ಬೆಂಗಳೂರು, ಜೂ.04 www.bengaluruwire.com: ‘ಬ್ರ್ಯಾಂಡ್ ಬೆಂಗಳೂರು’ ದೃಷ್ಟಿಕೋನವನ್ನು ಸಾಕಾರಗೊಳಿಸುವ ಹಾಗೂ ನಗರದ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಮಹತ್ವಾಕಾಂಕ್ಷಿ ಹೆಜ್ಜೆಯನ್ನಿಟ್ಟಿದೆ.
ಸಿಲಿಕಾನ್ ಸಿಟಿಯನ್ನು ಜಾಗತಿಕ ‘ಜಲ-ನಾವೀನ್ಯತಾ’ ಕೇಂದ್ರವನ್ನಾಗಿ (Global Water Innovation Hub) ಪರಿವರ್ತಿಸಲು ‘ಬೆಂಗಳೂರು ಗ್ಲೋಬಲ್ ವಾಟರ್ ಇನ್ನೋವೇಷನ್ ನೆಟ್‌ವರ್ಕ್’ (BGWIN – ಬಿ-ಗ್ವಿನ್) ಜಾಲ ಸ್ಥಾಪನೆಗೆ ಮಂಡಳಿ ಚಿಂತನೆ ನಡೆಸಿದೆ.
ಈ ಯೋಜನೆಯು ಡಿ.ಕೆ. ಶಿವಕುಮಾರ್ ಅವರ ಕನಸಿನ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯನ್ನು ನನಸಾಗಿಸುವ ಜೊತೆಗೆ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (SDG 6, 7, 11) ನೇರ ಕೊಡುಗೆ ನೀಡಲಿದೆ.
ಏನಿದು ‘ಬಿ-ಗ್ವಿನ್’ (BGWIN) ಜಾಲ?:

ಜಗತ್ತಿನಾದ್ಯಂತ ಇರುವ ಜಲ ನಿರ್ವಹಣಾ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಸ್ಟಾರ್ಟ್-ಅಪ್‌ಗಳು ಹಾಗೂ ಕೈಗಾರಿಕಾ ದಿಗ್ಗಜರನ್ನು ಒಂದೇ ವೇದಿಕೆಯಡಿ ತರುವ ಬೃಹತ್ ಯೋಜನೆ ಇದಾಗಿದೆ. ಜಲ ಮತ್ತು ಒಳಚರಂಡಿ ವಲಯದ ಸವಾಲುಗಳಿಗೆ ಅತ್ಯಾಧುನಿಕ ಹಾಗೂ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳುವುದು ಇದರ ಮುಖ್ಯ ಉದ್ದೇಶ. ಇದು ಬೆಂಗಳೂರನ್ನು ಜಲ ಭದ್ರತೆಯ ಮಾದರಿ ನಗರವಾಗಿ ಜಗತ್ತಿಗೆ ಪರಿಚಯಿಸಲಿದೆ.
ಕೃತಕ ಬುದ್ಧಿಮತ್ತೆ (AI) ಹಾಗೂ ಅತ್ಯಾಧುನಿಕ ‘ಉತ್ಕೃಷ್ಟತಾ ಕೇಂದ್ರ’:
’ಬಿ-ಗ್ವಿನ್’ ಯೋಜನೆಯ ಪ್ರಮುಖ ಅಂಗವಾಗಿ ತಂತ್ರಜ್ಞಾನ ನಾವೀನ್ಯತಾ ಹಬ್ (Technology Innovation Hub) ಅನ್ನು ಒಳಗೊಂಡ ‘ಉತ್ಕೃಷ್ಟತಾ ಕೇಂದ್ರ’ (Centre of Excellence) ಸ್ಥಾಪನೆಯಾಗಲಿದೆ.
ತಂತ್ರಜ್ಞಾನದ ಬಳಕೆ: ಕೃತಕ ಬುದ್ಧಿಮತ್ತೆ (AI) ಆಧಾರಿತ ಮುನ್ಸೂಚನಾ ವಿಶ್ಲೇಷಣೆ, ಸ್ಮಾರ್ಟ್ ಮೀಟರಿಂಗ್ ಮತ್ತು ವಿಕೇಂದ್ರೀಕೃತ ನೀರು ಸಂಸ್ಕರಣಾ ವ್ಯವಸ್ಥೆ.
ಜಂಟಿ ಸಂಶೋಧನೆ: ಕುಡಿಯುವ ನೀರಿನ ಶುದ್ಧೀಕರಣ ಮತ್ತು ಮರುಬಳಕೆ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ತಜ್ಞರಿಂದ ಜಂಟಿ ಕಾರ್ಯ.
ಪ್ರಾಯೋಗಿಕ ಯೋಜನೆ (Pilot Projects): ಹೊಸ ತಂತ್ರಜ್ಞಾನಗಳನ್ನು ಬೃಹತ್ ಪ್ರಮಾಣದಲ್ಲಿ ಅಳವಡಿಸುವ ಮುನ್ನ ಸಣ್ಣ ಪ್ರಮಾಣದಲ್ಲಿ ಪರೀಕ್ಷಿಸಿ ಮೌಲ್ಯೀಕರಿಸುವುದು. ಇದರಿಂದ ಜಲಮಂಡಳಿಯ ಬಂಡವಾಳದ ಅಪಾಯ ತಗ್ಗಲಿದೆ.
ಆರ್ಥಿಕ ಸ್ವಾವಲಂಬನೆ ಹಾಗೂ ಕೌಶಲ್ಯ ವೃದ್ಧಿ:
ಯೋಜನೆಯ ದೀರ್ಘಕಾಲದ ಯಶಸ್ಸಿಗಾಗಿ ‘ಬಿ-ಗ್ವಿನ್’ ವೈವಿಧ್ಯಮಯ ಆರ್ಥಿಕ ಮಾದರಿಯನ್ನು ಅಳವಡಿಸಿಕೊಳ್ಳಲಿದೆ. ಅಂತರರಾಷ್ಟ್ರೀಯ ಧನಸಹಾಯ, ದಾನಿ ಸಂಘಟನೆಗಳು ಹಾಗೂ ಸರ್ಕಾರದ ಅನುದಾನಗಳ ಜೊತೆಗೆ, ಚಂದಾದಾರಿಕೆ (Subscription fees) ಮತ್ತು ತರಬೇತಿ ಮಾಡ್ಯೂಲ್‌ಗಳ ಮೂಲಕ ಸುಸ್ಥಿರ ಆದಾಯ ಗಳಿಸಲಿದೆ. ಅಲ್ಲದೆ, ಜಂಟಿ ಸಂಶೋಧನೆಯ ಬೌದ್ಧಿಕ ಆಸ್ತಿ ಹಕ್ಕುಗಳ (IP) ಮೂಲಕ ರಾಯಧನ ಪಡೆಯುವ ಅವಕಾಶವೂ ಮುಕ್ತವಾಗಲಿದೆ.
ಜಲಮಂಡಳಿಯ ಸಿಬ್ಬಂದಿಗೆ ನಿರಂತರ ತರಬೇತಿ, ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳುವಿಕೆ, ಸರ್ಕುಲರ್ ಎಕಾನಮಿ ಮತ್ತು ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಕುರಿತು ಜಾಗತಿಕ ಮಟ್ಟದ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಇದು ಜಲಮಂಡಳಿಯನ್ನು ಸಂಪೂರ್ಣ ಸುಸ್ಥಿರವಾದ ‘ಭವಿಷ್ಯದ ಜಲಸಂಸ್ಥೆ’ಯನ್ನಾಗಿ (Utility of the Future) ಪರಿವರ್ತಿಸಲಿದೆ.
ಸುರಕ್ಷಿತ ಜಲ ಭವಿಷ್ಯವೇ ಬೆಂಗಳೂರಿಗೆ ತಳಪಾಯ:
”ಸುರಕ್ಷಿತ ಜಲ ಭವಿಷ್ಯವೇ ಬೆಂಗಳೂರಿನಂತಹ ಬಲಿಷ್ಠ ಮಹಾನಗರದ ತಳಪಾಯವಾಗಿದೆ. ‘ಬಿ-ಗ್ವಿನ್’ (BGWIN) ಜಾಲದ ಸ್ಥಾಪನೆಯ ಮೂಲಕ ಜಲ ನಿರ್ವಹಣೆಯಲ್ಲಿ ಬೆಂಗಳೂರನ್ನು ಜಾಗತಿಕ ನಾವೀನ್ಯತಾ ಕೇಂದ್ರವನ್ನಾಗಿ ರೂಪಿಸುತ್ತಿದ್ದು, ಇದು ನಮ್ಮ ‘ಬ್ರ್ಯಾಂಡ್ ಬೆಂಗಳೂರು’ ಕನಸನ್ನು ಸಾಕಾರಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಜಾಗತಿಕ ಪಾಲುದಾರಿಕೆಯ ಮೂಲಕ ಮುಂಬರುವ ಪೀಳಿಗೆಗೆ ಸುಸ್ಥಿರ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾದ ಭವ್ಯ ಬೆಂಗಳೂರನ್ನು ನಾವು ನಿರ್ಮಿಸಲಿದ್ದೇವೆ.”
– ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ
‘ಬಿ-ಗ್ವಿನ್’ ಪ್ರಾಯೋಗಿಕ ಅಳವಡಿಕೆಗೆ ಅತ್ಯುತ್ತಮ ತಾಣವಾಗಲಿದೆ:
”ಬೆಂಗಳೂರನ್ನು ಜಾಗತಿಕ ಜಲ-ಭದ್ರತೆಯ ಮಾದರಿ ನಗರವಾಗಿ ರೂಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ‘ಬಿ-ಗ್ವಿನ್’ ಮೂಲಕ ಯುವ ಸ್ಟಾರ್ಟ್-ಅಪ್‌ಗಳು ಮತ್ತು ಜಾಗತಿಕ ತಂತ್ರಜ್ಞಾನಗಳ ಪ್ರಾಯೋಗಿಕ ಅಳವಡಿಕೆಗೆ ಬೆಂಗಳೂರು ಅತ್ಯುತ್ತಮ ತಾಣವಾಗಲಿದೆ. ಇದು ಕೇವಲ ತಂತ್ರಜ್ಞಾನದ ಅಳವಡಿಕೆಯಲ್ಲ, ಬದಲಾಗಿ ಮುಂದಿನ ಪೀಳಿಗೆಗೆ ಸುರಕ್ಷಿತ ಜಲ ಭವಿಷ್ಯವನ್ನು ನಿರ್ಮಿಸುವ ನಮ್ಮ ಅಚಲ ಬದ್ಧತೆಯಾಗಿದೆ.”
– ಡಾ. ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷರು, ಬೆಂಗಳೂರು ಜಲಮಂಡಳಿ
















