ಬೆಂಗಳೂರು, ಆ.8 www.bengaluruwire.com: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)ಯ ಬದಲಾದ ರೂಪ ‘ವಿಬಿಜಿ ರಾಮ್ ಜಿ’ ಅಡಿ ಅರ್ಹ ಫಲಾನುಭವಿಗಳಿಗೆ ಉದ್ಯೋಗ ಒದಗಿಸಲು, ಒಂದು ವಾರದೊಳಗೆ ರಾಜ್ಯಾದ್ಯಂತ ‘ಜಾಬ್ ಕಾರ್ಡ್ ಮೇಳ’ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಕುರಿತು ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ನಿರ್ದೇಶನ ನೀಡಿರುವ ಸಚಿವರು, ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಉದ್ಯೋಗದ ಚೀಟಿ (Job Card) ಗಳನ್ನು ರದ್ದುಗೊಳಿಸಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ಕಾರಣಕ್ಕೂ ಬಡ ಗ್ರಾಮೀಣ ಕುಟುಂಬಗಳಿಗೆ ಅನ್ಯಾಯವಾಗದಂತೆ ಎಚ್ಚರವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.
ತಕ್ಷಣವೇ ಜಾಬ್ ಕಾರ್ಡ್ ವಿತರಣೆಗೆ ಆದೇಶ:
ಹೊಸದಾಗಿ ಉದ್ಯೋಗ ಬಯಸುವ ರಾಜ್ಯದ ಎಲ್ಲ ಅರ್ಹ ಗ್ರಾಮೀಣ ಕುಟುಂಬಗಳ ಫಲಾನುಭವಿಗಳಿಗೆ ತಕ್ಷಣವೇ ಉದ್ಯೋಗ ಚೀಟಿ ನೀಡಲು ರಾಜ್ಯದ 5927 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಮೇಳ ಆಯೋಜಿಸಲಾಗುತ್ತಿದೆ.

ವಿಶೇಷ ಆದ್ಯತೆ ಪಡೆಯುವ ಫಲಾನುಭವಿಗಳು:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು (SC/ST)
ಅಲ್ಪಸಂಖ್ಯಾತರು
ವಿಶೇಷ ಚೇತನರು
ಮಹಿಳಾ ನೇತೃತ್ವದ ಕುಟುಂಬದವರು
ಭೂ ರಹಿತ ಕೂಲಿ ಕಾರ್ಮಿಕರು
ಅನುದಾನದ ಕೊರತೆಯಿಲ್ಲ: 1000 ಕೋಟಿ ರೂ. ಬಿಡುಗಡೆ
ಗ್ರಾಮೀಣ ಜನರಿಗೆ ಕೂಲಿ ನೀಡಲು ಸರ್ಕಾರದ ಬಳಿ ಹಣದ ಕೊರತೆಯಿಲ್ಲ ಎಂಬುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ. ವಿಬಿಜಿ ರಾಮ್ ಜಿ ಯೋಜನೆಯಡಿ ಒಟ್ಟು 2900 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಕೇಂದ್ರ ಸರ್ಕಾರದ ಪಾಲು (ಶೇ.60): 1700 ಕೋಟಿ ರೂ.
ರಾಜ್ಯ ಸರ್ಕಾರದ ಪಾಲು (ಶೇ.40): 1200 ಕೋಟಿ ರೂ. ಇದರಲ್ಲಿ ಈಗಾಗಲೇ ಕೂಲಿ ನೀಡಿಕೆಗಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ 1000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಅಧಿಕಾರಿಗಳಿಗೆ ಎಚ್ಚರಿಕೆ:
ಸರ್ಕಾರ ಅಗತ್ಯ ಅನುದಾನ ನೀಡಿದ್ದರೂ ಹಾಗೂ ಹಣದ ಕೊರತೆ ಇಲ್ಲದಿದ್ದರೂ, ಕೆಲವು ಗ್ರಾಮ ಪಂಚಾಯತಿಗಳಲ್ಲಿ ‘ವಿಬಿಜಿ ರಾಮ್ ಜಿ’ ಯೋಜನೆಯ ಅನುಷ್ಠಾನ ತೃಪ್ತಿದಾಯಕವಾಗಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಈ ವಿಳಂಬ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಈಶ್ವರ ಖಂಡ್ರೆ, ಗ್ರಾಮೀಣ ಜನತೆಗೆ ತ್ವರಿತವಾಗಿ ಉದ್ಯೋಗ ಖಾತ್ರಿ ಒದಗಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.




















