ಬೆಂಗಳೂರು, ಮೇ.13 www.bengaluruwire.com: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರು ಮತ್ತು ಅಧಿಕಾರಿಗಳ ದೀರ್ಘಕಾಲದ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಂಡಿರುವ ಸರ್ಕಾರ, ಶೇಕಡಾ 12.5 ರಷ್ಟು ವೇತನ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಈ ನೂತನ ವೇತನ ಪರಿಷ್ಕರಣೆಯು 2025ರ ಏ.1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಇದರಿಂದಾಗಿ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 1 ಲಕ್ಷದ 5 ಸಾವಿರ ಸಿಬ್ಬಂದಿಗಳಿಗೆ ನೇರ ಪ್ರಯೋಜನ ಸಿಗಲಿದೆ.
ಬೊಕ್ಕಸಕ್ಕೆ ಹೆಚ್ಚುವರಿ ಹೊರೆ:
ವೇತನ ಹೆಚ್ಚಳದ ನಿರ್ಧಾರದಿಂದಾಗಿ ನಾಲ್ಕು ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಸುಮಾರು 72.80 ಕೋಟಿ ರೂ.ಗಳಷ್ಟು ಹೆಚ್ಚುವರಿ ವೆಚ್ಚ ತಗುಲಲಿದೆ. ವಾರ್ಷಿಕವಾಗಿ 873.64 ಕೋಟಿ ರೂ.ಗಳಷ್ಟು ಹಣಕಾಸಿನ ಹೊರೆ ಸರ್ಕಾರದ ಮೇಲೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ಹಿಂಬಾಕಿ ಪಾವತಿ ವಿವರ:
2023ರ ಮಾರ್ಚ್ ತಿಂಗಳ ವೇತನ ಪರಿಷ್ಕರಣೆಯ ಒಟ್ಟು 26 ತಿಂಗಳ ಹಿಂಬಾಕಿ ಮೊತ್ತ 1271.92 ಕೋಟಿ ರೂ.ಗಳಷ್ಟಿದೆ. ಇದರಲ್ಲಿ ಮೊದಲ ಕಂತಾಗಿ ಸರ್ಕಾರವು ಈಗಾಗಲೇ 450 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ನೌಕರರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ.
ಉಳಿದ ಬಾಕಿ ಮೊತ್ತ ಹಾಗೂ 2025ರ ಏಪ್ರಿಲ್‌ನಿಂದ 2026ರ ಜೂನ್ ವರೆಗಿನ ಪರಿಷ್ಕೃತ ವೇತನದ ಹಿಂಬಾಕಿಯನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪಾವತಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.




















