ಬೆಂಗಳೂರು, ಆ.14 www.bengaluruwire.com: ವಿಜಯನಗರ ಜಿಲ್ಲೆಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಲು ತಮಗೆ ಸಮಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ವಿಷಯ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪಚುನಾವಣೆ ಮತ್ತು ಪಕ್ಷದ ಸಂಘಟನಾ ಕಾರ್ಯಗಳಲ್ಲಿ ಬ್ಯುಸಿಯಾಗಿರುವುದರಿಂದ ಧ್ವಜಾರೋಹಣ ಕಾರ್ಯಕ್ರಮದಿಂದ ವಿನಾಯಿತಿ ನೀಡುವಂತೆ ಜಮೀರ್ ಅಹ್ಮದ್ ಖಾನ್ ಅವರು ಆಗಸ್ಟ್ 13ರಂದು ಸಿಎಂಗೆ ಪತ್ರ ಬರೆದಿದ್ದರು. ಈ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ಪಕ್ಷವನ್ನು ‘ದೇಶದ್ರೋಹಿಗಳ ಪಕ್ಷ’ ಎಂದು ಜರೆದಿದ್ದಾರೆ. “ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಪವಿತ್ರ ಕರ್ತವ್ಯಕ್ಕಿಂತ ಪಕ್ಷದ ರಾಜಕೀಯವೇ ಸಚಿವರಿಗೆ ದೊಡ್ಡದಾಯಿತೇ? ರಾಷ್ಟ್ರಧ್ವಜ ಹಾರಿಸುವುದನ್ನೂ ಹೊರೆ ಎಂದು ಭಾವಿಸುವ ಸಚಿವರಿಗೆ ಸಂಪುಟದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಾದ ಭುಗಿಲೇಳುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ವಿಜಯನಗರ ಜಿಲ್ಲೆಯ ಧ್ವಜಾರೋಹಣದ ಜವಾಬ್ದಾರಿಯನ್ನು ಸಚಿವ ಜಮೀರ್ ಅಹ್ಮದ್ ಅವರಿಂದ ಬದಲಿಸಿ, ಸಚಿವ ಬಸವಂತಪ್ಪ ಅವರಿಗೆ ನಿಯೋಜಿಸಿ ತಕ್ಷಣವೇ ಪರಿಷ್ಕೃತ ಆದೇಶವನ್ನು ಹೊರಡಿಸಿದೆ.

ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವಾಗಲೇ ಸಚಿವರೊಬ್ಬರು ಇಂತಹ ವಿವಾದಾತ್ಮಕ ನಿರ್ಧಾರ ಕೈಗೊಂಡಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ. ಈ ಘಟನೆಯು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಸಮರಕ್ಕೆ ನಾಂದಿ ಹಾಡಿದೆ.

















