ಬೆಂಗಳೂರು, ಜೂ.07 www.bengaluruwire.com: ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಿಗೆ ನೀಡಲಾಗುತ್ತಿದ್ದ ಅಂಚೆ ರಿಯಾಯಿತಿಯನ್ನು (Postal Discount) ತಕ್ಷಣವೇ ಮರುಸ್ಥಾಪಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ನಿಯತಕಾಲಿಕೆಗಳಿಗೆ ಎದುರಾಗಿರುವ ಈ ಆರ್ಥಿಕ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
ಹೊಸ ಆದೇಶದಿಂದ ಹತ್ತು ಪಟ್ಟು ಹೆಚ್ಚಳವಾದ ವಿತರಣಾ ವೆಚ್ಚ:
ಅಂಚೆ ಇಲಾಖೆಯು ಇತ್ತೀಚೆಗೆ ಹೊರಡಿಸಿದ PO ORDER-PO/01/2024 (ದಿನಾಂಕ 16 ಡಿಸೆಂಬರ್ 2024) ಆದೇಶದ ಪ್ರಕಾರ, ಅಂಚೆ ರಿಯಾಯಿತಿ ಪಡೆಯಲು ಪತ್ರಿಕೆಗಳು ಪ್ರತಿದಿನ ಅಥವಾ ಕನಿಷ್ಠ ವಾರಕ್ಕೊಮ್ಮೆ ಪ್ರಕಟವಾಗಬೇಕು ಎಂಬ ಹೊಸ ನಿಯಮ ಜಾರಿಗೆ ತರಲಾಗಿದೆ. ಇದರ ನೇರ ಪರಿಣಾಮವಾಗಿ, ನಿಯಮಿತವಾಗಿ ಪ್ರಕಟವಾಗುತ್ತಿದ್ದ ಪಾಕ್ಷಿಕ ಹಾಗೂ ಮಾಸಿಕ ನೋಂದಾಯಿತ ನಿಯತಕಾಲಿಕೆಗಳು ರಿಯಾಯಿತಿ ಸೌಲಭ್ಯದಿಂದ ವಂಚಿತವಾಗಿವೆ.

ಈ ದಿಢೀರ್ ಕ್ರಮದಿಂದಾಗಿ ಸಣ್ಣ ಮತ್ತು ಮಧ್ಯಮ ಪ್ರಕಾಶಕರಿಗೆ ಆರ್ಥಿಕ ಹೊರೆ ವಿಪರೀತವಾಗಿದೆ. ಹಿಂದೆ ಕೇವಲ 50 ಪೈಸೆ ದರದಲ್ಲಿ ವಿತರಣೆ ಮಾಡಲಾಗುತ್ತಿದ್ದ ಪ್ರತಿಗಳಿಗೆ, ಇದೀಗ ₹4 ರಿಂದ ₹5 ರವರೆಗೆ ಅಂಚೆ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ವಿತರಣಾ ವೆಚ್ಚ ಹತ್ತು ಪಟ್ಟು ಹೆಚ್ಚಳವಾದಂತಾಗಿದ್ದು, ಪ್ರಕಾಶಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಜನತೆಯ ಮಾಹಿತಿ ಕೊಂಡಿ ಈ ನಿಯತಕಾಲಿಕೆಗಳು:
ಗ್ರಾಮೀಣ ಸಮಸ್ಯೆಗಳು, ಸಾಮಾಜಿಕ ಜಾಗೃತಿ, ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪಾಕ್ಷಿಕ ಮತ್ತು ಮಾಸಿಕ ಪತ್ರಿಕೆಗಳ ಪಾತ್ರ ಹಿರಿದು. “ಗ್ರಾಮೀಣ ಜನತೆ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಪ್ರಕಟಣೆಗಳು, ಇಂದಿಗೂ ಡಿಜಿಟಲ್ ಮಾಧ್ಯಮದ ಪ್ರವೇಶವಿಲ್ಲದ ಲಕ್ಷಾಂತರ ಓದುಗರಿಗೆ ಪ್ರಮುಖ ಮಾಹಿತಿ ಮೂಲಗಳಾಗಿವೆ” ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ನಿಯತಕಾಲಿಕೆಗಳು ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ. ಕೇವಲ ಪ್ರಕಟಣೆಯ ಅವಧಿಯನ್ನು (ಪಾಕ್ಷಿಕ/ಮಾಸಿಕ) ಆಧಾರವಾಗಿಟ್ಟುಕೊಂಡು ಈ ರಿಯಾಯಿತಿಯನ್ನು ನಿರಾಕರಿಸುವುದು ಸರಿಯಲ್ಲ. ಬದಲಾಗಿ, ಎಲ್ಲಾ ನೋಂದಾಯಿತ ನಿಯತಕಾಲಿಕೆಗಳಿಗೂ ಅಂಚೆ ರಿಯಾಯಿತಿ ಸೌಲಭ್ಯವನ್ನು ಮುಂದುವರಿಸಬೇಕು ಎಂದು ಆಗ್ರಹಿಸಲಾಗಿದೆ.
ಆದೇಶ ಮರುಪರಿಶೀಲನೆಗೆ ಆಗ್ರಹ:
ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ಈ ಕೂಡಲೇ ತನ್ನ ಆದೇಶವನ್ನು ಮರುಪರಿಶೀಲಿಸಬೇಕು. ಆ ಮೂಲಕ ದೇಶದಾದ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಸಣ್ಣ ಮತ್ತು ಮಧ್ಯಮ ಪ್ರಕಾಶಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಒತ್ತಾಯಿಸಿದ್ದಾರೆ.


















