ಬೆಂಗಳೂರು, ಜೂ.02 www.bengaluruwire.com: ಒಂದು ಕಾಲದಲ್ಲಿ ಗುಪ್ತಗಾಮಿನಿಯಾಗಿ, ಜಲದೇವತೆಯಾಗಿ ಹರಿಯುತ್ತಿದ್ದ ಬೆಂಗಳೂರಿನ ಜೀವನದಿ ವೃಷಭಾವತಿ ಈಗ ಕೇವಲ ಚರಂಡಿಯಲ್ಲ, ಸಾಕ್ಷಾತ್ ‘ವಿಷದ ಕೂಪ’. ಆಡಳಿತ ಯಂತ್ರದ ದಶಕಗಳ ಕ್ರಿಮಿನಲ್ ನಿರ್ಲಕ್ಷ್ಯದಿಂದಾಗಿ ಶುದ್ಧ ಜಲಮೂಲವೊಂದು ಹೇಗೆ ವಿಷಕಾರಿಯಾಗಿ ಪರಿವರ್ತನೆಗೊಂಡಿದೆ.
ಈ ಕುರಿತು ‘ಸನಾತನ ಕನ್ನಡ’ ಎಂಬ ಎಕ್ಸ್ (X) ಖಾತೆದಾರರು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಕರಾಳ ಸತ್ಯಗಳು ಕನ್ನಡಿಗರನ್ನು ಮತ್ತು ಪರಿಸರ ಪ್ರೇಮಿಗಳನ್ನು ಬೆಚ್ಚಿಬೀಳಿಸುವಂತಿವೆ. ಬಸವನಗುಡಿಯ ದೊಡ್ಡ ಬಸವನ ಪಾದದಡಿ ಹುಟ್ಟುವ ವೃಷಭಾವತಿ ನದಿ ಮುಂದೆ ಗುಟ್ಟಹಳ್ಳಿಯ ಅದಮ್ಯ ಚೇತನ ಸಂಸ್ಥೆಯ ಕಟ್ಟಡದ ಅಡಿಯಿಂದ ಮುಂದೆ ಸಾಗುತ್ತಾಳೆ. ಆ ಸಂಸ್ಥೆಯವರು ಶುದ್ಧ ಸ್ಥಿತಿಯಲ್ಲಿರುವ ಈ ನದಿ ನೀರನ್ನೇ ಹಲವು ವರ್ಷಗಳಿಂದ ಪ್ರತಿದಿನ 50,000 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಬಳಸುತ್ತಾರೆ ಎಂದರೆ ಈ ನದಿ ನೀರು ಆರಂಭಿಕ ಹಂತದಲ್ಲಿ ಎಷ್ಟು ಶುದ್ಧವಾಗಿದೆ ಎಂದು ಅರಿಯಬಹುದು.

ಪವಿತ್ರ ನದಿ ‘ವಿಷ-ಭಾವತಿ’ಯಾದ ಕರಾಳ ಕಥೆ:
ಸುಮಾರು 69 ಕಿಲೋಮೀಟರ್ ಉದ್ದಕ್ಕೂ ಹರಿಯುವ ವೃಷಭಾವತಿ ನದಿ ಬೆಂಗಳೂರಿನ ಅರ್ಧದಷ್ಟು ಭಾಗದ ಕೊಳಚೆಯನ್ನು ಹೊತ್ತು ಸಾಗುತ್ತಿದೆ. ಪ್ರತಿದಿನ ಸರಿಸುಮಾರು 500 ಮಿಲಿಯನ್ ಲೀಟರ್ (500 MLD) ಸಂಸ್ಕರಿಸದ ಅಥವಾ ಅರೆಬರೆ ಸಂಸ್ಕರಿಸಿದ ಒಳಚರಂಡಿ ನೀರು, ಕೈಗಾರಿಕಾ ತ್ಯಾಜ್ಯ ಮತ್ತು ಘನತ್ಯಾಜ್ಯಗಳು ಈ ನದಿಯ ಒಡಲು ಸೇರುತ್ತಿವೆ. ವರ್ಷದ 6 ರಿಂದ 9 ತಿಂಗಳುಗಳ ಕಾಲ ಈ ನದಿಯಲ್ಲಿ ಹರಿಯುವುದು ಕೇವಲ ಕೊಳಚೆ ನೀರು ಮಾತ್ರ!

ಇಲ್ಲಿನ ನೀರಿನ ಗುಣಮಟ್ಟ ಎಷ್ಟರಮಟ್ಟಿಗೆ ಕುಸಿದಿದೆ ಎಂದರೆ, ಜೈವಿಕ ಆಮ್ಲಜನಕದ ಬೇಡಿಕೆ (BOD) ಮಟ್ಟವು 100 mg/L ಅನ್ನು ಮೀರುತ್ತದೆ (ಸುರಕ್ಷಿತ ಮಿತಿ: 3-5 mg/L). ಇನ್ನು ರಾಸಾಯನಿಕ ಆಮ್ಲಜನಕದ ಬೇಡಿಕೆ (COD) ಮಟ್ಟವಂತೂ ಆತಂಕಕಾರಿಯಾಗಿದೆ. ಒಮ್ಮೆ ತಡೆಹಿಡಿಯಲಾದ ಕೈಗಾರಿಕಾ ಟ್ಯಾಂಕರ್‌ನ ನೀರಿನಲ್ಲಿ COD ಪ್ರಮಾಣ ಬರೋಬ್ಬರಿ 69,000 mg/L ಇತ್ತು! ಇದು ಸುರಕ್ಷಿತ ಮಿತಿಗಿಂತ ಸಾವಿರಾರು ಪಟ್ಟು ಹೆಚ್ಚು. ಈ ಭಾರವಾದ ಲೋಹಗಳು, ಪ್ಲಾಸ್ಟಿಕ್ ಮತ್ತು ಮಾರಣಾಂತಿಕ ರಾಸಾಯನಿಕಗಳೇ ಇಂದು ವೃಷಭಾವತಿಯನ್ನು ‘ವಿಷ-ಭಾವತಿ’ಯನ್ನಾಗಿ ಮಾಡಿವೆ.
ಮೂಕ ಪ್ರಾಣಿಗಳ ಆಕ್ರಂದನ: ಆನೆಯ ದಾರುಣ ಸಾವು:
ಈ ವಿಷದ ನೀರಿನ ಅಸಲಿ ಬೆಲೆ ತೆರುತ್ತಿರುವುದು ನಮ್ಮ ಮೂಕ ವನ್ಯಜೀವಿಗಳು. ಕೆಲವೇ ದಿನಗಳ ಹಿಂದೆ ಕಾವೇರಿ ವನ್ಯಜೀವಿ ಅಭಯಾರಣ್ಯದ ಮಗ್ಗೂರು ಅರಣ್ಯ ಪ್ರದೇಶದಲ್ಲಿ 40 ವರ್ಷದ ತಾಯಿ ಆನೆಯೊಂದು ಇದೇ ಕಲುಷಿತ ನೀರನ್ನು ಕುಡಿದು ನರಳಿ ನರಳಿ ಪ್ರಾಣಬಿಟ್ಟಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆನೆಯ ಹೊಟ್ಟೆಯಲ್ಲಿ ಸುಮಾರು 35 ಲೀಟರ್‌ನಷ್ಟು ‘ವಿಷದ ಮಿಶ್ರಣ’ ಪತ್ತೆಯಾಗಿದೆ. ಇದೊಂದೇ ಅಲ್ಲ, ಅಧಿಕಾರಶಾಹಿಗಳ ಕಣ್ಣಿಗೆ ಕಾಣದ, ಕಿವಿಗೆ ಕೇಳಿಸದ ಎಷ್ಟೋ ಮೂಕ ಪ್ರಾಣಿಗಳು ಪ್ರತಿದಿನ ಈ ನದಿಯ ತೀರದಲ್ಲಿ ಸದ್ದಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಿವೆ.
ಅಧಿಕಾರಿಗಳು ಮತ್ತು ರಾಜಕಾರಣಿಗಳ ‘ಕ್ರಿಮಿನಲ್ ನಿರ್ಲಕ್ಷ್ಯ’:
ಇದು ತಡೆಯಲಾಗದ ದುರಂತವೇನಲ್ಲ. ಸರಿಯಾದ ಒಳಚರಂಡಿ ನಿರ್ವಹಣೆ, ಸುಸಜ್ಜಿತ STP (ಒಳಚರಂಡಿ ಸಂಸ್ಕರಣಾ ಘಟಕ) ಗಳ ಬಳಕೆ, ಹೂಳೆತ್ತುವಿಕೆ ಮತ್ತು ಕಟ್ಟುನಿಟ್ಟಾದ ಕಾನೂನು ಜಾರಿಯಿಂದ ವೃಷಭಾವತಿಯನ್ನು ಪುನರುಜ್ಜೀವನಗೊಳಿಸಬಹುದು. ಈ ಮೂಲಕ ಬೆಂಗಳೂರಿನ ಅರ್ಧದಷ್ಟು ಭಾಗಕ್ಕೆ ಸಂಸ್ಕರಿಸಿದ ನೀರನ್ನು ಒದಗಿಸಬಹುದು ಎಂದು ತಜ್ಞರು ಪದೇ ಪದೇ ಹೇಳಿದ್ದಾರೆ. ಆದರೆ, ಒಂದು ಕಡೆ ಸಿಲಿಕಾನ್ ಸಿಟಿ ನೀರಿನ ದಾಹದಿಂದ ಬಳಲುತ್ತಿದ್ದರೆ, ಕೆರೆಗಳು ಒಣಗುತ್ತಿದ್ದರೆ, ಟ್ಯಾಂಕರ್ ಮಾಫಿಯಾ ವಿಜೃಂಭಿಸುತ್ತಿದ್ದರೆ, ಇತ್ತ ನಮ್ಮ ಜೀವನದಿ ಮಾತ್ರ ವಿಷವಾಗಿ ಹರಿದು ಪೋಲಾಗುತ್ತಿದೆ.
ಇದಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ರಾಜ್ಯವನ್ನಾಳಿದ ಪ್ರತಿಯೊಂದು ಸರ್ಕಾರಗಳೂ ಹೊಣೆ. ಫ್ಲೈಓವರ್, ಮೆಟ್ರೋ ವಿಸ್ತರಣೆ ಮತ್ತು ಫೋಟೋ-ಶೂಟ್ ಯೋಜನೆಗಳಿಗೆ ಸಾವಿರಾರು ಕೋಟಿ ಸುರಿಯುವ ಇವರಿಗೆ ನದಿಯ ಪುನರುಜ್ಜೀವನ ಎಂದರೆ ತಾತ್ಸಾರ.
ಕಣ್ಣೊರೆಸುವ ತಂತ್ರ ಮತ್ತು ಕೃಷಿಗೆ ಕಂಟಕ:
ಬೈರಮಂಗಲ ಜಲಾಶಯದ ₹391 ಕೋಟಿ ವೆಚ್ಚದ “ಮರುಸ್ಥಾಪನೆ” ಯೋಜನೆಯು ಕೇವಲ ಕಣ್ಣೊರೆಸುವ ತಂತ್ರ ಎಂದು ಸ್ವತಂತ್ರ ವರದಿಗಳು ಟೀಕಿಸಿವೆ. ಇದು ಮಾಲಿನ್ಯದ ಮೂಲ ಕಾರಣವನ್ನು ಪರಿಹರಿಸುವ ಬದಲು, ವಿಷಕಾರಿ ನೀರನ್ನು ಕನಕಪುರದ ರೈತರ ಕಡೆಗೆ ಹರಿಯಬಿಡುತ್ತಿದೆ. ಅದೇ ನೀರನ್ನು ಬಳಸಿ ಬೆಳೆದ ತರಕಾರಿಗಳು ಇಂದು ನಮ್ಮ ನಿಮ್ಮ ತಟ್ಟೆ ಸೇರುತ್ತಿವೆ. ಹೈಕೋರ್ಟ್ ಛೀಮಾರಿ ಹಾಕಿದರೂ, ದಂಡ ವಿಧಿಸಿದರೂ ಬಿಬಿಎಂಪಿ (BBMP) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಕಡತಗಳನ್ನು ಮಾತ್ರ ಸುತ್ತಿಸುತ್ತಿವೆ.
ಎಚ್ಚೆತ್ತುಕೊಳ್ಳಿ, ಇಲ್ಲವಾದರೆ ಇತಿಹಾಸ ಕ್ಷಮಿಸದು:
ರಾಜಕಾರಣಿಗಳು, ಐಎಎಸ್, ಕೆಎಎಸ್ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಈ ದುರಂತಕ್ಕೆ ನೇರ ಹೊಣೆ. ಕೇವಲ ವರದಿಗಳನ್ನು ಸಿದ್ಧಪಡಿಸಿ, ಅನುದಾನ ಮಂಜೂರು ಮಾಡಿ, ನೆಪಮಾತ್ರಕ್ಕೆ ದಾಳಿ ಮಾಡುವ ನೀವು, ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ಲಾಬಿಗಳ ರಕ್ಷಣೆಗೆ ನಿಂತಿದ್ದೀರಿ. “ಸ್ಮಾರ್ಟ್ ಸಿಟಿ” ಮತ್ತು “ಗ್ರೀನ್ ಬೆಂಗಳೂರು” ಸೆಮಿನಾರ್‌ಗಳಲ್ಲಿ ನೀವು ಭಾಷಣ ಬಿಗಿಯುವಾಗಲೇ, ಹೊರಗಡೆ ನದಿಯೊಂದು ಉಸಿರು ಚೆಲ್ಲುತ್ತಿದೆ. ಇದು ಕೇವಲ ಹಣ ಅಥವಾ ತಂತ್ರಜ್ಞಾನದ ಕೊರತೆಯಲ್ಲ, ಇದು ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯ ಕೊರತೆ.
“ಕ್ರಿಮಿನಲ್ ನಿರ್ಲಕ್ಷ್ಯವನ್ನು ನಿಲ್ಲಿಸಿ. ವೃಷಭಾವತಿಯನ್ನು ಉಳಿಸಿ, ಬೆಂಗಳೂರನ್ನು ಉಳಿಸಿ, ನಮ್ಮ ವನ್ಯಜೀವಿಗಳನ್ನು ರಕ್ಷಿಸಿ.”
ಇಲ್ಲವಾದರೆ, ಭವಿಷ್ಯದ ಪೀಳಿಗೆ ಮತ್ತು ಆ ಮೂಕ ಪ್ರಾಣಿಗಳ ಶಾಪ ಈ ವ್ಯವಸ್ಥೆಯನ್ನು ಸುಮ್ಮನೆ ಬಿಡುವುದಿಲ್ಲ.



















