ಬೆಂಗಳೂರು, ಜ.01 www.bengaluruwire.com : ಅಂತು ಇಂತೂ ಬೆಂಗಳೂರಿನ ಬಹುನಿರೀಕ್ಷಿತ ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಹೊಸ ವರ್ಷ 2026ರ ಮೊದಲ ದಿನವಾದ ಗುರುವಾರ ಲೋಕಾರ್ಪಣೆಗೊಂಡಿದೆ.
ಹೊಸ ಲೂಪ್ ಅನ್ನು ಉದ್ಘಾಟಿಸಿದ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದೇ ವರ್ಷ ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ವ್ಯಾಪ್ತಿಯ ಪಾಲಿಕೆಗಳು ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಾಗುವುದು ಎಂದು ಮಹತ್ವದ ಘೋಷಣೆ ಮಾಡಿದರು. ಇದೇ ವೇಳೆ ಸರ್ಕಾರದ ಸಾಧನೆಗಳು ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಸಂಚಾರ ದಟ್ಟಣೆಗೆ ಮುಕ್ತಿ:
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಉತ್ತರ ಬೆಂಗಳೂರು ಭಾಗದ ವಾಹನ ಸವಾರರಿಗೆ ಅನುಕೂಲವಾಗುವಂತೆ ಹೆಬ್ಬಾಳ ಮೇಲ್ಸೇತುವೆಯ 2ನೇ ಲೂಪ್ ಅನ್ನು ತ್ವರಿತಗತಿಯಲ್ಲಿ ನಿರ್ಮಿಸಿ ಉದ್ಘಾಟಿಸಲಾಗಿದೆ. ಇದರಿಂದ ಈ ಭಾಗದಲ್ಲಿನ ದೀರ್ಘಕಾಲದ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದ್ದು, ಸುಗಮ ಸಂಚಾರಕ್ಕೆ ಹಾದಿ ಸುಗಮವಾಗಿದೆ ಎಂದು ಡಿಸಿಎಂ ತಿಳಿಸಿದರು.

ನೈಸ್ ವರ್ತನೆಗೆ ಆಕ್ರೋಶ – ಸ್ಕೈಡೆಕ್ ಸ್ಥಳಾಂತರ:
ನಗರದ ಪ್ರತಿಷ್ಠಿತ ಸ್ಕೈಡೆಕ್ ಯೋಜನೆಗೆ ನೈಸ್ (NICE) ಸಂಸ್ಥೆಯ ವಶದಲ್ಲಿರುವ ಕೆಐಎಡಿಬಿ ಜಾಗವನ್ನು ಪಡೆಯಲು ಸರ್ಕಾರ ನಿರ್ಧರಿಸಿತ್ತು. ಆದರೆ ನೈಸ್ ಸಂಸ್ಥೆಯು ತಕರಾರು ಎತ್ತಿರುವುದಕ್ಕೆ ಡಿಸಿಎಂ ಕೆಂಡಾಮಂಡಲವಾದರು. “ನೈಸ್ ನವರು ಸರ್ಕಾರಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ. ಅವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದು ನಮಗೆ ಗೊತ್ತಿದೆ. ಹೀಗಾಗಿ ಸ್ಕೈಡೆಕ್ ಯೋಜನೆಗಾಗಿ ಪರ್ಯಾಯವಾಗಿ ಬಿಡಿಎ ಜಾಗವನ್ನೇ ಗುರುತಿಸಲಾಗಿದೆ. ವಿಮಾನ ಹಾರಾಟದ ನಿಯಮಗಳನ್ನು ಪರಿಶೀಲಿಸಿ ಸೂಕ್ತ ಸ್ಥಳದಲ್ಲಿ ನಿರ್ಮಿಸಲಾಗುವುದು,” ಎಂದು ಸ್ಪಷ್ಟಪಡಿಸಿದರು.
ರೈತರಿಗೆ ಮತ್ತು ನಿರಾಶ್ರಿತರಿಗೆ ಪರಿಹಾರ:
ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗೆ ಭೂಮಿ ನೀಡುವ ರೈತರಿಗೆ ಶೇ. 35ರಷ್ಟು ವಾಣಿಜ್ಯ ಭೂಮಿಯನ್ನು ಪರಿಹಾರವಾಗಿ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇದೇ ವೇಳೆ, ಕೋಗಿಲು ನಿರಾಶ್ರಿತರ ವಿಚಾರವಾಗಿ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆಗೆ ಕಿಡಿಕಾರಿದರು. “ಕೋಗಿಲು ಪ್ರದೇಶದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ 80-90 ಅರ್ಹ ಕುಟುಂಬಗಳಿಗೆ ಸರ್ಕಾರದಿಂದ ಮನೆ ನೀಡಲಾಗುವುದು,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ಹ್ಯಾರಿಸ್, ಬಿಡಿಎ ಆಯುಕ್ತ ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.




















