ಬೆಂಗಳೂರು, ಮೇ.05 www.bengaluruwire.com: ಮುಂಬರುವ ಮುಂಗಾರು ಮಳೆಗಾಲದಲ್ಲಿ ನಗರದಲ್ಲಿ ಸಂಭವಿಸಬಹುದಾದ ಪ್ರವಾಹ ಮತ್ತು ಅವಘಡಗಳನ್ನು ತಡೆಯಲು ಬೆಂಗಳೂರು ಪಶ್ಚಿಮ ಹಾಗೂ ಉತ್ತರ ನಗರ ಪಾಲಿಕೆಗಳು ಸಮರೋಪಾದಿಯಲ್ಲಿ ಸಿದ್ಧತೆ ಆರಂಭಿಸಿವೆ.
ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ.ರಾಜೇಂದ್ರ ಕೆ.ವಿ ಹಾಗೂ ಉತ್ತರ ನಗರ ಪಾಲಿಕೆ ಆಯುಕ್ತ ಪೋಮ್ಮಲ ಸುನೀಲ್ ಕುಮಾರ್ ಅವರು ಇಂದು ಪ್ರತ್ಯೇಕ ಸಭೆ ಹಾಗೂ ಸ್ಥಳ ಪರಿಶೀಲನೆ ನಡೆಸಿ, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಪಶ್ಚಿಮ ವಲಯ: 112 ವಾರ್ಡ್‌ಗಳಲ್ಲಿ ಹದ್ದಿನ ಕಣ್ಣು:
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ 112 ವಾರ್ಡ್‌ಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ಡಾ. ರಾಜೇಂದ್ರ ಕೆ.ವಿ, ಪ್ರಮುಖ ರಸ್ತೆಗಳ ಚರಂಡಿಗಳಲ್ಲಿನ ಹೂಳೆತ್ತುವ ಕಾರ್ಯವನ್ನು ತಕ್ಷಣ ಪೂರ್ಣಗೊಳಿಸಲು ನಿರ್ದೇಶಿಸಿದರು. “ಶಿಥಿಲಗೊಂಡ ಕಟ್ಟಡಗಳು ಮತ್ತು ಗೋಡೆಗಳನ್ನು ಗುರುತಿಸಿ ತೆರವಿಗೆ ನೋಟಿಸ್ ನೀಡಬೇಕು. ಪಾದಚಾರಿ ಮಾರ್ಗದ ಒತ್ತುವರಿ ಹಾಗೂ ಒಣಗಿದ ಮರದ ರೆಂಬೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕು” ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಉತ್ತರ ಪಾಲಿಕೆ: ಸ್ಥಳ ಪರಿಶೀಲನೆ ಮತ್ತು ತುರ್ತು ಕ್ರಮಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೋಮ್ಮಲ ಸುನೀಲ್ ಕುಮಾರ್ ಅವರು ಪುಟ್ಟೆನಹಳ್ಳಿ ಕೆರೆ ರಸ್ತೆ, ಕೋಗಿಲು ಸರ್ಕಲ್, ಹೆಬ್ಬಾಳ ಮತ್ತು ನಾಗವಾರ ಸೇರಿದಂತೆ ವಿವಿಧ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದರು. ಮೆಟ್ರೋ ಕಾಮಗಾರಿ (BMRCL), ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಮತ್ತು ರಾಜಕಾಲುವೆಗಳಲ್ಲಿ ಕಸ ಸಂಗ್ರಹವಾಗದಂತೆ ‘ಟ್ರಾಶ್ ಬ್ಯಾರಿಯರ್’ ಅಳವಡಿಸಲು ಆದೇಶಿಸಿದರು.ವಿಶೇಷವಾಗಿ ಬ್ಯಾಟರಾಯನಪುರ ಮತ್ತು ಟಾಟಾ ನಗರ ಭಾಗದಲ್ಲಿ ಚರಂಡಿ ಅಗಲಿಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಹೆದ್ದಾರಿ ಬದಿಯ ಅಕ್ರಮ ಪಾರ್ಕಿಂಗ್ ತೆರವುಗೊಳಿಸಲು ಪೊಲೀಸ್ ಇಲಾಖೆಯ ಸಹಕಾರ ಕೋರಲಾಗಿದೆ. ಮಳೆಗಾಲ ಆರಂಭವಾಗುವ ಮೊದಲೇ ಎಲ್ಲಾ ಬಾಕಿ ಕಾಮಗಾರಿಗಳನ್ನು ಮುಗಿಸಲು ಗಡುವು ನೀಡಲಾಗಿದೆ.

ಸಂಜೆ 5 ಗಂಟೆಯ ಸುಮಾರಿಗೆ ನಗರದ ಕೆಲವು ಕಡೆಗಳಲ್ಲಿ ಹಗುರ ಮಳೆಯಾಯಿತು. ಕಳೆದ ಕಲೆವು ದಿನಗಳಿಂದ ಸುರಿದ ಮಳೆ ಹಾಗೂ ನಿನ್ನೆಯಿಂದ ಮೋಡ ಕವಿದ ವಾತಾವರಣ ಹಾಗೂ ಇಂದು ಸಂಜೆ ಸುರಿದ ಮಳೆಯಿಂದಾಗಿ ಬೆಂಗಳೂರಿಗರಿಗೆ ತಂಪನೆಯ ಅನುಭವವಾಗಿದೆ.






















