ಬೆಂಗಳೂರು, (www.bengaluruwire.com) : ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ತಾತ್ಕಾಲಿಕ ಕೊಡುಗೆ ನೀಡಿದೆ. ಅದೇನಪ್ಪಾ ಅಂದ್ರೆ, ಒಂದು ಕಡೆ ತನ್ನ ರಾಜಸ್ವ ಸಂಗ್ರಹ ಹೆಚ್ಚಳಕ್ಕೆ ಹಾಗೂ ಮತ್ತೊಂದೆಡೆ ಸ್ಥಿರಾಸ್ತಿ ಖರೀದಿ ಮತ್ತು ಮಾರಾಟ ಮತ್ತಿತರ ಕಾರ್ಯಕ್ಕೆ ಅನುಕೂಲ ಕಲ್ಪಸಲು ಜ.1 ರಿಂದ ಮಾ.31 ರ ತನಕ ರಾಜ್ಯದಲ್ಲಿನ ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿ ದರವನ್ನು ಶೇ.10ರಷ್ಟು ಇಳಿಕೆ ಮಾಡಿದೆ.
ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರು ಜ.1 ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದಾರೆ. ವಿವಿಧ ರೀತಿಯ ದಸ್ತಾವೇಜುಗಳ ನೋಂದಣಿಗೆ ಜ.1 ರಿಂದ ಮಾ.31 ರ ತನಕದ ಅವಧಿಗೆ ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿ ದರಕ್ಕಿಂತ ಶೇ.10 ರಷ್ಟು ಇಳಿಕೆಯಾಗುವ ದರಗಳು ಅನ್ವಯವಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ಸೋಂಕಿನಿಂದ ಸ್ಥಿರಾಸ್ತಿ ಗಳ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದ್ದು ರಿಯಲ್ ಎಸ್ಟೇಟ್ ಉದ್ಯಮ ಸೊರಗಿತ್ತು. ಹೀಗಾಗಿ ರಾಜ್ಯ ಸರ್ಕಾರದ ರಾಜಸ್ವ ಸಂಗ್ರಹ ಕೂಡ ಗುರಿ ತಲುಪುವಲ್ಲಿ ಹಿನ್ನಡೆಯಾಗಿತ್ತು. ಹೀಗಾಗಿ ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಇಳಿಕೆ ಮಾಡಿದರೆ ಅದರ ಪರಿಣಾಮ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ಕಡಿಮೆಯಾಗಲಿದೆ.
ಇದರಿಂದ ಆಸ್ತಿ ಖರೀದಿ, ಮಾರಾ ಮತ್ತಿತರ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಗೆ ಚುರುಕಾಗಲಿದೆ. ಆ ಮೂಲಕ ಸರ್ಕಾರದ ರಾಜಸ್ವ ಸಂಗ್ರಹ ಏರಿಕೆಯಾಗಿ ತನ್ನ ಸಂಪನ್ಮೂಲ ಸಂಗ್ರಹ ಕೊರತೆಯನ್ನು ನೀಗಿಸಬಹುದೆಂಬ ನಿರೀಕ್ಷೆ ಸರ್ಕಾರದ್ದು.

08-12-2021 ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ 2019-20ನೇ ಸಾಲಿನಿಂದ ರಾಜಸ್ವ ಸಂಗ್ರಹದ ಬಗ್ಗೆ ಅವಲೋಕಿಸಿದಾಗ 2,101 ಕೋಟಿ ರೂ. ಕೊರತೆ ಉಂಟಾಗಿರುವಿರುವುದು ಕಂಡುಬಂತು. ಅಲ್ಲದೆ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಅಗತ್ಯವನ್ನು ಕ್ರೆಡಯ್ ಒತ್ತಿ ಹೇಳಿತ್ತು. ಅಲ್ಲದೆ ತನ್ನ ಮನವಿಯಲ್ಲಿ ಸ್ವತ್ತುಗಳ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿರುವುದನ್ನು ಉಲ್ಲೇಖಿಸಿತ್ತು.
ಕೃಷಿ ಜಮೀನು, ಕೃಷಿಯೇತರ ಜಮೀನು, ಮನೆ, ನಿವೇಶನ, ಕಟ್ಟಡ ಹಾಗೂ ಇನ್ನಿತರ ಸ್ತಿರಾಸ್ಥಿಗಳ ಸಂಬಂಧಿಸಿದ ದಸ್ತಾವೇಜುಗಳಾದ ಕ್ರಯ, ದಾನ, ಸ್ವತ್ತಿನ ಅದಲು-ಬದಲು, ಆಸ್ತಿ ವರ್ಗಾವಣೆ, ಅಧಿಕಾರ ಪತ್ರ, ಲೀಸ್, ಸ್ವಾಧೀನ ಸಹಿತ ಕ್ರಯದ ಕರಾರು, ಜಂಟಿ ಅಭಿವೃದ್ಧಿ ಕರಾರು, ಸ್ವಾಧೀನ ಸಹಿತ ಆಧಾರಪತ್ರಗಳು ಸೇರಿದಂತೆ ವಿವಿಧ ರೀತಿಯ ದಸ್ತಾವೇಜುಗಳಿಗೆ ಮಾರ್ಗಸೂಚಿ ದರದ ಆಧಾರದ ಅನ್ವಯ ಶುಲ್ಕ ಪರಿಗಣಿಸುವುದರಿಂದ ಶೇ.10ರಷ್ಟು ಕಡಿತಗೊಳಿಸಿದ ಗೈಡೆನ್ಸ್ ವ್ಯಾಲ್ಯೂ (Guidance Value) ದಸ್ತಾವೇಜು ನೋಂದಣಿ ಶುಲ್ಕದ ಮೇಲೆ ಸಹಜವಾಗಿ ಪರಿಣಾಮ ಬೀರುತ್ತದೆ.
ಸ್ಥಿರಾಸ್ತಿ ಮಾರ್ಗಸೂಚಿ ದರ ವನ್ನು ಕಡಿಮೆ ಮಾಡಿದರೆ ಆಸ್ತಿ ದರಗಳು ಕಡಿಮೆಯಾಗುತ್ತವೆ. ಮಾರ್ಗಸೂಚಿ ದರಕ್ಕೆ ಶೇ.5 ಮುದ್ರಾಂಕ ಶುಲ್ಕ ಮತ್ತು ಶೇ.1 ನೋಂದಣಿ ಶುಲ್ಕವು ಸಂಪರ್ಕ ಇರುವುದರಿಂದ ಸಹಜವಾಗಿ ಅದು ಪರಿಣಾಮದಿಂದ ಶುಲ್ಕವೂ ಇಳಿಕೆಯಾಗಲಿದೆ. ಆಸ್ತಿ ತೆರಿಗೆ ಮತ್ತು ಕಟ್ಟಡ ನಕ್ಷೆ ಮಂಜೂರಾತಿ ಮತ್ತು ನಿರ್ಮಾಣ ಯೋಜನೆ ಮಂಜೂರಾತಿ ಶುಲ್ಕವೂ ಮಾರ್ಗದರ್ಶಿ ಮೌಲ್ಯದ ಆಧಾರದಲ್ಲಿಯೇ ನಿರ್ಣಯವಾಗಲಿದೆ.
ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಪ್ರತಿ ವರ್ಷ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಬೇಕು. ಈ ಹಿಂದೆ ಜನವರಿ 2019ರಲ್ಲಿ ಮಾರ್ಗಸೂಚಿ ದರವನ್ನು ಶೇ. 5ರಿಂದ 24ರವರೆಗೆ ಪರಿಷ್ಕರಿಸಲಾಗಿತ್ತು. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿರಲಿಲ್ಲ. ಈ ಸಂಬಂಧ ಕಳೆದ ಸೆಪ್ಟೆಂಬರ್‌ನಲ್ಲಿ ಉನ್ನತ ಮಟ್ಟದ ಸಭೆ ಕರೆದಿದ್ದ ಕಂದಾಯ ಸಚಿವ ಆರ್. ಆಶೋಕ್, ಸ್ಥಿರಾಸ್ತಿ ಮಾರ್ಗಸೂಚಿಯನ್ನು ಡಿಸೆಂಬರ್ ಹೊತ್ತಿಗೆ ಪರಿಷ್ಕರಿಸಲು ಸೂಚಿಸಿದ್ದರು.























