್ತವಾಯಿತು. ಡಾ. ದೀಪಕ್ ಕೆ.ಎಲ್., ಅರಿವಳಿಕೆ ತಜ್ಞರು, ತೀವ್ರ ನಿಗಾ ಘಟಕದ (ICU) ವೈದ್ಯರು ಮತ್ತು ವಿಶೇಷ ತರಬೇತಿ ಪಡೆದ 21 ದಾದಿಯರ ತಂಡವು ನಿರಂತರವಾಗಿ ರೋಗಿಗಳ ಮೇಲೆ ನಿಗಾ ಇಟ್ಟಿತು. ಉಸಿರಾಟದ ಸ್ಥಿರೀಕರಣ, ಸೋಂಕು ತಡೆಗಟ್ಟುವಿಕೆ ಮತ್ತು ಪೌಷ್ಟಿಕಾಂಶ ನಿರ್ವಹಣೆಯ ಮೂಲಕ ರೋಗಿಗಳ ಸ್ಥಿತಿಯನ್ನು ಸುಧಾರಿಸಲಾಯಿತು.

ಸಾಂಸ್ಥಿಕ ಸನ್ನದ್ಧತೆಗೆ ಸಾಕ್ಷಿ:
ಸ್ಪರ್ಶ್ ಆಸ್ಪತ್ರೆಗಳ ಸಮೂಹ ವೈದ್ಯಕೀಯ ನಿರ್ದೇಶಕ ಡಾ. ರಂಜನ್ ಶೆಟ್ಟಿ ಮಾತನಾಡಿ, “ಏಕಕಾಲದಲ್ಲಿ ಐವರು ಗಂಭೀರ ರೋಗಿಗಳನ್ನು ನಿರ್ವಹಿಸುವುದು ಆಸ್ಪತ್ರೆಯ ಮೂಲಸೌಕರ್ಯ ಮತ್ತು ತಂಡದ ಬದ್ಧತೆಗೆ ಹಿಡಿದ ಕೈಗನ್ನಡಿ,” ಎಂದರು. ಆಸ್ಪತ್ರೆಯ ಸಿಇಒ ಜಸ್ದೀಪ್ ಸಿಂಗ್ ಮಾತನಾಡಿ, ಇಂತಹ ತುರ್ತು ಸಂದರ್ಭಗಳನ್ನು ಎದುರಿಸಲು ಸ್ಪರ್ಶ್ ಆಸ್ಪತ್ರೆ ಸದಾ ಸನ್ನದ್ಧವಾಗಿದೆ ಎಂದು ಭರವಸೆ ನೀಡಿದರು.























