ಬೆಂಗಳೂರು, ಮೇ.27 www.bengaluruwire.com: ನಗರದಲ್ಲಿ ಟೋಯಿಂಗ್ ಮಾಡಲಾಗುವ ಮತ್ತು ಅನಾಥವಾಗಿ ಬಿಡಲಾದ ವಾಹನಗಳ ನಿಲುಗಡೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ತಕ್ಷಣವೇ ಸ್ಥಳಗಳನ್ನು ಅಂತಿಮಗೊಳಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳವಾರ ಜಿಬಿಎ ವ್ಯಾಪ್ತಿಯ ವಿವಿಧ ಇಲಾಖೆಗಳೊಂದಿಗೆ ನಡೆದ ಉನ್ನತ ಮಟ್ಟದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಸಂಚಾರ ದಟ್ಟಣೆ ಮತ್ತು ಪಾದಚಾರಿಗಳ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ತ್ವರಿತಗತಿಯ ಕ್ರಮಗಳಿಗೆ ಆಗ್ರಹಿಸಿದರು.
ಟೋಯಿಂಗ್ ವಾಹನಗಳಿಗೆ ಪಾಲಿಕೆವಾರು ಸ್ಥಳ ನಿಗದಿ:
ಟೋಯಿಂಗ್ ಮಾಡಿದ ವಾಹನಗಳನ್ನು ನಿಲುಗಡೆ ಮಾಡುವ ಸಲುವಾಗಿ ಉತ್ತರ ನಗರ ಪಾಲಿಕೆಯಲ್ಲಿ ಈಗಾಗಲೇ ಅಗತ್ಯ ಸ್ಥಳವನ್ನು ಗುರುತಿಸಲಾಗಿದೆ. ಕೇಂದ್ರ ಮತ್ತು ದಕ್ಷಿಣ ನಗರ ಪಾಲಿಕೆಗಳಲ್ಲಿಯೂ ಸ್ಥಳ ಗುರುತಿಸುವ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದೆ. ಆದರೆ, ಪೂರ್ವ ಹಾಗೂ ಪಶ್ಚಿಮ ನಗರ ಪಾಲಿಕೆಗಳಲ್ಲಿ ಈ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಕೂಡಲೇ ಸ್ಥಳಗಳನ್ನು ಗುರುತಿಸಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ರಸ್ತೆ ಮತ್ತು ಕಲ್ವರ್ಟ್ ಕಾಮಗಾರಿಗಳಿಗೆ ವೇಗ:
ಕೋಗಿಲು ಜಂಕ್ಷನ್ನ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಬಳಿ ಕಲ್ವರ್ಟ್ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಈಗಾಗಲೇ ಪತ್ರ ಬರೆಯಲಾಗಿದ್ದು, ವಿಳಂಬ ಮಾಡದೆ ಕೂಡಲೇ ಅನುಮೋದನೆ ನೀಡುವಂತೆ ಎನ್ಎಚ್ಎಐ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ, ಚಂದಾಪುರ–ಹೊಸೂರು ರಸ್ತೆಯಲ್ಲಿ ಪ್ರೀಕಾಸ್ಟ್ ಕಲ್ವರ್ಟ್ ಬಾಕ್ಸ್ ಅಳವಡಿಸುವ ಕಾಮಗಾರಿಗೆ ಅಡ್ಡಿಯಾಗಿರುವ ಬೆಸ್ಕಾಂ ಕೇಬಲ್ ಸ್ಥಳಾಂತರ ಸಮಸ್ಯೆಯನ್ನು ಬಗೆಹರಿಸಲು ಎನ್.ಎಚ್.ಎ.ಐ ಹಾಗೂ ಬೆಸ್ಕಾಂ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸುವಂತೆ ತಾಕೀತು ಮಾಡಿದರು.
ವೈಟ್ ಟಾಪಿಂಗ್ಗೂ ಮುನ್ನ ಜಲಮಂಡಳಿ ಕಾಮಗಾರಿ ಪೂರ್ಣಗೊಳಿಸಿ:
ನಗರದ ಪ್ರಮುಖ ರಸ್ತೆಗಳಾದ ನಾಗವಾರ ರಸ್ತೆ, ಟ್ಯಾನರಿ ರಸ್ತೆ, ಲೋವರ್ ಅಗರಂ ರಸ್ತೆ, ತಿಮ್ಮಯ್ಯ ರಸ್ತೆ, ನೇತಾಜಿ ರಸ್ತೆ, ಸುಲ್ತಾನ್ಪಾಳ್ಯ ರಸ್ತೆ ಹಾಗೂ ನಾಗರಭಾವಿ ಮುಖ್ಯ ರಸ್ತೆಯಲ್ಲಿ ಶೀಘ್ರವೇ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ. ಈ ರಸ್ತೆಗಳಲ್ಲಿ ಜಲಮಂಡಳಿ (BWSSB) ಕೈಗೆತ್ತಿಕೊಂಡಿರುವ ಪೈಪ್ಲೈನ್ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಮಳೆಗಾಲದ ಸಿದ್ಧತೆ: ಅಗ್ನಿಶಾಮಕ ದಳದ ಸಮನ್ವಯ:
ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿನ 20 ಅಗ್ನಿಶಾಮಕ ಠಾಣೆಗಳು ಆಯಾ ನಗರ ಪಾಲಿಕೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಸಭೆಯ ಇತರೆ ಪ್ರಮುಖ ನಿರ್ಣಯಗಳು:
ವಾರದೊಳಗೆ ಸಮೀಕ್ಷಾ ವರದಿ: ಅರ್ಕಾವತಿ ಬಡಾವಣೆಗೆ ಹೊಂದಿಕೊಂಡಿರುವ ಜಕ್ಕೂರು ಕೆರೆಯ ಪಕ್ಕದ ಸಂಪಿಗೆಹಳ್ಳಿ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಬಿಡಿಎ ಹಾಗೂ ಉತ್ತರ ನಗರ ಪಾಲಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವಾರದೊಳಗೆ ವರದಿ ಸಲ್ಲಿಸಬೇಕು.
ದಿಣ್ಣೂರು ರಸ್ತೆ: ಅಗಲೀಕರಣ ಕಾಮಗಾರಿಯನ್ನು ತಕ್ಷಣವೇ ಆರಂಭಿಸಲು ಕ್ರಮ ಕೈಗೊಳ್ಳಬೇಕು.
ಹಾಲಿಡೇ ವಿಲೇಜ್ ರಸ್ತೆ: ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುವ ಸಮಸ್ಯೆಗೆ ಶೀಘ್ರ ಮುಕ್ತಿ.
ಹರಳೂರು ಮುಖ್ಯ ರಸ್ತೆ: ಜಲಮಂಡಳಿ ಅಗೆದಿರುವ ರಸ್ತೆಯ ಪುನಃಸ್ಥಾಪನಾ ಕಾರ್ಯ ಚುರುಕುಗೊಳಿಸುವುದು.
ಯಲಹಂಕ ಓಲ್ಡ್ ಟೌನ್: ರೈಲ್ವೆ ಕೆಳಸೇತುವೆ (RUB) ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವುದು.
ಬನ್ನೇರುಘಟ್ಟ ರಸ್ತೆ: ಜಲಮಂಡಳಿ ಕಾಮಗಾರಿಯನ್ನು ಎರಡು ದಿನಗಳಲ್ಲಿ ಪೂರ್ಣಗೊಳಿಸಿ, ದಕ್ಷಿಣ ನಗರ ಪಾಲಿಕೆಯಿಂದ ತಕ್ಷಣ ಡಾಂಬರೀಕರಣ ಆರಂಭಿಸುವುದು.
ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಕೆ.ಎನ್. ರಮೇಶ್, ಹೆಚ್ಚುವರಿ ಆಯುಕ್ತರು, ಪ್ರಧಾನ ಅಭಿಯಂತರರು, ಮತ್ತು ಮೆಟ್ರೋ, ಪೊಲೀಸ್, ಡಲ್ಟ್, ಅಗ್ನಿಶಾಮಕ, ಎನ್.ಎಚ್.ಎ.ಐ, ರೈಲ್ವೆ, ಜಲಮಂಡಳಿ, ಬೆಸ್ಕಾಂ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



















