ಬೆಂಗಳೂರು, ಮಾ.25 www.bengaluruwire.com: ರಾಜಧಾನಿಯ ಘನತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಈಗ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಮತ್ತು ಲಾರಿ ಮಾಲೀಕರು-ಗುತ್ತಿಗೆದಾರರ ಸಂಘದ ನಡುವೆ ಶೀತಲ ಸಮರ ಆರಂಭವಾಗಿದೆ.
ಘನತ್ಯಾಜ್ಯ ಸಂಗ್ರಹಿಸುವ ಆಟೋ ಚಾಲಕರು ಮತ್ತು ಸಹಾಯಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಗುತ್ತಿಗೆದಾರರ ಆರೋಪಕ್ಕೆ, ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ಈಗ “ನಿಯಮಗಳ ಪಾಲನೆ”ಯ ಅಸ್ತ್ರದ ಮೂಲಕವೇ ತಿರುಗೇಟು ನೀಡಿದ್ದಾರೆ.
ಏನಿದು ವಿವಾದ?:
ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು-ಗುತ್ತಿಗೆದಾರರ ಸಂಘವು ಇತ್ತೀಚೆಗೆ ಬಿಎಸ್‌ಡಬ್ಲ್ಯುಎಂಎಲ್ ಸಿಇಓ ಕರೀಗೌಡ ಅವರಿಗೆ ಪತ್ರ ಬರೆದು, ಪ್ರಾಥಮಿಕ ಹಂತದ ತ್ಯಾಜ್ಯ ಸಂಗ್ರಹಣೆ ಮಾಡುವ ಕಾರ್ಮಿಕರನ್ನು ಚಿಂದಿ ಆಯುವವರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನೆ ವ್ಯಕ್ತಪಡಿಸಿತ್ತು. ಆದರೆ, ಈ ದೂರಿಗೆ ಪ್ರತಿಯಾಗಿ ಬಿಎಸ್‌ಡಬ್ಲ್ಯುಎಂಎಲ್ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳು ಹೊರಡಿಸಿರುವ ಆದೇಶವು ಗುತ್ತಿಗೆದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಧಿಕಾರಿಗಳ ತಿರುಗೇಟು:
ಗುತ್ತಿಗೆದಾರರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ತಪ್ಪು ಇರುವುದು ಸೇವಾದಾರ ಸಂಸ್ಥೆಗಳ ಕಡೆ ಎಂದು ಬೆಟ್ಟು ಮಾಡಿದ್ದಾರೆ. “ಸೇವಾದಾರ ಸಂಸ್ಥೆಗಳು ಮನೆಗಳಿಂದ ವಿಂಗಡಿಸಿದ ತ್ಯಾಜ್ಯವನ್ನು ಸಂಗ್ರಹಿಸುತ್ತಿಲ್ಲ, ಬದಲಿಗೆ ಮಿಶ್ರ ಕಸವನ್ನು ಸಾಗಿಸುತ್ತಿವೆ. ಅಲ್ಲದೆ, ಕಾರ್ಮಿಕರು ಕಡ್ಡಾಯವಾಗಿ ನೀಡಬೇಕಾದ ಸುರಕ್ಷತಾ ಉಡುಪು (Uniform), ಕೈಗವಸು ಮತ್ತು ಗಮ್‌ಬೂಟ್‌ಗಳನ್ನು ಧರಿಸದೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ” ಎಂದು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾರ್ಚ್ 26ಕ್ಕೆ ಪ್ರಗತಿ ಪರಿಶೀಲನಾ ಸಭೆ:
ಈ ಸಂಘರ್ಷದ ಬೆನ್ನಲ್ಲೇ, ಬಿಎಸ್‌ಡಬ್ಲ್ಯುಎಂಎಲ್ ಈಗ ಗುತ್ತಿಗೆದಾರರ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದೆ. ಪೂರ್ವ ಮತ್ತು ಪಶ್ಚಿಮ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಕುರಿತು ಮಾರ್ಚ್ 26ರಂದು ವಿಭಾಗವಾರು ‘ಪ್ರಗತಿ ಪರಿಶೀಲನಾ ಸಭೆ’ಯನ್ನು ಆಯೋಜಿಸಲಾಗಿದೆ. ಈ ಸಭೆಯ ಮೂಲಕ ನಿಯಮ ಉಲ್ಲಂಘಿಸುವ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.
ಒಟ್ಟಿನಲ್ಲಿ, ಕಾರ್ಮಿಕರ ಹಿತರಕ್ಷಣೆಯ ಹೆಸರಿನಲ್ಲಿ ಆರಂಭವಾದ ಈ ಜಟಾಪಟಿ, ಈಗ ನಿಯಮಗಳ ಪಾಲನೆ ಮತ್ತು ದಂಡ ವಿಧಿಸುವ ಎಚ್ಚರಿಕೆಯ ಹಂತಕ್ಕೆ ಬಂದು ನಿಂತಿದೆ.























