ಬೆಂಗಳೂರು, ಜು.21 www.bengaluruwire.com : ನಗರದ ಪ್ರಮುಖ ಸಂಚಾರ ಕೇಂದ್ರವಾದ ಹೆಬ್ಬಾಳ ಜಂಕ್ಷನ್‌ನಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಜಂಟಿ ಪರಿಶೀಲನೆ ವೇಳೆ ಅವರು ಈ ನಿರ್ದೇಶನ ನೀಡಿದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ಬಹುಮುಖಿ ಯೋಜನೆಗಳು :
ಹೆಬ್ಬಾಳ ಜಂಕ್ಷನ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೊದಲ ಹಂತದ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರ ಜೊತೆಗೆ ಮೆಟ್ರೋ, ಕೆ-ರೈಡ್ ಸಬ್‌ಅರ್ಬನ್ ರೈಲ್ವೆ ಮತ್ತು ಪಾಲಿಕೆಯಿಂದ ಟನಲ್ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಇವುಗಳನ್ನು ಗಮನದಲ್ಲಿಟ್ಟುಕೊಂಡು ಜಂಕ್ಷನ್ ಅಭಿವೃದ್ಧಿಗೆ ಸೂಕ್ತ ವಿನ್ಯಾಸ ರೂಪಿಸಲು ರಾವ್ ಸೂಚಿಸಿದರು.
ಪಾದಚಾರಿಗಳ ಸುರಕ್ಷಿತ ಓಡಾಟಕ್ಕಾಗಿ ಸರಿಯಾದ ಪಾದಚಾರಿ ಮಾರ್ಗಗಳು, ಕ್ರಾಸಿಂಗ್ ಮತ್ತು ಮಾರ್ಕಿಂಗ್‌ಗಳನ್ನು ಒದಗಿಸುವಂತೆ ಅವರು ನಿರ್ದೇಶನ ನೀಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ನಾಗವಾರ ಮತ್ತು ಕೆ.ಆರ್. ಪುರಂ ಜಂಕ್ಷನ್‌ಗಳಲ್ಲಿ ಪರಿಶೀಲನೆ :
ನಾಗವಾರ ಜಂಕ್ಷನ್‌ನಲ್ಲಿ ಪ್ರಗತಿಯಲ್ಲಿರುವ ಮೆಟ್ರೋ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿದ ರಾವ್, ಮಳೆಗಾಲದಲ್ಲಿ ಜಲಾವೃತವಾಗುವುದನ್ನು ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಮತ್ತು ಹೊಸ ಪೈಪ್‌ಲೈನ್ ಅಳವಡಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು. ಸೈಡ್ ಡ್ರೈನ್‌ಗಳ ಸ್ವಚ್ಛತೆ ಕಾಪಾಡುವಂತೆ ಹಾಗೂ ಅನಧಿಕೃತವಾಗಿ ಒತ್ತುವರಿ ಮಾಡಿರುವ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸಿ ದುರಸ್ತಿಪಡಿಸಲು ನಿರ್ದೇಶನ ನೀಡಿದರು.
ಕೆ.ಆರ್. ಪುರಂ ಮೆಟ್ರೋ ನಿಲ್ದಾಣದ ಬಳಿ ಸುಗಮ ಪಾದಚಾರಿ ಮಾರ್ಗ ನಿರ್ಮಿಸಲು ಮತ್ತು ಮೇಲ್ಸೇತುವೆ ಕೆಳಭಾಗವನ್ನು ಸ್ವಚ್ಛ ಹಾಗೂ ಸುಂದರವಾಗಿಡುವಂತೆ ಸೂಚಿಸಲಾಯಿತು.
ಮಹದೇವಪುರ ವಲಯದಲ್ಲಿ ಹಲವು ಸೂಚನೆಗಳು :
ಮಹದೇವಪುರ ವಲಯ ವ್ಯಾಪ್ತಿಯ ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು. ತಳಮಹಡಿಗಳಲ್ಲಿ (ಬೆಸ್ಮೆಂಟ್) ಅನಧಿಕೃತವಾಗಿ ನಿರ್ಮಿಸಿರುವ ಮಳಿಗೆಗಳಿಗೆ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಪಾರ್ಕಿಂಗ್‌ಗೆ ಮೀಸಲಾದ ಜಾಗಗಳಲ್ಲಿ ಮಳಿಗೆ ನಿರ್ಮಾಣ ಮಾಡುವುದು ಕಾನೂನುಬಾಹಿರ ಎಂದು ಅವರು ಸ್ಪಷ್ಟಪಡಿಸಿದರು.
ಕೆರೆ ಅಭಿವೃದ್ಧಿ ಮತ್ತು ಕಾಮಗಾರಿ ನಿರ್ವಹಣೆ :
ಮಹದೇವಪುರ ವಲಯದಲ್ಲಿರುವ 52 ಕೆರೆಗಳ ಅಭಿವೃದ್ಧಿಗೆ ಪ್ರತ್ಯೇಕ ಸಮಗ್ರ ಯೋಜನೆ ರೂಪಿಸಲು, ಒತ್ತುವರಿ ಗುರುತಿಸಲು ಮತ್ತು ನೀರುಗಾಲುವೆಗಳ ಅಭಿವೃದ್ಧಿಗೆ ಒತ್ತು ನೀಡಲು ಸೂಚಿಸಿದರು. ಕಾಮಗಾರಿಗಳ ನಿರ್ವಹಣೆಗಾಗಿ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಮಾಹಿತಿ ಲಭ್ಯತೆ ಸುಧಾರಿಸಲು ನಿರ್ದೇಶನ ನೀಡಿದರು.
ಭೂಸ್ವಾಧೀನ, ಮಳೆನೀರು ನಿರ್ವಹಣೆ ಮತ್ತು ಇ-ಖಾತಾ ಮೇಳ :
ಹೂಡಿ ಜಂಕ್ಷನ್‌ನಲ್ಲಿ ಕೆಳಸೇತುವೆ ಮತ್ತು ಪಣತ್ತೂರು ಎಸ್-ಕ್ರಾಸ್ ಬಳಿ ರಸ್ತೆ ಅಗಲೀಕರಣ ಸೇರಿದಂತೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಟಿ.ಡಿ.ಆರ್. ಮೂಲಕ ಇತ್ಯರ್ಥಪಡಿಸುವಂತೆ ಸೂಚಿಸಲಾಯಿತು. ಮಳೆಗಾಲದ ಹಿನ್ನೆಲೆಯಲ್ಲಿ ಬೃಹತ್ ನೀರುಗಾಲುವೆಗಳು ಮತ್ತು ಸೈಡ್ ಡ್ರೈನ್‌ಗಳನ್ನು ಹೂಳೆತ್ತಿ ಸ್ವಚ್ಛವಾಗಿಡುವಂತೆ ಮತ್ತು ಸಾಯಿ ಲೇಔಟ್‌ನಲ್ಲಿ ಪ್ರವಾಹ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಯಿತು.
ನಾಗರಿಕರಿಗೆ ಅನುಕೂಲವಾಗುವಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ‘ಬೃಹತ್ ಇ-ಖಾತಾ ಮೇಳ’ ಆಯೋಜಿಸಲು ಸಹ ರಾವ್ ಸೂಚನೆ ನೀಡಿದರು. ಮಹದೇವಪುರ ವಲಯ ಆಯುಕ್ತ ರಮೇಶ್ ಅವರು ವಲಯದಲ್ಲಿ 85 ಸಾವಿರ ವಿದ್ಯುತ್ ಬೀದಿ ದೀಪಗಳಿದ್ದು, ಹೆಚ್ಚುವರಿ 10 ಸಾವಿರ ಕಂಬಗಳಿಗೆ ಹೊಸ ದೀಪ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.






















