ಬೆಂಗಳೂರು, ಏ.04 www.bengaluruwire.com : ಬಿಬಿಎಂಪಿಯ 2025-26ನೇ ಸಾಲಿಗಾಗಿ ಮಾ.29ರಂದು ಮಂಡಿಸಿದ್ದ ಬೃಹತ್ ಗಾತ್ರದ ಬಜೆಟ್ 19,930.64 ಕೋಟಿ ರೂ.ಗಳಿಂದ 20,440.33 ಕೋಟಿ ರೂ.ಗಳಷ್ಟು ಹೆಚ್ಚಿದೆ. ಅಂದರೆ ₹509.69 ಕೋಟಿಯಷ್ಟು ಅನುದಾನ ಹೆಚ್ಚಳ ಮಾಡಿ, ಸರ್ಕಾರ ಇದಕ್ಕೆ ಅನುಮೋದನೆಯ ಮುದ್ರೆಯೊತ್ತಿದೆ.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರೇ ಬಿಬಿಎಂಪಿಯ ಆಡಳಿತಾಧಿಕಾರಿ ಯಾಗಿದ್ದು, ಮಾರ್ಚ್ 31 ರಂದು ಪಾಲಿಕೆ ಇತಿಹಾಸದಲ್ಲೇ ಅತಿದೊಡ್ಡ ಬಜೆಟ್ ಎಂಬ ಕಾರಣಕ್ಕೆ ಸುದ್ದಿಯಾಗಿದ್ದ ಪಾಲಿಕೆಯ ಆಯವ್ಯಯಕ್ಕೆ ಮತ್ತಷ್ಟು ಅನುದಾನ ಹೆಚ್ಚಿಸಿ, ತಮ್ಮ ಅನುಮೋದನೆ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಯಮ (ಆರ್ಥಿಕ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ) 2021 4(2)ರ ಮಿತಿಗಿಂತ ₹1,806.66 ಕೋಟಿಯಷ್ಟು ಹೆಚ್ಚುವರಿ ಗಾತ್ರದ ಬಜೆಟ್ ತಯಾರಿಸಲಾಗಿದೆ ಎಂದು ವಿವರಿಸುತ್ತಾ, ಅದೇ ನಿಯಮ 4(3)ರನ್ವಯ ಮತ್ತಷ್ಟು ಬಜೆಟ್ ನಲ್ಲಿ ಮಾರ್ಪಾಟು, ಹೆಚ್ಚಳ ಮಾಡಿ 2025-26ನೇ ಸಾಲಿನ ಬಜೆಟ್ ಅಂದಾಜುಗಳಿಗೆ ಸರ್ಕಾರ ಅನುಮೋದನೆ ನೀಡಿದೆ.
ವಿಶೇಷ ಅಂದರೆ ಬೆಂಗಳೂರು ನಗರಾಭಿವೃದ್ಧಿ ಸಚಿವರ ವಿವೇಚನಾ ಕೋಟಾ ಅನುದಾನದ ಮೊತ್ತವನ್ನು ಹಿಂದೆ ₹ 135.32 ಕೋಟಿಯಷ್ಟಿತ್ತು. ಇದನ್ನು ₹224.69 ಕೋಟಿಯಷ್ಟು ಹೆಚ್ಚಳ ಮಾಡಲಾಗಿದೆ.

2024-25ನೇ ಸಾಲಿನ ಒಟ್ಟಾರೆ ಸ್ವೀಕೃತಿಯ ಪ್ರಗತಿಯ ಆಧಾರದಲ್ಲಿ, ಆದಾಯ ಸೋರಿಕೆ ತಡೆಗಟ್ಟುವಿಕೆ, ಕರ ಸಂಗ್ರಹದಲ್ಲಿ ದಕ್ಷತೆ, ತೆರಿಗೆ ವ್ಯಾಪ್ತಿಯ ಹಿಗ್ಗಿಸುವಿಕೆ, ನೂತನ ಜಾಹೀರಾತು ನೀತಿ, ಪ್ರೀಮಿಯಂ ಎಫ್ಎಆರ್ ನೀತಿ, ಸರ್ಕಾರದ ಹೆಚ್ಚುವರಿ ಅನುದಾನ ಹಾಗೂ ವಿಶ್ವ ಬ್ಯಾಂಕ್ ನೆರವನ್ನು ಗಣನೆಗೆ ತೆಗೆದುಕೊಂಡು, 2025-26ನೇ ಸಾಲಿನ ಬಜೆಟ್ ಅನ್ನು ಪಾಲಿಕೆಯ ಅಗತ್ಯಕ್ಕನುಸಾರವಾಗಿ ತಯಾರಿಸಲಾಗಿದೆ. ಆದರೆ, ಇದು ಬಿಬಿಎಂಪಿ 2021ರ ಆರ್ಥಿಕ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ನಿಯಮದ ಮಿತಿಗಿಂತ ಹೆಚ್ಚಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅನುಮೋದನೆ ಪತ್ರದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಅವರು ವಿವರಿಸಿದ್ದಾರೆ.
ಆರ್ಥಿಕ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ನಿಯಮದ ಮಿತಿಗಿಂತ ಹೆಚ್ಚಾಗಿದೆ ಎಂದು ಹೇಳಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಏಳು ವಿಷಯಗಳಿಗೆ ಹೆಚ್ಚು ಅನುದಾನವನ್ನು ನಿಗದಿಪಡಿಸಿ, ಬಜೆಟ್ ಗಾತ್ರವನ್ನು ಹೆಚ್ಚಿಸಿ ಅನುಮೋದನೆ ಕೊಟ್ಟಿದ್ದಾರೆ. ಅಲ್ಲದೆ ಬಿಬಿಎಂಪಿಯು ಹೆಚ್ಚುವರಿಯಾಗಿ ಸಂಗ್ರಹಿಸಬಹುದಾದ ಆದಾಯವನ್ನು ಖಾತರಿಪಡಿಸಿಕೊಂಡು, ಹೆಚ್ಚುವರಿ ಅನುದಾನವನ್ನು ಕಾಮಗಾರಿಗಳಲ್ಲಿ ಬಳಸಿಕೊಳ್ಳಲು 2025-26ನೇ ಸಾಲಿನ ಬಜೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಅನುದಾನ ಹೆಚ್ಚಳ ಯಾರು ಯಾರಿಗೆ? :
ಕಲುಷಿತ ಕೆರೆ, ರಾಜಕಾಲುವೆ, ಚರಂಡಿ ನೀರು ಸಂಸ್ಕರಣೆಯ ಕಾಮಗಾರಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೆ (BSWML) ನಿಗದಿಪಡಿಸಲಾಗಿರುವ ₹486 ಕೋಟಿಯನ್ನು ₹586 ಕೋಟಿಗೆ ಹೆಚ್ಚಿಸಲಾಗಿದೆ. ಅಂದರೆ 100 ಕೋಟಿ ರೂ. ಅನುದಾನ ಹೆಚ್ಚಳ. ಬೆಂಗಳೂರು ನಗರಾಭಿವೃದ್ಧಿ ಸಚಿವರ ವಿವೇಚನಾ ಕೋಟಾದಡಿ ನಿಗದಿಪಡಿಸಿರುವ ಅನುದಾನದ ಮೊತ್ತವನ್ನು ₹135.31 ಕೋಟಿಯಿಂದ ₹360 ಕೋಟಿಗೆ ಮರು (₹224.69 ಕೋಟಿ ಏರಿಕೆ) ನಿಗದಿಪಡಿಸಲಾಗಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಕಟ್ಟಡ ನಿರ್ಮಾಣ ₹50 ಕೋಟಿ. ಸರ್ಕಾರದ ಕಾರ್ಯಕ್ರಮಗಳ ಪ್ರಚಾರ, ಜನಸ್ಪಂದನ ಕಾರ್ಯಕ್ರಮ, ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲು ಅನುದಾನ ₹50 ಕೋಟಿ. ಇನ್ನು ಜಾಹೀರಾತು ವೆಚ್ಚಗಳು, ದಿನಪತ್ರಿಕೆ, ಟಿ.ವಿ, ಸಾಮಾಜಿಕ ಜಾಲತಾಣ, ಪ್ರಕಟಣೆಗೆ ₹50 ಕೋಟಿ, ಕೇಂದ್ರ ಕಚೇರಿಯಲ್ಲಿ ಸಭೆ ಮತ್ತು ಸಮಾರಂಭ ಆಯೋಜನೆ ₹25 ಕೋಟಿ ಹಾಗೂ ವೈದ್ಯಕೀಯ ಪರಿಹಾರ ನಿಧಿಗೆ ₹10 ಕೋಟಿ ಹೆಚ್ಚು ಅನುದಾನ ಒದಗಿಸಲಾಗಿದೆ.
























