ಮೈಸೂರು, ಮೇ.30 www.bengaluruwire.com: ಕಾಶ್ಮೀರ ಕಣಿವೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಉತ್ತೇಜಿಸುತ್ತಿರುವ ‘ಶಾರದಾ ಸಂರಕ್ಷಣಾ ಸಮಿತಿ’ (Save Sharda Committee Kashmir) ಅಧ್ಯಕ್ಷ ಹಾಗೂ ಸಂಸ್ಥಾಪಕ ರವೀಂದರ್ ಪಂಡಿತ ಅವರಿಗೆ ಮೈಸೂರಿನಲ್ಲಿರುವ ಅವಧೂತ ದತ್ತ ಪೀಠದ ವತಿಯಿಂದ ಪ್ರತಿಷ್ಠಿತ ‘ಧರ್ಮ ಬಂಧು’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 84ನೇ ಜನ್ಮದಿನೋತ್ಸವದ ಅಂಗವಾಗಿ ದತ್ತ ಪೀಠದ ಕಿಕ್ಕಿರಿದ ಸಭಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ 1 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ.
ಶಾರದಾ ಪೀಠ ಪುನರಾರಂಭಕ್ಕೆ ಒಗ್ಗೂಡಲು ಕರೆ:
ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಭಕ್ತರನ್ನು ಉದ್ದೇಶಿಸಿ ಮಾತನಾಡಿದ ರವೀಂದರ್ ಪಂಡಿತ, “ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಐತಿಹಾಸಿಕ ಶಾರದಾ ಪೀಠವನ್ನು ಪುನರಾರಂಭಿಸಲು ನಾವೆಲ್ಲರೂ ಒಗ್ಗೂಡಬೇಕು” ಎಂದು ಕರೆ ನೀಡಿದರು. ಗಡಿ ನಿಯಂತ್ರಣ ರೇಖೆಯ (LoC) ಟೀಟ್ವಾಲ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಅವರು ಎಲ್ಲಾ ಭಕ್ತರಿಗೂ ಮುಕ್ತ ಆಹ್ವಾನ ನೀಡಿದರು. ಇದೇ ವೇಳೆ ಅವರು ಶಾರದಾ ಪೀಠದ ಭಾವಚಿತ್ರ ಹಾಗೂ ಶಾರದಾ ಶಾಲನ್ನು ಸ್ವಾಮೀಜಿಯವರಿಗೆ ಕಾಣಿಕೆಯಾಗಿ ಸಮರ್ಪಿಸಿದರು.

ಶಾರದಾ ಮಿಷನ್‌ನ ನಿರಂತರ ಪ್ರಯತ್ನಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸ್ವಾಮೀಜಿ, ಕಾರ್ಯಕ್ರಮದಲ್ಲಿ ಶಾರದಾ ದೇವಿಯ ಭಜನೆಗಳನ್ನು ಹಾಡುವಂತೆ ನೆರೆದಿದ್ದ ಭಕ್ತರಿಗೆ ಸೂಚಿಸಿದರು.
ಸಮಿತಿಗೆ ಬಹುಮಾನದ ಹಣ ದೇಣಿಗೆ:
2023 ರಲ್ಲಿ ಭಾರತದ ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಂದ ಉದ್ಘಾಟನೆಗೊಂಡ ನಂತರ ಕಾಶ್ಮೀರದ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಿಗರಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಸ್ಥಳೀಯರ ಪ್ರಯತ್ನಗಳನ್ನು ರವೀಂದರ್ ಪಂಡಿತ ಶ್ಲಾಘಿಸಿದರು. ಅಲ್ಲದೆ, ತಮಗೆ ಪ್ರಶಸ್ತಿಯ ರೂಪದಲ್ಲಿ ಬಂದ 1 ಲಕ್ಷ ರೂ. ನಗದು ಹಣವನ್ನು ‘ಸೇವ್ ಶಾರದಾ ಕಮಿಟಿ’ಯ ಮುಂದಿನ ಕಾರ್ಯಗಳಿಗಾಗಿ ದೇಣಿಗೆ ನೀಡುವುದಾಗಿ ಪಂಡಿತ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















