ಬೆಂಗಳೂರು, ಜೂ.06 www.bengaluruwire.com: ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ನಗರವು ಇತ್ತೀಚೆಗೆ ‘ಗಾರ್ಬೇಜ್ ಸಿಟಿ’ (ಕಸದ ನಗರಿ) ಯಾಗಿ ಮಾರ್ಪಡುತ್ತಿದ್ದು, ನಗರದ ಘನತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಭಾರೀ ಅವ್ಯವಹಾರದ ಆರೋಪದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರವು ನಾಲ್ವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಿ ಸರ್ಕಾರ ಜೂನ್ 4 ರಂದು ಅಧಿಕೃತ ಆದೇಶ ಹೊರಡಿಸಿದೆ.
ವಿಪಕ್ಷ ನಾಯಕರ ಗಂಭೀರ ಆರೋಪ:
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ವತಿಯಿಂದ ಕರೆಯಲಾಗಿದ್ದ 33 ಪ್ಯಾಕೇಜ್‌ಗಳ ಟೆಂಡರ್‌ನಲ್ಲಿ ಕನಿಷ್ಠ ಅರ್ಹತೆ ಇಲ್ಲದ ಗುತ್ತಿಗೆದಾರರನ್ನು ತಾಂತ್ರಿಕ ಸಮಿತಿಯು ಕಾನೂನುಬಾಹಿರವಾಗಿ ಅರ್ಹಗೊಳಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಅನುಭವದ ಕೊರತೆ, ಹಣಕಾಸು ದಾಖಲೆಗಳ ಲೋಪ ಹಾಗೂ ತಾಂತ್ರಿಕ ಸಾಮರ್ಥ್ಯವಿಲ್ಲದ ಕಂಪನಿಗಳಿಗೆ ಮಣೆ ಹಾಕಲಾಗಿದೆ ಎಂದು ಅವರು ದೂರಿದ್ದರು. ಅಲ್ಲದೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಲೋಕಾಯುಕ್ತ ತನಿಖೆ ಮುಗಿಯುವವರೆಗೆ ಟೆಂಡರ್ ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.


ಮೇ.08ರಂದು ಬೆಂಗಳೂರು ವೈರ್ ಈ ಕುರಿತಂತೆ “BW EXCLUSIVE | ಬೆಂಗಳೂರಿನ BSWML ಸಾವಿರ ಕೋಟಿ ಅಕ್ರಮ ಆರೋಪ – ಕಸದ ಟೆಂಡರ್ ರದ್ಧತಿಗೆ, ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮುಖ್ಯ ಕಾರ್ಯದರ್ಶಿಗೆ ಪತ್ರ” ಎಂಬ ಶೀರ್ಷಿಕೆಯಡಿ ಎಕ್ಸ್ ಕ್ಲೀಸಿವ್ ಸುದ್ದಿ ಪ್ರಕಟಿಸಿತ್ತು.
ಮಾಧ್ಯಮಗಳ ವರದಿ ಹಾಗೂ ಸರ್ಕಾರದ ಎಚ್ಚರಿಕೆ:
ಬೆಂಗಳೂರಿನಲ್ಲಿ ಕಸದ ಅವೈಜ್ಞಾನಿಕ ನಿರ್ವಹಣೆ ಹಾಗೂ ಘನತ್ಯಾಜ್ಯ ವಿಲೇವಾರಿಯಲ್ಲಿನ ಅಕ್ರಮಗಳ ಬಗ್ಗೆ ಮಾಧ್ಯಮಗಳಲ್ಲಿಯೂ ಸಾಲು ಸಾಲಾಗಿ ವರದಿಗಳು ಪ್ರಕಟವಾಗಿದ್ದವು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕರೆಯಲಾಗಿರುವ ಟೆಂಡರ್‌ಗಳ ಸಮಗ್ರ ಪರಿಶೀಲನೆಗೆ ಮುಂದಾಗಿದೆ.
ಸಮಿತಿಯ ರಚನೆ ಮತ್ತು ಜವಾಬ್ದಾರಿ:
ಸರ್ಕಾರದ ಆದೇಶದ (ಸಂಖ್ಯೆ: ನಅಇ 335 ಎಂಎನ್‌ವೈ 2026 (ಇ), ದಿನಾಂಕ: 04-06-2026) ಪ್ರಕಾರ, ಸಮಿತಿಯ ಅಧ್ಯಕ್ಷರಾಗಿ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಅಂಜುಂ ಪರ್ವೇಜ್ ಅವರನ್ನು ನೇಮಿಸಲಾಗಿದೆ. ಉಳಿದಂತೆ ಸಮಿತಿಯ ಇತರ ಸದಸ್ಯರು ಹೀಗಿದ್ದಾರೆ:
* ಡಾ. ಪಿ.ಸಿ. ಜಾಫರ್ (ಸರ್ಕಾರದ ಕಾರ್ಯದರ್ಶಿ, ಆರ್ಥಿಕ ಇಲಾಖೆ) – ಸದಸ್ಯರು.
* ಮುಖ್ಯ ಅಭಿಯಂತರರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ – ಸದಸ್ಯರು.
* ಶ್ರೀ ಎಂ. ಮಹೇಶ್ವರ ರಾವ್ (ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ) – ಸದಸ್ಯ ಕಾರ್ಯದರ್ಶಿ.
ವರದಿ ನೀಡಲು 7 ದಿನಗಳ ಗಡುವು:
ಈ ಸಮಿತಿಯು ಆರ್ಥಿಕ ಇಲಾಖೆ ತಿಳಿಸಿರುವ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಟೆಂಡರ್ ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿ 7 ದಿನಗಳ ಒಳಗಾಗಿ ಸರ್ಕಾರಕ್ಕೆ (ನಗರಾಭಿವೃದ್ಧಿ ಇಲಾಖೆಗೆ) ವರದಿಯನ್ನು ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಸಮಿತಿಗೆ ಅಗತ್ಯವಿರುವ ಎಲ್ಲಾ ರೀತಿಯ ಆಡಳಿತಾತ್ಮಕ ನೆರವು, ಮಾಹಿತಿ ಹಾಗೂ ದಾಖಲೆಗಳನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಸಂಸ್ಥೆಯು ಒದಗಿಸಬೇಕೆಂದು ಸೂಚಿಸಲಾಗಿದೆ.
ಲೋಕಾಯುಕ್ತರಿಂದ ಬಿಎಸ್ ಡಬ್ಲ್ಯುಎಂಎಲ್ ಗೆ ಕ್ಲಾಸ್:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸೂಕ್ತ ರೀತಿಯಲ್ಲಿ ನಿರ್ವಹಿಸದೇ ಇರುವುದರಿಂದ ದಿನದಿಂದ ದಿನಕ್ಕೆ ಬ್ಲಾಕ್ ಸ್ಪಾಟ್‌ಗಳು ಹೆಚ್ಚಾಗುತ್ತಿರುವ ಬಗ್ಗೆ ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಶುಕ್ರವಾರವಷ್ಟೇ (ಜೂ.05) ಲೋಕಾಯುಕ್ತರು ಖುದ್ದಾಗಿ ನಗರದಲ್ಲಿ ಸಂಚರಿಸಿ ಕಸದ ಬ್ಲಾಕ್ ಸ್ಪಾಟ್ ಗಳನ್ನು ಗುರ್ತಿಸಿ ಬಿಎಸ್ ಡಬ್ಲ್ಯುಎಂಎಲ್ ಹಾಗೂ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
















