ಮುಂಬೈ, ಮೇ.02 www.bengaluruwire.com: ಮಾದಕವಸ್ತು ಮುಕ್ತ ಭಾರತದ ಗುರಿಯೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ಮಾದಕವಸ್ತು ನಿಯಂತ್ರಣ ಬ್ಯೂರೊ (NCB) ಅಧಿಕಾರಿಗಳು, ಮುಂಬೈನಲ್ಲಿ ಬೃಹತ್ ಅಂತರರಾಷ್ಟ್ರೀಯ ಡ್ರಗ್ಸ್ ಜಾಲವನ್ನು ಭೇದಿಸಿದ್ದಾರೆ.
ಶುಕ್ರವಾರ ನಡೆಸಿದ ‘ಆಪರೇಷನ್ ವೈಟ್ ಸ್ಟ್ರೈಕ್’ ಮೂಲಕ ಸುಮಾರು ₹1,745 ಕೋಟಿ ಮೌಲ್ಯದ 349 ಕೆಜಿ ಉತ್ತಮ ದರ್ಜೆಯ ಕೊಕೇನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಎನ್‌ಸಿಬಿ ಯಶಸ್ವಿಯಾಗಿದೆ.
ಆಪರೇಷನ್ ವೈಟ್ ಸ್ಟ್ರೈಕ್: ಆರು ತಿಂಗಳ ತಪಸ್ಸು
ಕಳೆದ ಆರು ತಿಂಗಳಿನಿಂದ ನಡೆಸಿದ ತೀವ್ರ ನಿಗಾ ಮತ್ತು ಗುಪ್ತಚರ ಮಾಹಿತಿ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ. ನವಿ ಮುಂಬೈ, ಥಾಣೆ, ಕಲಾಂಬೋಲಿ ಮತ್ತು ಭಿವಂಡಿ ಭಾಗದ ಲಾಜಿಸ್ಟಿಕ್ ಹಬ್‌ಗಳನ್ನು ಕೇಂದ್ರೀಕರಿಸಿ ಎನ್‌ಸಿಬಿ ದಾಳಿ ನಡೆಸಿತ್ತು. ಕಲಾಂಬೋಲಿಯ ಕೆಡಬ್ಲ್ಯೂಸಿ ವೇರ್‌ಹೌಸಿಂಗ್ ಸಂಕೀರ್ಣದ ಬಳಿ ವಾಹನವೊಂದನ್ನು ತಡೆದಾಗ, ಕ್ರಿಕೆಟ್ ಪ್ಯಾಡ್‌ಗಳು ಮತ್ತು ಕೈಗವಸುಗಳ ನಡುವೆ ಬಚ್ಚಿಟ್ಟಿದ್ದ 136 ಪ್ಯಾಕೆಟ್ ಕೊಕೇನ್ ಪತ್ತೆಯಾಗಿದೆ.

ಯಂತ್ರೋಪಕರಣಗಳ ಒಳಗೆ ಮಾದಕ ಲೋಕ:
ಕಳ್ಳಸಾಗಾಣಿಕೆದಾರರು ಈ ಮಾದಕವಸ್ತುವನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳ ಒಳಗೆ ಅತ್ಯಂತ ಚಾಣಾಕ್ಷತನದಿಂದ ಬಚ್ಚಿಟ್ಟಿದ್ದರು. ಒಂಬತ್ತು ಪದರಗಳ ಪಾಲಿಥಿನ್ ಚೀಲಗಳಲ್ಲಿ ಸುತ್ತಿ, ಮೇಲೆ ಕಪ್ಪು ಜಿಡ್ಡಿನ ಲೇಪನ ಹಚ್ಚುವ ಮೂಲಕ ಸ್ಕ್ಯಾನರ್‌ಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಇದು ಭಾರತದಲ್ಲಿ ವರ್ಷವೊಂದರಲ್ಲಿ ಸಿಗುವ ಒಟ್ಟು ಕೊಕೇನ್ ಪ್ರಮಾಣಕ್ಕಿಂತಲೂ (ಸರಾಸರಿ 200-300 ಕೆಜಿ) ಹೆಚ್ಚಿನದಾಗಿದ್ದು, ಇಲಾಖೆಯ ಇತಿಹಾಸದಲ್ಲೇ ದಾಖಲೆಯ ಜಪ್ತಿ ಎನಿಸಿಕೊಂಡಿದೆ.
ಕೇಂದ್ರ ಗೃಹ ಸಚಿವರ ಶ್ಲಾಘನೆ:
ಈ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ನಮ್ಮ ಸರ್ಕಾರ ಬದ್ಧವಾಗಿದೆ. ಎನ್‌ಸಿಬಿಯ ‘ಬಾಟಮ್ ಟು ಟಾಪ್’ ತನಿಖಾ ವಿಧಾನವು ಈ ಬೃಹತ್ ಜಾಲವನ್ನು ಭೇದಿಸಲು ಸಹಕಾರಿಯಾಗಿದೆ” ಎಂದು ಅಭಿನಂದಿಸಿದ್ದಾರೆ. ಭೂಗತ ಪಾತಕಿ ಸಲೀಂ ಡೋಲಾನ ಗಡಿಪಾರಿನ ಬೆನ್ನಲ್ಲೇ ಈ ದಾಳಿ ನಡೆದಿರುವುದು ಮಹತ್ವ ಪಡೆದಿದೆ.



















