ಬೆಂಗಳೂರು, ಜು.21 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳಿಗೆ ಪ್ರತಿನಿತ್ಯ ಮಾಂಸಾಹಾರಿ ಊಟ ಒದಗಿಸಲು ₹2.80 ಕೋಟಿ ಮೊತ್ತದ ಟೆಂಡರ್ ಆಹ್ವಾನಿಸುವ ಬದಲು ಅವುಗಳಿಗೆ ಶಾಶ್ವತ ನೆಲೆಯನ್ನು ಕಲ್ಪಿಸಬೇಕೆಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಶೇ. 1.5ರಷ್ಟು ನಾಯಿಗಳಿಗೆ ಮಾತ್ರ ಬಾಡೂಟ ಹಾಕುವ ಪಾಲಿಕೆ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಿಬಿಎಂಪಿಯ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರಾದ ವಿಕಾಸ್ ಸುರೋಳ್ಕರ್ ಕಿಶೋರ್, 5 ಸಾವಿರ ಬೀದಿ ನಾಯಿಗಳಿಗೆ ಮಾಂಸಾಹಾರಿ ಊಟ ನೀಡಲು ₹2.80 ಕೋಟಿ ಟೆಂಡರ್ ಆಹ್ವಾನಿಸಿರುವ ಬಗ್ಗೆ ಮಾಹಿತಿ ನೀಡಿದ್ದರು.
ಆದರೆ, ಎರಡು ವರ್ಷಗಳ ಹಿಂದೆ ಡಾ. ತ್ರಿಲೋಕ್ ಚಂದ್ರ ಅವರು ನಡೆಸಿದ ಸಮೀಕ್ಷೆ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 3.40 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಇವುಗಳಲ್ಲಿ ಕೇವಲ 5 ಸಾವಿರ ನಾಯಿಗಳಿಗೆ ಮಾತ್ರ ಬಾಡೂಟ ನೀಡಲು ಮುಂದಾಗಿರುವ ಕ್ರಮ ಹಾಸ್ಯಾಸ್ಪದ ಎಂದು ರಮೇಶ್ ಬಣ್ಣಿಸಿದ್ದಾರೆ. “ಒಂದು ಮನೆಯಲ್ಲಿ ಎಲ್ಲ ಸದಸ್ಯರಿಗೂ ಒಂದೇ ರೀತಿಯಾದ ಮತ್ತು ಒಂದೇ ಪ್ರಮಾಣದ ಆಹಾರ ಸಿಗಬೇಕಿರುವುದು ನ್ಯಾಯವಾದುದಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರಿ ಸ್ವತ್ತುಗಳ ಸಮರ್ಪಕ ಬಳಕೆ ಮಾಡಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಸರ್ಕಾರಿ ಸ್ವತ್ತುಗಳಿರುವುದು ರಮೇಶ್ ಅವರ ಮನವಿಯಲ್ಲಿ ಬೆಳಕಿಗೆ ಬಂದಿದೆ. ಆರ್.ಟಿ.ಐ. ಕಾಯ್ದೆಯಡಿ ಪಡೆದಿರುವ ದಾಖಲೆಗಳ ಪ್ರಕಾರ, ಹಳೆಯ 3 ವಲಯಗಳನ್ನು ಹೊರತುಪಡಿಸಿ, ಹೊಸ 5 ವಲಯಗಳಾದ ಮಹದೇವಪುರ, ಯಲಹಂಕ, ದಾಸರಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 6,712 ಎಕರೆ ಗೋಮಾಳ ಜಮೀನುಗಳು ಮತ್ತು 4,410 ಎಕರೆ ‘ಬಿ’ ಖರಾಬು ಜಮೀನುಗಳು ಸೇರಿದಂತೆ ಒಟ್ಟು 11,122 ಎಕರೆ ಸರ್ಕಾರಿ ಸ್ವತ್ತುಗಳಿವೆ.
ಈ ಜಮೀನುಗಳ ಪೈಕಿ ಬಿಬಿಎಂಪಿಯ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ತಲಾ 25 ಎಕರೆಗಳಷ್ಟು ಜಮೀನನ್ನು ರಾಜ್ಯ ಸರ್ಕಾರದ ಅನುಮತಿ ಪಡೆದು, ತಲಾ ₹2 ಕೋಟಿ ವೆಚ್ಚದಲ್ಲಿ ಶಾಶ್ವತ ಬೇಲಿ ಹಾಗೂ ತಲಾ 3-4 ಐಸಿಯು ಘಟಕಗಳು ಮತ್ತು ಆಪರೇಷನ್ ಥಿಯೇಟರ್‌ಗಳನ್ನು ಹೊಂದಿರುವ ಶ್ವಾನ ವೈದ್ಯಶಾಲೆಗಳು ಮತ್ತು ಬೀದಿ ನಾಯಿಗಳ ಆರೈಕೆ ಕೇಂದ್ರಗಳನ್ನು ನಿರ್ಮಿಸುವಂತೆ ರಮೇಶ್ ಒತ್ತಾಯಿಸಿದ್ದಾರೆ. ಇದರಿಂದ ಮಕ್ಕಳ ಮತ್ತು ನಾಗರಿಕರ ಮೇಲಿನ ನಾಯಿಗಳ ದಾಳಿಯನ್ನು ತಡೆಯಬಹುದು ಎಂದು ಅವರು ಹೇಳಿದ್ದಾರೆ.
ಎನ್‌ಜಿಒ, ಹೋಟೆಲ್‌ಗಳಿಂದ ನೆರವು:
ಬಿಬಿಎಂಪಿ ವ್ಯಾಪ್ತಿಯಲ್ಲಿ ನೂರಾರು ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಬೀದಿ ನಾಯಿಗಳಿಗೆ ಉಚಿತವಾಗಿ ಊಟ ನೀಡಲು ಮುಂದೆ ಬಂದಿವೆ. ಅಲ್ಲದೆ, 2,600ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳು ಮತ್ತು 30,000ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಪ್ರತಿನಿತ್ಯ ಉಳಿಯುವ ಹತ್ತಾರು ಟನ್ ಊಟವನ್ನು ಇಂತಹ ಶ್ವಾನ ಕೇಂದ್ರಗಳಿಗೆ ಉಚಿತವಾಗಿ ಸಾಗಿಸಲು ನೂರಾರು ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದಿವೆ ಎಂದು ರಮೇಶ್ ತಿಳಿಸಿದ್ದಾರೆ.
ಆದ್ದರಿಂದ, ₹10-15 ಕೋಟಿ ವೆಚ್ಚದಲ್ಲಿ ನಾಲ್ಕು ದಿಕ್ಕುಗಳಲ್ಲಿ ತಲಾ 25 ಎಕರೆ ಪ್ರದೇಶದಲ್ಲಿ “ಬೀದಿ ಶ್ವಾನಗಳ ಆರೈಕೆ ಕೇಂದ್ರ”ಗಳನ್ನು ಪ್ರಾರಂಭಿಸಿ, ಶಾಶ್ವತ ನೆಲೆ ಕಲ್ಪಿಸುವ ಮೂಲಕ ವಸತಿ ಪ್ರದೇಶಗಳಲ್ಲಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎನ್.ಆರ್. ರಮೇಶ್ ಬಿಬಿಎಂಪಿ ಆಡಳಿತಕ್ಕೆ ಮನವಿ ಮಾಡಿದ್ದಾರೆ.






















