ಬೆಂಗಳೂರು, ಏ.30 www.bengaluruwire.com: ಸಿಲಿಕಾನ್ ಸಿಟಿ ಜನರಿಗೆ ಶುದ್ಧ ಕಾವೇರಿ ನೀರನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಜಲಮಂಡಳಿ (BWSSB) ನಗರದ ಜನತೆಗೆ ಅನುಕೂಲಕ್ಕಾಗಿ ‘ಸರಳ ಕಾವೇರಿ’ ಯೋಜನೆಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿದೆ.
ಸಾರ್ವಜನಿಕರು ಈಗ ಸುಲಭ ಕಂತುಗಳ (EMI) ಮೂಲಕ ನೀರಿನ ಸಂಪರ್ಕ ಪಡೆಯಬಹುದಾಗಿದೆ. ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಈ ಘೋಷಣೆ ಮಾಡಿದರು. “ಪ್ರತಿ ಮನೆಗೂ ಕಾವೇರಿ ನೀರು ತಲುಪಬೇಕು ಎಂಬುದು ಸರ್ಕಾರದ ಸಂಕಲ್ಪ. ಆರ್ಥಿಕ ಮುಗ್ಗಟ್ಟಿನಿಂದಾಗಿ ನೀರಿನ ಸಂಪರ್ಕದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ರಿಯಾಯಿತಿ ನೀಡಲಾಗಿದೆ,” ಎಂದು ಅವರು ತಿಳಿಸಿದರು.
ಯೋಜನೆಯ ಪ್ರಮುಖ ಆಕರ್ಷಣೆಗಳು:
ಕೇವಲ 1,000 ರೂ. ಪಾವತಿಸಿ ಸಂಪರ್ಕ: 600 ಚದರ ಅಡಿವರೆಗಿನ ನಿವೇಶನ ಹೊಂದಿರುವವರು ಕೇವಲ 1,000 ರೂ. ಆರಂಭಿಕ ಮೊತ್ತ ಪಾವತಿಸಿ ಕಾವೇರಿ ಸಂಪರ್ಕ ಪಡೆಯಬಹುದು. ಬಾಕಿ ಮೊತ್ತವನ್ನು ಇಎಂಐ ಮೂಲಕ ಪಾವತಿಸಲು ಅವಕಾಶವಿದೆ.

ಅಪಾರ್ಟ್‌ಮೆಂಟ್‌ಗಳಿಗೆ ಬಂಪರ್ ಕೊಡುಗೆ: ಪ್ರೊರೇಟಾ ಶುಲ್ಕದ ಹೊರೆ ತಗ್ಗಿಸಲು, ಒಟ್ಟು ಮೊತ್ತದ ಶೇ. 20ರಷ್ಟು ಹಣ ಪಾವತಿಸಿ ಸಂಪರ್ಕ ಪಡೆಯಬಹುದು. ಉಳಿದ ಶೇ. 80ರಷ್ಟು ಹಣವನ್ನು 12 ತಿಂಗಳ ಕಂತುಗಳಲ್ಲಿ ಕಟ್ಟಲು ಅವಕಾಶ ನೀಡಲಾಗಿದೆ.
ವಾಣಿಜ್ಯ ಕಟ್ಟಡಗಳಿಗೂ ಅನ್ವಯ: ಕೇವಲ ವಸತಿ ಮನೆಗಳಲ್ಲದೆ, ನಾನ್-ಡೊಮೆಸ್ಟಿಕ್ (ವಾಣಿಜ್ಯ) ಗ್ರಾಹಕರಿಗೂ ಈ ಇಎಂಐ ಸೌಲಭ್ಯವನ್ನು ವಿಸ್ತರಿಸಿರುವುದು ವಿಶೇಷ.
ಬೆಂಗಳೂರು ಜಲಮಂಡಳಿಯು ಈಗಾಗಲೇ ‘ಸಂಚಾರಿ ಕಾವೇರಿ’ ಮತ್ತು ‘ಸ್ಕಾಡಾ’ ತಂತ್ರಜ್ಞಾನದ ಮೂಲಕ ಜನಸ್ನೇಹಿ ಸೇವೆ ನೀಡುತ್ತಿದ್ದು, ಈ ಯೋಜನೆಯು ಮಧ್ಯಮ ವರ್ಗದವರಿಗೆ ಮತ್ತು ಬಡವರಿಗೆ ವರದಾನವಾಗಲಿದೆ.




















