ಬೆಂಗಳೂರು, ಏ.02 www.bengaluruwire.com : ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ತೆರಿಗೆ ಸಂಗ್ರಹದಲ್ಲಿ ಮೈಲಿಗಲ್ಲು ಸ್ಥಾಪಿಸಿದೆ.
ರಾಜ್ಯದ 5,943 ಗ್ರಾಮ ಪಂಚಾಯತಿಗಳು 2025-26ನೇ ಸಾಲಿನಲ್ಲಿ ಒಟ್ಟು 1,382.57 ಕೋಟಿ ರೂ. ತೆರಿಗೆ ಸಂಗ್ರಹಿಸುವ ಮೂಲಕ ಸತತ ಪ್ರಗತಿಯ ಹಾದಿಯಲ್ಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶೇ. 89ರಷ್ಟು ದಾಖಲೆ ವಸೂಲಾತಿ:
ಕಳೆದ ಹಣಕಾಸು ವರ್ಷಕ್ಕೆ (2024-25) ಹೋಲಿಸಿದರೆ ಈ ಬಾರಿ 110.04 ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹವಾಗಿದೆ. 2024-25ರಲ್ಲಿ 1,272.54 ಕೋಟಿ ರೂ. (ಶೇ. 80) ಸಂಗ್ರಹವಾಗಿದ್ದರೆ, ಈ ಬಾರಿ ಅದು ಚಾಲ್ತಿ ಬೇಡಿಕೆಯ ಶೇ. 89ಕ್ಕೆ ಏರಿಕೆಯಾಗಿದೆ. ದಕ್ಷ ಆಡಳಿತ ಮತ್ತು ಕಟ್ಟುನಿಟ್ಟಿನ ನಿಯಮಗಳ ಜಾರಿಯೇ ಈ ಯಶಸ್ಸಿಗೆ ಕಾರಣ ಎಂದು ಸಚಿವರು ವಿಶ್ಲೇಷಿಸಿದ್ದಾರೆ.

ದಶಕದ ಸಾಧನೆಯ ಅಂಕಿ-ಅಂಶಗಳ ವಿಶ್ಲೇಷಣೆ:
2017-18ರಿಂದ ಇಲ್ಲಿಯವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಗ್ರಾಮ ಪಂಚಾಯತಿಗಳ ಆರ್ಥಿಕ ಸ್ವಾವಲಂಬನೆ ಗಮನಾರ್ಹವಾಗಿ ಸುಧಾರಿಸಿದೆ. 2017-18ರಲ್ಲಿ ಕೇವಲ 322.77 ಕೋಟಿ ರೂ. ಇದ್ದ ವಸೂಲಾತಿ, ಇಂದು ನಾಲ್ಕು ಪಟ್ಟು ಹೆಚ್ಚಾಗಿದೆ.
ಕೋವಿಡ್ ನಂತರ ತೆರಿಗೆ ಸಂಗ್ರಹದಲ್ಲಿ ಚೇತರಿಕೆ: 2022-23ರಲ್ಲಿ ಶೇ. 73ಕ್ಕೆ ಕುಸಿದಿದ್ದ ವಸೂಲಾತಿ ಪ್ರಮಾಣ, ಕಳೆದ ಮೂರು ವರ್ಷಗಳಲ್ಲಿ (ಶೇ. 60 ರಿಂದ ಶೇ. 89ಕ್ಕೆ) ಭರ್ಜರಿ ಜಿಗಿತ ಕಂಡಿದೆ. ರಾಯಚೂರು ಜಿಲ್ಲೆಯು ಶೇ. 129ರಷ್ಟು ತೆರಿಗೆ ಸಂಗ್ರಹಿಸಿ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿದ್ದರೆ, ಇತರ 11 ಜಿಲ್ಲೆಗಳು ಶೇ. 100ರ ಗಡಿ ದಾಟಿವೆ.
“ಸಂಗ್ರಹವಾದ ಪ್ರತಿ ರೂಪಾಯಿಯೂ ಹಳ್ಳಿಗಳ ರಸ್ತೆ, ಕುಡಿಯುವ ನೀರು ಮತ್ತು ಮೂಲಸೌಕರ್ಯಗಳಿಗೆ ಬಳಕೆಯಾಗಲಿದೆ. ಬಿಲ್ ಕಲೆಕ್ಟರ್‌ಗಳಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಎಲ್ಲರ ಶ್ರಮ ಶ್ಲಾಘನೀಯ,” ಎಂದು ಪ್ರಿಯಾಂಕ್ ಖರ್ಗೆ ಅಭಿನಂದಿಸಿದ್ದಾರೆ.























