ಭೋಪಾಲ್, ಮಾ.31 www.bengaluruwire.com: ಸಾಧಿಸುವ ಛಲವಿದ್ದರೆ ಬೆಟ್ಟವನ್ನೇ ಅಗೆಯಬಹುದು ಎಂಬ ಮಾತಿದೆ. ಆದರೆ ಇಲ್ಲೊಬ್ಬ ಯುವಕ ಹರಿಯುವ ನದಿಯನ್ನೇ ಸ್ವಚ್ಛಗೊಳಿಸಿ ಪರಿಸರ ಪ್ರೇಮಿಗಳಿಗೆ ಮಾದರಿಯಾಗಿದ್ದಾನೆ. ಮಧ್ಯಪ್ರದೇಶದ ಬಿಯೋರಾ ಗ್ರಾಮದ 20 ವರ್ಷದ ಯುವಕ ಬಿಟ್ಟು ತಬಾಹಿ ಅವರ ಈ ಅಭೂತಪೂರ್ವ ಕಾರ್ಯಕ್ಕೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಮನಸೋತಿದ್ದಾರೆ.
ಏನಿದು ಘಟನೆ?:
ಬಿಯೋರಾದಲ್ಲಿ ಹರಿಯುವ ಅಜ್ನಾರ್ ನದಿಯು ಪ್ಲಾಸ್ಟಿಕ್, ಹೂಳು ಮತ್ತು ಪಾಚಿಯಿಂದ ತುಂಬಿ ಅಕ್ಷರಶಃ ಕಸದ ತೊಟ್ಟಿಯಂತಾಗಿತ್ತು. ಇದನ್ನು ಕಂಡು ಮರುಗಿದ ಬಿಟ್ಟು, ಜನವರಿ 26 ರಂದು ತನ್ನ ಸ್ನೇಹಿತರೊಂದಿಗೆ ಸೇರಿ ನದಿ ಸ್ವಚ್ಛಗೊಳಿಸಲು ಮುಂದಾದನು. ಆದರೆ, ಕೆಲಸದ ಕಠಿಣತೆ ಕಂಡು ಸ್ನೇಹಿತರು ಅರ್ಧಕ್ಕೇ ಕೈಕೊಟ್ಟು ಹೋದರು.
ಛಲ ಬಿಡದ ವಿಕ್ರಮ:

ಸ್ನೇಹಿತರು ಬರದಿದ್ದರೇನಂತೆ, ನದಿಯನ್ನು ಮೊದಲಿನಂತೆ ಸುಂದರಗೊಳಿಸಿಯೇ ಸೈ ಎಂದು ಬಿಟ್ಟು ಒಬ್ಬನೇ ಕಣಕ್ಕಿಳಿದನು. ವಾರಗಟ್ಟಲೆ ನದಿಯಲ್ಲಿ ನಿಂತು ಟನ್ ಗಟ್ಟಲೆ ಕಸ ತೆಗೆದಿದ್ದಾನೆ. ಈ ದೃಶ್ಯಗಳನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಆರಂಭದಲ್ಲಿ “ವೀವ್ಸ್ ಮತ್ತು ಲೈಕ್ಸ್‌ಗಾಗಿ ಹೀಗೆ ಮಾಡುತ್ತಿದ್ದಾನೆ” ಎಂದು ಹಲವರು ಟೀಕಿಸಿದರೂ, ಆತ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ.
ಆನಂದ್ ಮಹೀಂದ್ರಾ ಶ್ಲಾಘನೆ:
ಬಿಟ್ಟು ಅವರ ಈ ವಿಡಿಯೋವನ್ನು ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, “ಇವರೇ ನನ್ನ ಸೋಮವಾರದ ಇನ್ಸ್‌ಪಿರೇಷನ್” ಎಂದು ಬಣ್ಣಿಸಿದ್ದಾರೆ. “ಸೋಶಿಯಲ್ ಮೀಡಿಯಾ ಕೆಟ್ಟ ಕೆಲಸಗಳಿಗೆ ಬಳಕೆಯಾಗುತ್ತದೆ ಎಂಬ ಮಾತಿದೆ. ಆದರೆ ಇಂತಹ ಪರಿಸರ ಕಾಳಜಿಯ ಕೆಲಸಗಳಿಗೆ ಪ್ರೇರಣೆಯಾಗುತ್ತದೆ ಎಂದರೆ ಅದು ತಪ್ಪಲ್ಲ. ಇವನ ಪ್ರಯತ್ನ ನನ್ನ ನಿಜ ಜೀವನಕ್ಕೂ ಸ್ಪೂರ್ತಿ ನೀಡುವಂತಿದೆ” ಎಂದು ಬರೆದುಕೊಂಡಿದ್ದಾರೆ.






















