ಬೆಂಗಳೂರು, ಏ.14 www.bengaluruwire.com: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ 2026-27ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಯನ್ನು ಸರ್ಕಾರ ಅಧಿಕೃತವಾಗಿ ಹೊರಡಿಸಿದೆ.
ಇದರನ್ವಯ ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆಯು ಏಪ್ರಿಲ್ 15 ರಿಂದ ಆರಂಭಗೊಳ್ಳಲಿದೆ. ವರ್ಗಾವಣೆ ಬಯಸುವ ಅರ್ಹ ನೌಕರರು ಅರ್ಜಿ ಸಲ್ಲಿಸಲು ಮೇ 31 ರವರೆಗೆ ಕಾಲಾವಕಾಶ ನೀಡಲಾಗಿದೆ.
ಸರ್ಕಾರದ ನೂತನ ಮಾರ್ಗಸೂಚಿಯಂತೆ, ಆಯಾ ವೃಂದದ ಒಟ್ಟು ಕಾರ್ಯನಿರತ ಬಲದ ಗರಿಷ್ಠ ಶೇಕಡಾ 6 ರಷ್ಟು ನೌಕರರಿಗೆ ಮಾತ್ರ ವರ್ಗಾವಣೆಗೊಳ್ಳಲು ಅವಕಾಶವಿರುತ್ತದೆ. ಗ್ರೂಪ್-ಎ, ಬಿ, ಸಿ ಮತ್ತು ಡಿ ವೃಂದದ ನೌಕರರು ಈ ಅವಧಿಯಲ್ಲಿ ತಮ್ಮ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ವಿಶೇಷವಾಗಿ ಗ್ರೂಪ್-ಎ ಮತ್ತು ಬಿ ವೃಂದದ ಅಧಿಕಾರಿಗಳ ವರ್ಗಾವಣೆಗೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ.
ಕನಿಷ್ಠ ಸೇವಾವಧಿ ಕಡ್ಡಾಯ:

ವರ್ಗಾವಣೆ ಕೋರುವ ನೌಕರರು ಒಂದು ಸ್ಥಳದಲ್ಲಿ ಕನಿಷ್ಠ ಸೇವಾವಧಿಯನ್ನು ಪೂರೈಸಿರುವುದು ಅತ್ಯಗತ್ಯ. ಮಾರ್ಗಸೂಚಿಯ ಪ್ರಕಾರ, ಗ್ರೂಪ್-ಎ ಮತ್ತು ಬಿ ಅಧಿಕಾರಿಗಳಿಗೆ 2 ವರ್ಷ, ಗ್ರೂಪ್-ಸಿ ನೌಕರರಿಗೆ 4 ವರ್ಷ ಹಾಗೂ ಗ್ರೂಪ್-ಡಿ ನೌಕರರಿಗೆ 7 ವರ್ಷಗಳ ಕನಿಷ್ಠ ಸೇವಾವಧಿಯನ್ನು ನಿಗದಿಪಡಿಸಲಾಗಿದೆ. ಆದರೆ, ಪತಿ-ಪತ್ನಿ ಪ್ರಕರಣಗಳು, ಗಂಭೀರ ಕಾಯಿಲೆ ಅಥವಾ ನಿವೃತ್ತಿಗೆ ಎರಡು ವರ್ಷಕ್ಕಿಂತ ಕಡಿಮೆ ಅವಧಿ ಇರುವ ನೌಕರರಿಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ ನೀಡಲು ಅವಕಾಶವಿದೆ.
ಪಾರದರ್ಶಕತೆಗೆ ಆದ್ಯತೆ:
ವರ್ಗಾವಣೆ ಪ್ರಕ್ರಿಯೆಯು ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಪಾರದರ್ಶಕವಾಗಿ ನಡೆಯಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಂದು ವೇಳೆ ಸಾಮಾನ್ಯ ವರ್ಗಾವಣೆ ಅವಧಿ ಮುಗಿದ ನಂತರ ಅಥವಾ ನಿಗದಿತ ಅವಧಿಗೂ ಮುನ್ನ ವರ್ಗಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾದರೆ, ಅಂತಹ ಪ್ರಕರಣಗಳಿಗೆ ಮುಖ್ಯಮಂತ್ರಿಗಳ ಪೂರ್ವಾನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೆ, ವಿಶೇಷ ಚೇತನ ನೌಕರರಿಗೆ ನಿಯತಕಾಲಿಕ ವರ್ಗಾವಣೆಗಳಿಂದ ವಿನಾಯಿತಿ ನೀಡುವ ಮೂಲಕ ಮಾನವೀಯ ನೆಲಗಟ್ಟಿನಲ್ಲೂ ಮಾರ್ಗಸೂಚಿ ರೂಪಿಸಲಾಗಿದೆ.























