ಬೆಂಗಳೂರು, ಮಾ.2 www.bengaluruwire.com : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಬಡಕುಟುಂಬಗಳಿಗೆ ನಿರ್ಮಿಸಿರುವ 36,789 ಮನೆಗಳ ಹಂಚಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಕೆ.ಆರ್.ಪುರದ ನಗರೇಶ್ವರ ನಾಗೇನಹಳ್ಳಿಯಲ್ಲಿ 480 ಮನೆಗಳ ಹಕ್ಕುಪತ್ರವನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ನೀಡುವ ಮೂಲಕ ಚಾಲನೆ ನೀಡಿದರು.
ರಾಜ್ಯಾದ್ಯಂತ ಏಕ ಕಾಲದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿರುವ 36,789 ಮನೆಗಳ ಹಂಚಿಕೆಯು ಈ ಮೂಲಕ ನಡೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಮ್ಮ ತಮ್ಮ ಕ್ಷೇತ್ರ ದಲ್ಲಿದ್ದು ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ, ಜಮೀರ್ ಅಹಮದ್ ಖಾನ್ ಅವರು ವಸತಿ ಇಲಾಖೆ ಹೊಣೆ ಗಾರಿಕೆ ವಹಿಸಿಕೊಂಡ ನಂತರ ಬಡವರಿಗೆ ಸೂರು ಕಲ್ಪಿಸುವ ವಿಚಾರದಲ್ಲಿ ದಿಟ್ಟ ತೀರ್ಮಾನ ಕೈಗೊಂಡಿದ್ದರು. ಈ ಮೂಲಕ ಹಲವು ವರ್ಷಗಳ ಕಾಲ ಸ್ವಂತ ಮನೆಯ ಕನಸು ಕಂಡ ಬಡವರ ಹಂಬಲ ನನಸಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಮನೆಯನ್ನೂ ಬಡವರಿಗೆ ವಿತರಿಸಿಲ್ಲದಿರುವುದನ್ನು ಖಂಡಿಸಿ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಸದನದ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿ ಹೋರಾಟ ನಡೆಸಿದ್ದರು. ಒಂದು ಮನೆಗೆ ಒಟ್ಟು 7.50 ಲಕ್ಷ ರೂ. ಆಗುತ್ತಿದ್ದು, ಈ ಹಿಂದೆ ಸರ್ಕಾರ 3 ಲಕ್ಷ ರೂ. ಹಣವನ್ನು ಮನೆ ಖರೀದಿಸುವ ಬಡವರಿಗೆ ಸಬ್ಸೀಡಿಯಾಗಿ ನೀಡಿತ್ತು. ಉಳಿದ 4.50 ಲಕ್ಷ ರೂ. ಹಣವನ್ನು ಅವರು ಪಾವತಿಸಬೇಕಿತ್ತು. ಬ್ಯಾಂಕ್ ಸಾಲವೂ ದೊರೆಯದೆ ಅಷ್ಟು ಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದವು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಆರಂಭಿಸಲಾದ ವಸತಿ ಯೋಜನೆಯ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿ ಮಾಡಲು ಸಾಧ್ಯವಾಗದೆ ನೆನೆಗುದಿಗೆ ಬಿದ್ದಿತ್ತು.
ಮುಖ್ಯಮಂತ್ರಿಗಳ ಸಲಹೆಯಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ನಿರಂತರ ಪ್ರಯತ್ನ ದಿಂದ ಬಡ ಕುಟುಂಬಗಳು ಪಾವತಿಸಬೇಕಿದ್ದ ಫಲಾನುಭವಿಗಳ 6,170 ಕೋಟಿ ರೂ. ವಂತಿಗೆಯನ್ನು ಸರ್ಕಾರವೇ ಭರಿಸುತ್ತಿದೆ. ಹೀಗಾಗಿ ಮನೆಗಾಗಿ ಬಡವರು ಇದೀಗ ಕೇವಲ 1 ಲಕ್ಷ ರೂ. ಪಾವತಿಸಿದರೆ ಉಳಿದ 6.50 ಲಕ್ಷ ರೂ. ಮೊತ್ತವನ್ನು ಸರ್ಕಾರವೇ ಭರಿಸುತ್ತಿದೆ. ಸರ್ಕಾರ ದ ತೀರ್ಮಾನ ದಿಂದ 1,80,253 ಕುಟುಂಬಗಳಿಗೆ ನೆಮ್ಮದಿ ಸಿಕ್ಕಂತಾಗಿದೆ. 1,80,253 ಮನೆಗಳ ಕಾಮಗಾರಿ ಪೂರ್ಣ ಗೊಳಿಸಲು ಮೊದಲನೇ ಕಂತು 500 ಕೋಟಿ ರೂ. ಬಿಡುಗಡೆ ಆಗಿದ್ದು ಮೊದಲ ಹಂತದಲ್ಲಿ 36, 789 ಮನೆ ಗಳನ್ನು ಇಂದು ಹಂಚಿಕೆಯಾಗುತ್ತಿದೆ. ಕೆ ಆರ್ ಪುರದ ನಗರೇಶ್ವರ ನಾಗೇನಹಳ್ಳಿ ಯಲ್ಲಿ 1047 ಮನೆ ನಿರ್ಮಿಸಿದ್ದು ಇಂದು 480 ಮನೆ ಹಂಚಿಕೆಯಾಗುತ್ತಿದೆ. ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಖಾನ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ.ವೆಂಕಟೇಶ್, ವಸತಿ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.