ನವದೆಹಲಿ/ಜಾಮ್‌ನಗರ, ಮಾ.29 www.bengaluruwire.com: ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ಭುಗಿಲೆದ್ದಿರುವ ಯುದ್ಧದ ಭೀತಿಯ ನಡುವೆಯೇ, ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ಭಾರತದ ಎರಡು ಪ್ರಮುಖ ಎಲ್‌ಪಿಜಿ ಟ್ಯಾಂಕರ್‌ಗಳು ಸುರಕ್ಷಿತವಾಗಿ ಭಾರತದ ಕರಾವಳಿ ತಲುಪಿವೆ.
ಸುಮಾರು 47,000 ಟನ್ ಅಡುಗೆ ಅನಿಲ ಹೊತ್ತಿದ್ದ ‘ಜಗ್ ವಸಂತ್’ ಹಡಗು ಶುಕ್ರವಾರ ರಾತ್ರಿ ಗುಜರಾತ್‌ನ ವಡಿನಾರ್ ಬಂದರಿಗೆ ಬಂದಿಳಿಯುವ ಮೂಲಕ ದೇಶದ ಇಂಧನ ಭದ್ರತೆಗೆ ದೊಡ್ಡ ಸಮಾಧಾನ ತಂದಿದೆ.
ಸುರಕ್ಷಿತವಾಗಿ ಬಂದಿಳಿದ ಹಡಗುಗಳು:
ಭಾರತೀಯ ಧ್ವಜ ಹೊಂದಿರುವ ‘ಜಗ್ ವಸಂತ್’ ಹಡಗು ಮಾರ್ಚ್ 27ರ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ದೀನದಯಾಳ್ ಬಂದರು ಪ್ರಾಧಿಕಾರದ ವಡಿನಾರ್ ಟರ್ಮಿನಲ್‌ನಲ್ಲಿ ಲಂಗರು ಹಾಕಿತು. ಕುವೈತ್‌ನಿಂದ ಎಲ್‌ಪಿಜಿ ತುಂಬಿಸಿಕೊಂಡಿದ್ದ ಈ ಬೃಹತ್ ಹಡಗು ಫೆಬ್ರವರಿ 28ರಂದು ಯುದ್ಧ ಘೋಷಣೆಯಾದಾಗಿನಿಂದ ಜಲಸಂಧಿಯಲ್ಲಿ ಅತಂತ್ರವಾಗಿತ್ತು.

ಇರಾನ್ ಅಧಿಕಾರಿಗಳೊಂದಿಗೆ ಭಾರತ ನಡೆಸಿದ ರಾಜತಾಂತ್ರಿಕ ಸಂವಹನದ ಫಲವಾಗಿ, ಇರಾನ್ ನೌಕಾಪಡೆಯು ಸೂಚಿಸಿದ ಪ್ರತ್ಯೇಕ ‘ಸುರಕ್ಷಿತ ಮಾರ್ಗ’ದ (Safe Route) ಮೂಲಕ ಈ ಹಡಗು ಹೊರಬಂದಿದೆ. ಇದರ ಬೆನ್ನಲ್ಲೇ ಪೈನ್ ಗ್ಯಾಸ್ (Pine Gas) ಹೊತ್ತ ಮತ್ತೊಂದು ಟ್ಯಾಂಕರ್ ಕೂಡ ಭಾರತದ ಗಡಿ ಪ್ರವೇಶಿಸಿದ್ದು, ಏಪ್ರಿಲ್ 2ರಂದು ಒಡಿಶಾದ ಧಮ್ರಾ ಬಂದರನ್ನು ತಲುಪುವ ನಿರೀಕ್ಷೆಯಿದೆ.
ಇನ್ನೂ 20 ಹಡಗುಗಳ ಅತಂತ್ರ ಸ್ಥಿತಿ:
ಎರಡು ಹಡಗುಗಳು ಬಂದಿಳಿದಿದ್ದರೂ, ಹಾರ್ಮುಜ್ ಜಲಸಂಧಿಯಲ್ಲಿನ ಆತಂಕ ಮಾತ್ರ ದೂರವಾಗಿಲ್ಲ. ವರದಿಗಳ ಪ್ರಕಾರ, ಇನ್ನೂ ಸುಮಾರು 18 ರಿಂದ 20 ಭಾರತೀಯ ಹಡಗುಗಳು ಇರಾನ್ ಅನುಮತಿಗಾಗಿ ಜಲಸಂಧಿಯ ಬಳಿಯೇ ಕಾಯುತ್ತಿವೆ. ಇದರಲ್ಲಿ ಜಗ್ ವಿಕ್ರಮ್, ಗ್ರೀನ್ ಆಶಾ ಮತ್ತು ಗ್ರೀನ್ ಸಾನ್ವಿ ಎಂಬ ಮೂರು ಪ್ರಮುಖ ಎಲ್‌ಪಿಜಿ ಹಡಗುಗಳು ಸೇರಿವೆ. ಈ ಹಡಗುಗಳಲ್ಲಿ 670ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿ ಇದ್ದು, ನೌಕಾಪಡೆಯ ಸೂಚನೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಇರಾನ್ ವಿಧಿಸಿದ ಕಟ್ಟುನಿಟ್ಟಿನ ನಿಯಮ:
ಯುದ್ಧದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯನ್ನು ತನ್ನ ನಿಯಂತ್ರಣಕ್ಕೆ ಪಡೆದಿರುವ ಇರಾನ್, ಯಾವುದೇ ಹಡಗು ಈ ಮಾರ್ಗದ ಮೂಲಕ ಹಾದುಹೋಗಬೇಕಾದರೆ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದು ಸೂಚಿಸಿದೆ. ಭಾರತದ ಹಡಗುಗಳು ಇರಾನ್‌ನ ದಕ್ಷಿಣ ಕರಾವಳಿಯ ‘ಖೆಶ್ಮ್’ (Qeshm) ಮತ್ತು ‘ಲಾರಕ್’ (Larak) ದ್ವೀಪಗಳ ಹತ್ತಿರದ ಮಾರ್ಗವನ್ನೇ ಬಳಸುತ್ತಿವೆ. ಹಡಗುಗಳು ತಮ್ಮ ಗುರುತನ್ನು ಸ್ಪಷ್ಟಪಡಿಸಲು ಟ್ರಾನ್ಸ್‌ಪಾಂಡರ್‌ಗಳನ್ನು ಆನ್‌ನಲ್ಲಿರಿಸಿದ್ದು, ಭಾರತೀಯ ನೌಕಾಪಡೆಯು ಇರಾನ್ ನೌಕಾಪಡೆಯೊಂದಿಗೆ ಸಮನ್ವಯ ಸಾಧಿಸುತ್ತಿದೆ.























