ನವದೆಹಲಿ, ಮೇ.20 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಗೆ ಬರುವ ಐದು ನಗರ ಪಾಲಿಕೆಗಳ ಚುನಾವಣೆಯನ್ನು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಚುನಾವಣೆ ನಡೆಸಲು ಈ ಹಿಂದೆ ನೀಡಿದ್ದ ಜೂನ್ 30ರ ಗಡುವನ್ನು ಕೊನೆಯ ಅವಕಾಶವಾಗಿ ಆಗಸ್ಟ್ 31ರವರೆಗೆ ವಿಸ್ತರಿಸಿರುವ ನ್ಯಾಯಾಲಯ, “ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡುವುದಿಲ್ಲ” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ನ್ಯಾಯಾಲಯದಲ್ಲಿ ನಡೆದ ವಾದ-ವಿವಾದ
ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಗಳು ಜಂಟಿಯಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಬುಧವಾರ (ಮೇ.20) ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಡೆಸಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ರಾಜ್ಯದಲ್ಲಿ ಪ್ರಸ್ತುತ ವಿಶೇಷ ಪರಿಶೀಲನಾ ಕಾರ್ಯ (SIR exercise), ಮನೆ ಗಣತಿ ಹಾಗೂ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಇದರಿಂದ ಚುನಾವಣಾ ಪ್ರಕ್ರಿಯೆ ನಡೆಸಲು ತೀವ್ರ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಸೆಪ್ಟೆಂಬರ್ ವರೆಗೆ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿವಾದಿಗಳ ಪರ ಹಿರಿಯ ವಕೀಲ ಕೆ. ಪರಮೇಶ್ವರ್, “ರಾಜ್ಯ ಸರ್ಕಾರವು ಈ ಹಿಂದೆ ಜೂನ್ 30ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸುವುದಾಗಿ ಲಿಖಿತ ಭರವಸೆ ನೀಡಿತ್ತು. ಇದೀಗ ಮತ್ತೆ ಗಡುವು ವಿಸ್ತರಣೆ ಕೇಳುತ್ತಿರುವುದು ಚುನಾವಣೆ ಮುಂದೂಡುವ ತಂತ್ರವಷ್ಟೇ” ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಎರಡೂ ಕಡೆಯ ವಾದ ಆಲಿಸಿದ ಸುಪ್ರೀಂ ಕೋರ್ಟ್, ಅಂತಿಮವಾಗಿ ಆಗಸ್ಟ್ 31ರವರೆಗೆ ಮಾತ್ರ ಗಡುವು ವಿಸ್ತರಿಸಿ ಆದೇಶ ಹೊರಡಿಸಿತು.
ಪ್ರಕರಣದ ಹಿನ್ನೆಲೆ ಮತ್ತು ವಿಳಂಬದ ಹಾದಿ
ಆಡಳಿತಾಧಿಕಾರಿಗಳ ಆಡಳಿತ:
ಬಿಬಿಎಂಪಿ ಚುನಾವಣೆ ಹಲವು ವರ್ಷಗಳಿಂದ ವಿಳಂಬವಾಗುತ್ತಿದ್ದು, ಜನಪ್ರತಿನಿಧಿಗಳಿಲ್ಲದೆ ಕೇವಲ ಆಡಳಿತಾಧಿಕಾರಿಗಳ ಸುಪರ್ದಿಯಲ್ಲಿ ಆಡಳಿತ ನಡೆಯುತ್ತಿದೆ. ಇದು ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಅಡ್ಡಿಯಾಗಿದೆ ಎಂಬ ಆರೋಪಗಳಿವೆ.
ಹೈಕೋರ್ಟ್ ಆದೇಶ (2020): 2020ರ ಡಿಸೆಂಬರ್ 4ರಂದು ಕರ್ನಾಟಕ ಹೈಕೋರ್ಟ್, ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಆರು ವಾರಗಳೊಳಗೆ ಬಿಬಿಎಂಪಿ ಚುನಾವಣೆ ಘೋಷಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು.
ಸುಪ್ರೀಂ ಕೋರ್ಟ್ ಪ್ರವೇಶ: ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು. 2020ರ ಡಿಸೆಂಬರ್ 18ರಂದು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್, ನಂತರ 2022ರಲ್ಲಿ ವಾರ್ಡ್ ಮರುವಿಂಗಡಣೆಗೆ ಸೂಚಿಸಿತ್ತು.
ಜೂನ್ 30ರ ಗಡುವು: ಇದೇ ಜನವರಿಯಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಗಡುವು ವಿಧಿಸಿತ್ತು. ಇದೀಗ ಈ ಗಡುವನ್ನು ಆಗಸ್ಟ್ 31ಕ್ಕೆ ವಿಸ್ತರಿಸಲಾಗಿದೆ. ಅಷ್ಟರೊಳಗೆ ಜಿಬಿಎ ವ್ಯಾಪ್ತಿಯಲ್ಲಿ 369 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದ್ದು, ಅಂತಿಮವಾಗಿ ಹಲವು ವರ್ಷಗಳಿಂದ ಚಾತಕಪಕ್ಷಿಗಳಂತೆ ಕಾಯುತ್ತಿರುವ ಅಭ್ಯರ್ಥಿಗಳು ಚುನಾವಣಾ ಆಖಾಡಕ್ಕೆ ಸಿದ್ದರಾಗಲು ಕಾಲ ಕೂಡಿ ಬಂದಂತಾಗಿದೆ.






















