ಬೆಂಗಳೂರು, ಮಾ.21 www.bengaluruwire.com: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹಾಗೂ ಇರಾನ್ ಯುದ್ಧದಿಂದಾಗಿ ಗ್ಯಾಸ್ ಸಿಲೆಂಡರ್ ಕೊರತೆಯಿಂದ ಹೋಟೆಲ್ ನವರು ಆಹಾರದ ಮೇಲೆ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ಹಾಕುತ್ತಿರುವ ಹೊತ್ತಿನಲ್ಲೇ ಜನಸಾಮಾನ್ಯರಿಗೆ ಪ್ರಮುಖ ಆಹಾರ ವಿತರಣಾ ಸಂಸ್ಥೆಯಾದ ‘ಝೊಮ್ಯಾಟೋ’ (Zomato) ಬಿಗ್ ಶಾಕ್ ನೀಡಿದೆ.
ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು (Platform Fee) ದಿಢೀರ್ ಆಗಿ ಏರಿಕೆ ಮಾಡುವ ಮೂಲಕ ಗ್ರಾಹಕರ ಹೊರೆ ಹೆಚ್ಚಿಸಿದೆ. ಪ್ರತಿ ಆರ್ಡರ್ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಸುಮಾರು ₹2.40 ರಷ್ಟು ಹೆಚ್ಚಳ ಮಾಡಲಾಗಿದ್ದು, ಒಟ್ಟಾರೆ ಶೇ.19 ರಷ್ಟು ದರ ಏರಿಕೆಯಾದಂತಾಗಿದೆ.
ದರ ಏರಿಕೆ ವಿವರ:
ಈ ಹಿಂದೆ ಪ್ರತಿ ಆರ್ಡರ್‌ಗೆ 12.50 ರೂ. ಪ್ಲಾಟ್‌ಫಾರ್ಮ್ ಶುಲ್ಕ ವಿಧಿಸುತ್ತಿದ್ದ ಝೊಮ್ಯಾಟೋ, ಈಗ ಅದನ್ನು 14.90 ರೂ.ಗೆ ಏರಿಸಿದೆ. ಯುದ್ಧದ ಕಾರಣದಿಂದಾಗಿ ಇಂಧನ ಬೆಲೆಗಳು ಏರಿಕೆಯಾಗುತ್ತಿದ್ದು, ಲಾಜಿಸ್ಟಿಕ್ ವೆಚ್ಚವನ್ನು ಸರಿದೂಗಿಸಲು ಮತ್ತು ಸಂಸ್ಥೆಯ ಲಾಭದಾಯಕತೆಯನ್ನು ಸುಧಾರಿಸಲು ಈ ಕ್ರಮ ಅನಿವಾರ್ಯ ಎಂದು ಸಂಸ್ಥೆ ಸಮರ್ಥಿಸಿಕೊಂಡಿದೆ. ವಿಶೇಷವೆಂದರೆ, ಸೆಪ್ಟೆಂಬರ್ 2025ರಲ್ಲಿಯೂ ಸಂಸ್ಥೆಯು ದರ ಪರಿಷ್ಕರಣೆ ಮಾಡಿತ್ತು. ಒಂದು ಆರ್ಥಿಕ ವರ್ಷದ ಅವಧಿಯಲ್ಲಿ ಇದು ಎರಡನೇ ಬಾರಿ ಮಾಡಲಾದ ದರ ಏರಿಕೆಯಾಗಿದೆ.

ಸ್ವಿಗ್ಗಿಯೊಂದಿಗೆ ಪೈಪೋಟಿ:
ಝೊಮ್ಯಾಟೋದ ಪ್ರಬಲ ಪ್ರತಿಸ್ಪರ್ಧಿಯಾದ ‘ಸ್ವಿಗ್ಗಿ’ (Swiggy) ಈಗಾಗಲೇ ಪ್ರತಿ ಆರ್ಡರ್‌ಗೆ ತೆರಿಗೆ ಸೇರಿದಂತೆ 14.99 ರೂ. ಪ್ಲಾಟ್‌ಫಾರ್ಮ್ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಈಗ ಝೊಮ್ಯಾಟೋ ಕೂಡ ತನ್ನ ಶುಲ್ಕವನ್ನು 14.90 ರೂ.ಗೆ ಏರಿಸುವ ಮೂಲಕ ಸ್ವಿಗ್ಗಿಗೆ ಸಮನಾದ ದರಪಟ್ಟಿಯನ್ನು ಹೊಂದಿದೆ.
ಬೆಂಗಳೂರಿನಲ್ಲಿ ರಾಪಿಡೋ ‘ಓನ್ಲಿ’ ಎಂಟ್ರಿ:
ಒಂದೆಡೆ ಝೊಮ್ಯಾಟೋ ಮತ್ತು ಸ್ವಿಗ್ಗಿ ದರ ಸಮರ ನಡೆಸುತ್ತಿದ್ದರೆ, ಬೆಂಗಳೂರಿನ ಮೂಲದ ಸ್ಟಾರ್ಟ್-ಅಪ್ ‘ರಾಪಿಡೋ’ (Rapido) ತನ್ನ ಹೊಸ ಸೇವೆ ‘ಓನ್ಲಿ’ (Ownly) ಮೂಲಕ ಮಾರುಕಟ್ಟೆಗೆ ಪ್ರವೇಶಿಸಿದೆ. ಗ್ರಾಹಕರು ಅಥವಾ ರೆಸ್ಟೋರೆಂಟ್‌ಗಳ ಮೇಲೆ ಯಾವುದೇ ಹೆಚ್ಚುವರಿ ಪ್ಲಾಟ್‌ಫಾರ್ಮ್ ಶುಲ್ಕ ವಿಧಿಸುವುದಿಲ್ಲ ಎಂದು ರಾಪಿಡೋ ಘೋಷಿಸಿರುವುದು ಆಹಾರ ಪ್ರಿಯರಲ್ಲಿ ಹೊಸ ಭರವಸೆ ಮೂಡಿಸಿದೆ.
ನಿಮ್ಮ ಮುಂದಿನ ಬಿಲ್ ಹೀಗಿರಬಹುದು:
ನೋಯ್ಡಾದಂತಹ ನಗರಗಳಲ್ಲಿ ಗ್ರಾಹಕರು ಪ್ರತಿ ಆರ್ಡರ್‌ಗೆ ಸುಮಾರು 14.9 ರೂ. ಪ್ಲಾಟ್‌ಫಾರ್ಮ್ ಶುಲ್ಕದ ಜೊತೆಗೆ, ಇತರ ಶುಲ್ಕಗಳನ್ನೂ ಪಾವತಿಸಬೇಕಾಗುತ್ತದೆ:
ಪ್ಲಾಟ್‌ಫಾರ್ಮ್ ಫೀ: 14.90 ರೂ.
ಫೀಡಿಂಗ್ ಇಂಡಿಯಾ ದೇಣಿಗೆ: 3 ರೂ. (ಇದನ್ನು ಗ್ರಾಹಕರು ಬೇಡವೆನ್ನಬಹುದು).
ಪಾರ್ಟ್‌ನರ್ ಫೀ: ಕನಿಷ್ಠ 39 ರೂ. (ಜೊತೆಗೆ ಪ್ರತಿ ಕಿಮೀಗೆ 2 ರೂ.).
ಸಣ್ಣ ಆರ್ಡರ್ ಶುಲ್ಕ: 150 ರೂ.ಗಿಂತ ಕಡಿಮೆ ಮೊತ್ತದ ಆರ್ಡರ್‌ಗಳಿಗೆ 15 ರೂ. ಹೆಚ್ಚುವರಿ ಶುಲ್ಕ.
ಹೋಟೆಲ್ ಪ್ಯಾಕೇಜಿಂಗ್ ಶುಲ್ಕಗಳು ಎಂದಿನಂತೆ ರೆಸ್ಟೋರೆಂಟ್‌ಗಳ ನಿರ್ಧಾರಕ್ಕೆ ಬಿಡಲಾಗಿದ್ದು, ಒಟ್ಟಾರೆಯಾಗಿ ಆನ್‌ಲೈನ್ ಆಹಾರ ಪ್ರಿಯರಿಗೆ ಈ ದರ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.






















