ಬೆಂಗಳೂರು, ಆ.07 www.bengaluruwire.com: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (NPKL) ನಿರ್ಮಿಸಲಾದ ನೂತನ ಮೇಜರ್ ಆರ್ಟಿಯಲ್ ರಸ್ತೆಯ (MAR) ಪಾದಚಾರಿ ಮಾರ್ಗದ ಕಳಪೆ ಕಾಮಗಾರಿ ಕುರಿತು ‘ಬೆಂಗಳೂರು ವೈರ್’ (Bengaluru Wire) ಪ್ರಕಟಿಸಿದ್ದ ವರದಿಗೆ ಭಾರಿ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತ್ವರಿತ ಕ್ರಮ ಕೈಗೊಂಡಿದೆ.
ಆಗಸ್ಟ್ 06 ರಂದು ಪ್ರಕಟವಾದ “ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು” ಎಂಬ ವರದಿಯ ಬೆನ್ನಲ್ಲೇ ಬಿಡಿಎ ಅಧಿಕಾರಿಗಳು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ, ಅಪಾಯಕಾರಿಯಾಗಿ ತೆರೆದುಕೊಂಡಿದ್ದ ಸ್ಲಾಬ್‌ಗಳನ್ನು ತೆರವುಗೊಳಿಸಿ ಹೊಸ ಕಾಂಕ್ರೀಟ್ ಸ್ಲಾಬ್‌ಗಳನ್ನು ಅಳವಡಿಸಿದ್ದಾರೆ.
ವರದಿಯ ಪ್ರಮುಖ ಫಲಶ್ರುತಿಗಳು (Impact):
ರಾತ್ರೋರಾತ್ರಿ ದುರಸ್ತಿ ಕಾರ್ಯ: ವರದಿ ಪ್ರಕಟವಾದ ದಿನವೇ (ಆಗಸ್ಟ್ 06) ರಾತ್ರಿ ಬಿಡಿಎ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಗುಣಮಟ್ಟವಿಲ್ಲದ ಕಾಂಕ್ರೀಟ್ ಕಿತ್ತುಬಂದು ದೊಡ್ಡ ರಂಧ್ರ ಬಿದ್ದಿದ್ದ ಜಾಗದಲ್ಲಿ ಹೊಸದಾಗಿ ಭದ್ರವಾದ ಕಾಂಕ್ರೀಟ್ ಸ್ಲಾಬ್‌ಗಳನ್ನು ಅಳವಡಿಸಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.

ಆಯುಕ್ತರಿಂದ ನೋಟಿಸ್ ಜಾರಿ: ಕಳಪೆ ಕಾಮಗಾರಿಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್, ಕರ್ತವ್ಯ ಲೋಪವೆಸಗಿದ ಸಂಬಂಧಪಟ್ಟ ಬಿಡಿಎ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಾರಣ ಕೇಳಿ ತಕ್ಷಣವೇ ನೋಟಿಸ್ ಜಾರಿ ಮಾಡಿದ್ದಾರೆ.
ತನಿಖೆಗೆ ಆದೇಶ: ಕೇವಲ ದುರಸ್ತಿ ಮಾತ್ರವಲ್ಲದೆ, ಲಕ್ಷಾಂತರ ರೂಪಾಯಿ ವೆಚ್ಚದ ಈ ಕಾಮಗಾರಿಯಲ್ಲಿ ನಡೆದಿರುವ ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರು ವೈರ್ ಬದ್ಧತೆ:
ಸಿಎಂ ಉದ್ಘಾಟಿಸಿದ್ದ 320 ಅಡಿ ಅಗಲದ ರಸ್ತೆಯಲ್ಲಿ ಕೇವಲ ಒಂದೇ ತಿಂಗಳಲ್ಲಿ ಕಾಂಕ್ರೀಟ್ ಉದುರಿ, ಪ್ಲೈವುಡ್/ಶೀಟ್ ಕಾಣಿಸುತ್ತಿದ್ದ ಆಘಾತಕಾರಿ ದೃಶ್ಯವನ್ನು ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ‘ಬೆಂಗಳೂರು ವೈರ್’ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು.
ಸ್ವತಂತ್ರ ಮತ್ತು ವಾಸ್ತವ ಸುದ್ದಿಯೊಂದಿಗೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕನ್ನಡಿ ಹಿಡಿದು, ಆಡಳಿತ ಯಂತ್ರವನ್ನು ಎಚ್ಚರಿಸುವ ನಮ್ಮ ಕಾರ್ಯಕ್ಕೆ ದೊರೆತ ಜಯ ಇದಾಗಿದೆ. ನಾಡಿನ ಹಿತ ಕಾಯುವ ನಿಟ್ಟಿನಲ್ಲಿ ನಮ್ಮ ಈ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ.




















