ಬೆಂಗಳೂರು, ಜೂ.07 www.bengaluruwire.com: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಬೆಂಗಳೂರಿನ ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಇನ್ಸ್ಟಿಟ್ಯೂಟ್ ವರೆಗೆ ‘ನಮ್ಮ ಮೆಟ್ರೋ’ ರೈಲಿನಲ್ಲಿ ಪ್ರಯಾಣ ಬೆಳೆಸಿ ಗಮನ ಸೆಳೆದರು. ಬಳಿಕ ಅಲ್ಲಿಂದ ಕಾರಿನ ಮೂಲಕ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಕೃತಜ್ಞತಾ ಸಮರ್ಪಣಾ ಪ್ರವಾಸ ಕೈಗೊಂಡರು.
ಮೆಟ್ರೋದಲ್ಲಿ ವಿದ್ಯಾರ್ಥಿಗಳೊಂದಿಗೆ ಸಿಎಂ ಸಂವಾದ:
ಭಾನುವಾರ ಬೆಳಗ್ಗೆ 10:30ರ ಸುಮಾರಿಗೆ ವಿಧಾನಸೌಧದಿಂದ ಮೆಟ್ರೋ ಏರಿದ ಮುಖ್ಯಮಂತ್ರಿಗಳು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಕೈಕುಲುಕಿ ಅವರ ವಿದ್ಯಾಭ್ಯಾಸ ಮತ್ತು ಮುಂದಿನ ಭವಿಷ್ಯದ ಗುರಿಗಳ ಬಗ್ಗೆ ಕುತೂಹಲದಿಂದ ಕೇಳಿ ತಿಳಿದುಕೊಂಡರು. ಇದೇ ವೇಳೆ ಹಲವು ಪ್ರಯಾಣಿಕರು ಮುಖ್ಯಮಂತ್ರಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋದಲ್ಲಿ ಸಾಗಿದ ಅವರು, ನಂತರ ರಸ್ತೆ ಮಾರ್ಗವಾಗಿ ಕನಕಪುರದತ್ತ ತೆರಳಿದರು.

40 ವರ್ಷಗಳ ಒಡನಾಟ: ಜನತೆಗೆ ಕೃತಜ್ಞತೆ:

ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ಡಿ.ಕೆ. ಶಿವಕುಮಾರ್ ಅವರು ಆಗಮಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕಳೆದ 40 ವರ್ಷಗಳಿಗೂ ಹೆಚ್ಚು ಕಾಲದಿಂದ ಸಾತನೂರು, ದೊಡ್ಡ ಆಲಹಳ್ಳಿ ಹಾಗೂ ಕನಕಪುರ ಸೇರಿದಂತೆ ಈ ಭಾಗದ ಜನತೆ ನನ್ನನ್ನು ಸತತವಾಗಿ ಗೆಲ್ಲಿಸಿ ವಿಧಾನಸೌಧದ ಮೆಟ್ಟಿಲು ಹತ್ತುವಂತೆ ಮಾಡಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಲು ಬರುವ ಬದಲು, ನಾನೇ ಅವರ ಬಳಿಗೆ ಹೋಗಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ,” ಎಂದು ತಿಳಿಸಿದರು.
ಕ್ಷೇತ್ರದ ಜನತೆಯ ಭಾವನೆ ಮತ್ತು ಆಶೋತ್ತರಗಳಿಗೆ ಸ್ಪಂದಿಸುವುದು ತಮ್ಮ ಕರ್ತವ್ಯ ಎಂದ ಸಿಎಂ, ಜನರ ಅಹವಾಲುಗಳನ್ನು ತ್ವರಿತವಾಗಿ ಆಲಿಸಿ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುವಂತೆ ಶೀಘ್ರದಲ್ಲೇ ಪ್ರತ್ಯೇಕ ಅಧಿಕಾರಿಯೊಬ್ಬರನ್ನು ನೇಮಕ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂಬ ಭರವಸೆ ನೀಡಿದರು.
ಹಾರೋಹಳ್ಳಿಯಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ:

ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಯಲ್ಲಿ ಭಾನುವಾರ ತಮ್ಮ ಕೃತಜ್ಞತಾ ಸಮರ್ಪಣಾ ಪ್ರವಾಸ ಆರಂಭಿಸುವ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಅವರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಮೂಲ್ ಅಧ್ಯಕ್ಷ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಡಿ.ಕೆ. ಸುರೇಶ್, ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಸುಧಾಮದಾಸ್, ಮುಖಂಡರಾದ ದುಂತೂರು ವಿಶ್ವನಾಥ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
20ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ:

ಭಾನುವಾರ ದಿನವಿಡೀ ಕೃತಜ್ಞತಾ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ ಹಾರೋಹಳ್ಳಿ ವೃತ್ತದಿಂದ ಆರಂಭಗೊಂಡು ತುಂಗಣಿ, ಟಿ.ಬೆಕುಪ್ಪೆ, ನಾರಾಯಣಪುರ, ಕೋಡಿಹಳ್ಳಿ ಸೇರಿದಂತೆ ಕನಕಪುರದವರೆಗೆ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಲಿದ್ದಾರೆ. ಪ್ರತಿಯೊಂದು ಗ್ರಾಮದಲ್ಲೂ ಅರ್ಧಗಂಟೆಗೂ ಹೆಚ್ಚು ಕಾಲ ಕಳೆದು, ಜನರೊಂದಿಗೆ ಸಂವಾದ ನಡೆಸಿ ಅವರ ಅಹವಾಲುಗಳನ್ನು ಆಲಿಸಲಿದ್ದಾರೆ. ರಾತ್ರಿಯವರೆಗೂ ಈ ಕಾರ್ಯಕ್ರಮ ಮುಂದುವರಿಯಲಿದೆ.


















