ಬೆಂಗಳೂರು, ಮಾ.22 www.bengaluruwire.com : ಸಿಲಿಕಾನ್ ಸಿಟಿಯ ಹೃದಯಭಾಗವಾದ ಅನಿಲ್ ಕುಂಬ್ಳೆ ವೃತ್ತದಲ್ಲಿ ಐಷಾರಾಮಿ ಕಾರಿನ ಮೂಲಕ ಅಪಾಯಕಾರಿ ರೀತಿಯಲ್ಲಿ ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಘಟನೆಯ ಹಿನ್ನೆಲೆಯೇನು?:
ಕೆಲ ದಿನಗಳ ಹಿಂದೆ ತಡರಾತ್ರಿ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಲ್ಯಾಂಬೊರ್ಗಿನಿ ಕಾರೊಂದು ಸಾರ್ವಜನಿಕರ ಜೀವಕ್ಕೆ ಅಪಾಯ ತರುವಂತೆ ಸತತವಾಗಿ ಎರಡು-ಮೂರು ಬಾರಿ ಡ್ರಿಫ್ಟಿಂಗ್ ನಡೆಸಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಚಾರ ಪೊಲೀಸರು ತನಿಖೆ ಆರಂಭಿಸಿದ್ದರು.
ಕಾರು ವಶಕ್ಕೆ ಪಡೆದ ಪೊಲೀಸರು:
ತನಿಖೆಯ ಭಾಗವಾಗಿ ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ರವಿ ನೇತೃತ್ವದ ತಂಡವು KA 05 NR 0009 ನೋಂದಣಿ ಸಂಖ್ಯೆಯ ಲ್ಯಾಂಬೊರ್ಗಿನಿ ಕಾರನ್ನು ವಶಕ್ಕೆ ಪಡೆದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ರಿಕ್ಕಿ ರೈ ಅವರೇ ಕಾರನ್ನು ಚಲಾಯಿಸುತ್ತಿದ್ದರು ಎಂಬ ಪ್ರಾಥಮಿಕ ಸುಳಿವು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ದಾಖಲೆಗಳ ಪರಿಶೀಲನೆಗಾಗಿ ಪೊಲೀಸರು ಈಗಾಗಲೇ ಆರ್‌ಟಿಒ (RTO) ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ತೀವ್ರಗೊಂಡ ಪೊಲೀಸ್ ತನಿಖೆ:
“ಸಾರ್ವಜನಿಕ ರಸ್ತೆಯಲ್ಲಿ ಇಂತಹ ಸಾಹಸ ಪ್ರದರ್ಶನ ಕಾನೂನುಬಾಹಿರ. ಈ ಬಗ್ಗೆ ರಿಕ್ಕಿ ರೈ ಅವರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದೇವೆ. ಕಾರಿನ ಮಾಲೀಕತ್ವ ಮತ್ತು ಅಂದಿನ ಘಟನೆಯ ಸಂಪೂರ್ಣ ಸಿಸಿಟಿವಿ ತುಣುಕುಗಳನ್ನು ಸಾಕ್ಷ್ಯವಾಗಿ ಸಂಗ್ರಹಿಸಲಾಗಿದೆ,” ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಐಷಾರಾಮಿ ಕಾರು ಪೊಲೀಸ್ ಠಾಣೆಯ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.





















