ಬೆಂಗಳೂರು, ಜೂ.24 www.bengaluruwire.com: ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಹಬ್ ಆಗಿ ಗುರುತಿಸಿಕೊಂಡಿರುವ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ಮೂಲಸೌಕರ್ಯದ ಅಸಲಿ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ.
ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಉಂಟಾದ ಏಕಾಏಕಿ ತಾಂತ್ರಿಕ ದೋಷ ಇಡೀ ನಗರವನ್ನು ತಲ್ಲಣಗೊಳಿಸಿದ್ದು, ಭಾರಿ ಪ್ರಮಾಣದಲ್ಲಿ ತೆರಿಗೆ ಪಾವತಿಸುವ ಐಟಿ ಉದ್ಯೋಗಿಗಳು ಹಾಗೂ ಸಾರ್ವಜನಿಕರು ಮನೆ ಸೇರಲು ಲಾರಿ, ಟ್ರ್ಯಾಕ್ಟರ್‌ಗಳನ್ನು ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ.
ಐಟಿ ಮಂದಿ ಲಾರಿ ಹಾಗೂ ಟ್ರ್ಯಾಕ್ಟರ್‌ಗಳನ್ನೇರಿ ಪ್ರಯಾಣ:

ಮಂಗಳವಾರ ಸಂಜೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದಿಂದಾಗಿ ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. ಕಚೇರಿ ಮುಗಿಸಿ ಮನೆಗೆ ಮರಳಬೇಕಿದ್ದ ಸಾವಿರಾರು ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸಿಲುಕಿಕೊಳ್ಳುವಂತಾಯಿತು. ಈ ವೇಳೆ ಪರ್ಯಾಯ ವ್ಯವಸ್ಥೆ ಇಲ್ಲದೆ ರಸ್ತೆಗಿಳಿದ ಜನರಿಗೆ ಆಟೋ ಮತ್ತು ಕ್ಯಾಬ್‌ಗಳ ಸೌಲಭ್ಯವೂ ಸಿಗಲಿಲ್ಲ. ದುಬಾರಿ ದರ ಕೇಳಿದ ಆಟೋ ಚಾಲಕರು ಹಾಗೂ ರೈಡ್ ಕ್ಯಾನ್ಸಲ್ ಮಾಡಿದ ಕ್ಯಾಬ್‌ಗಳಿಂದ ಬೇಸತ್ತ ಸಾರ್ವಜನಿಕರು, ರಸ್ತೆಯಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಲಾರಿ ಹಾಗೂ ಟ್ರ್ಯಾಕ್ಟರ್‌ಗಳನ್ನೇರಿ ಪ್ರಯಾಣ ಬೆಳೆಸಿದರು.


ಜಾಗತಿಕ ಮಟ್ಟದಲ್ಲಿ ಎಐ, ಸ್ಮಾರ್ಟ್ ಮೊಬಿಲಿಟಿ ಮತ್ತು ಇವಿ ತಂತ್ರಜ್ಞಾನದ ಬಗ್ಗೆ ಮಾತನಾಡುವ ನಗರದಲ್ಲಿ, ಸಾರ್ವಜನಿಕ ಸಾರಿಗೆಯ ಒಂದು ಸಣ್ಣ ವೈಫಲ್ಯ ಇಡೀ ವ್ಯವಸ್ಥೆಯನ್ನೇ ಕುಸಿಯುವಂತೆ ಮಾಡಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೆಟ್ರೋ ಸೇವೆ ಪುನರಾರಂಭ:
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಮೆಟ್ರೋ ತಾಂತ್ರಿಕ ಸಿಬ್ಬಂದಿ ಯಶಸ್ವಿಯಾಗಿ ಸರಿಪಡಿಸಿದ್ದಾರೆ. ಇಂದು ಅಂದರೆ ಜೂ.24ರ ಬುಧವಾರ ಬೆಳಿಗ್ಗೆ 5:00 ಗಂಟೆಯಿಂದ ನೇರಳೆ ಮಾರ್ಗದಾದ್ಯಂತ ಮೆಟ್ರೋ ರೈಲು ಸಂಚಾರವು ನಿಯಮಿತ ವೇಳಾಪಟ್ಟಿಯಂತೆ ಪುನರಾರಂಭಗೊಂಡಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ರೈಲು ಸಂಚಾರ ಯಥಾಸ್ಥಿತಿಗೆ ಮರಳಿದ್ದರೂ, ಪ್ರತಿ ಬಾರಿ ಮೆಟ್ರೋ ಕೈಕೊಟ್ಟಾಗಲೂ ಇಡೀ ನಗರವೇ ಸಂಚಾರ ಸಂಕಷ್ಟಕ್ಕೆ ಸಿಲುಕುವ ಈ ಅವಾಂತರಕ್ಕೆ ಶಾಶ್ವತ ಪರಿಹಾರ ಯಾವಾಗ ಎಂಬ ಪ್ರಶ್ನೆ ನಾಗರಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.
ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಅಸಮಾಧಾನ:
ಈ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ಮೆಟ್ರೋ ಅಡಚಣೆಗಳು ಆತಂಕಕಾರಿಯಾಗಿ ಆಗಾಗ್ಗೆ ಆಗುತ್ತಿವೆ. ಮತ್ತು ಪ್ರತಿ ಬಾರಿ ಮೆಟ್ರೋ ವಿಫಲವಾದಾಗ, ಇಡೀ ನಗರವು ಅವ್ಯವಸ್ಥೆಗೆ ಸಿಲುಕುತ್ತದೆ. ಕ್ಯಾಬ್‌ಗಳು ಕಣ್ಮರೆಯಾಗುತ್ತವೆ. ಆಟೋಗಳು ಸವಾರಿ ಮಾಡಲು ನಿರಾಕರಿಸುತ್ತವೆ. ನಾಗರಿಕರು ಸಿಲುಕಿಕೊಂಡಿದ್ದರು.
ನಿನ್ನೆ, ದೇಶದ ಸಿಲಿಕಾನ್ ವ್ಯಾಲಿಯಲ್ಲಿ ಶ್ರಮಶೀಲ ವೃತ್ತಿಪರರು ಕೆಲಸ ಮುಗಿಸಿ ಮನೆಗೆ ಹೋಗಲು ಟ್ರಕ್‌ಗಳು ಮತ್ತು ಲಾರಿಗಳಲ್ಲಿ ಪ್ರಯಾಣಿಸಿದರು.”
“ಅವರು ನಾಳೆ ಎಚ್ಚರಗೊಳ್ಳುತ್ತಾರೆ, ಕಚೇರಿಗೆ ಹಿಂತಿರುಗುತ್ತಾರೆ, ತೆರಿಗೆಗಳನ್ನು ಪಾವತಿಸುತ್ತಾರೆ ಮತ್ತು ಅದೇ ಮುರಿದ ವ್ಯವಸ್ಥೆಯನ್ನು ಮತ್ತೆ ಸಹಿಸಿಕೊಳ್ಳುತ್ತಾರೆ” ಎಂದು ವ್ಯಂಗ್ಯವಾಗಿ ಬಿಎಂಆರ್ ಸಿಎಲ್ ವ್ಯವಸ್ಥೆ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




















