ನವದೆಹಲಿ, ನ.30 www.bengaluruwire.com : ಡಿಜಿಟಲ್ ಭಾರತ ಪರಿಕಲ್ಪನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೂಡ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ನಾಳೆಯಿಂದ ಬೆಂಗಳೂರು ಸೇರಿದಂತೆ ದೇಶದ ನಾಲ್ಕು ನಗರಗಳಲ್ಲಿ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಬಳಕೆಯನ್ನು ಆರಂಭಿಸುವುದಾಗಿ ಆರ್ ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್ ಬಿಐ, ಡಿಜಿಟಲ್ ರೂಪಾಯಿಯ ಬಳಕೆಯನ್ನು ಸಗಟು ವ್ಯವಹಾರಗಳಿಗೆ ಬಳಕೆ ಮಾಡುವುದನ್ನು ಪ್ರಾಯೋಗಿಕವಾಗಿ ನವೆಂಬರ್ 1ರಿಂದ ಆರಂಭ ಮಾಡಿತ್ತು. ಇದೀಗ ನಾಳೆಯಿಂದ ಚಿಲ್ಲರೆ ವಹಿವಾಟುಗಳಿಗೆ ಆಯ್ದ ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.
ರಿಟೇಲ್ ವಹಿವಾಟುಗಳಿಗೆ ಡಿಜಿಟಲ್ ರೂಪಾಯಿ ಬಳಕೆಗೆ ಸಂಬಂಧಿಸಿದಂತೆ ಒಟ್ಟು ಎರಡು ಹಂತದಲ್ಲಿ 8 ಬ್ಯಾಂಕ್ ಗಳು ಪಾಲ್ಗೊಳ್ಳುತ್ತಿದೆ. ಆ ಪೈಕಿ ಮೊದಲ ಪೈಲಟ್ ಯೋಜನೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಐಸಿಐಸಿಐ, ಐಡಿಎಫ್ ಸಿ ಫಸ್ಟ್ ಹಾಗೂ ಯೆಸ್ ಬ್ಯಾಂಕ್ ಸದ್ಯ ಪಾಲ್ಗೊಳ್ಳಲಿದೆ. ನಂತರದ ಹಂತದಲ್ಲಿ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಗಳು ನಂತರ ಈ ಪೈಲೆಟ್ ಯೋಜನೆಗೆ ಸೇರ್ಪಡೆಗೊಳ್ಳಲಿವೆ.
“ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ (Digital Token) ರೂಪದಲ್ಲಿರುತ್ತದೆ. ಇದು ಕಾನೂನುಬದ್ಧ ಕರೆನ್ಸಿಯಾಗಿರುತ್ತದೆ. ಈ ಡಿಜಿಟಲ್ ರೂಪಾಯಿಯನ್ನು ಬ್ಯಾಂಕ್ ಗಳ ಮೂಲಕ ವಿತರಿಸಲಾಗುತ್ತದೆ. ಬ್ಯಾಂಕ್ ಗಳು ನೀಡುವ ಡಿಜಿಟಲ್ ವ್ಯಾಲೆಟ್ ಗಳ ಮೂಲಕ ಇಬ್ಬರು ವ್ಯಕ್ತಿಗಳ ನಡುವೆ ಹಾಗೂ ಗ್ರಾಹಕ ಮತ್ತು ವ್ಯಾಪಾರಿ ನಡುವೆ ಈ ಡಿಜಿಟಲ್ ವಾಲೆಟ್ ಮೂಲಕ ಪಾವತಿ ಮಾಡಬಹುದು. ವ್ಯಾಪಾರಿ ಸ್ಥಳಗಳಲ್ಲಿ ಪ್ರದರ್ಶಿಸಲಾದ QR ಕೋಡ್‌ಗಳನ್ನು ಬಳಸಿಕೊಂಡು ವ್ಯಾಪಾರಿಗಳಿಗೆ ಪಾವತಿಗಳನ್ನು ಮಾಡಬಹುದು. ಸದ್ಯ ಬ್ಯಾಂಕ್ ಗಳು ವಿತರಣೆ ಮಾಡುವ ಕರೆನ್ಸಿ ನೋಟು ಹಾಗೂ ನಾಣ್ಯಗಳ ರೀತಿಯಲ್ಲಿಯೇ ಡಿಜಿಟಲ್ ರೂಪಾಯಿ ನೀಡಲಾಗುತ್ತದೆ. ಈ ಡಿಜಿಟಲ್ ರೂಪಾಯಿಯನ್ನು ಠೇವಣಿ ಕೂಡ ಇಡಬಹುದು” ಎಂದು ಆರ್ ಬಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲ ಹಂತದಲ್ಲಿ ಈ ಚಿಲ್ಲರೆ ವಹಿವಾಟುಗಳಿಗೆ ಅನುವಾಗುವಂತೆ ಬೆಂಗಳೂರು, ಮುಂಬೈ, ನವದೆಹಲಿ ಹಾಗೂ ಭುವನೇಶ್ವರಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಅವಕಾಶ ಕಲ್ಪಿಸಲಾಗುತ್ತದೆ. ನಂತರದ ಹಂತದಲ್ಲಿ ಅಹಮದಾಬಾದ್, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ ಮತ್ತು ಶಿಮ್ಲಾಗಳಿಗೆ ವಿಸ್ತರಣೆಯಾಗಲಿದೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಬ್ಯಾಂಕ್‌ಗಳು, ಬಳಕೆದಾರರು ಮತ್ತು ಸ್ಥಳಗಳನ್ನು ಸೇರಿಸಿ ಪೈಲಟ್‌ನ ವ್ಯಾಪ್ತಿಯನ್ನು ಕ್ರಮೇಣ ವಿಸ್ತರಿಸಲು ಆರ್ ಬಿಐ ನಿರ್ಧರಿಸಿದೆ.
ಭವಿಷ್ಯದಲ್ಲಿ ಕ್ರಿಪ್ಟೋ ಕರೆನ್ಸಿ(Crypto Currency)ಯಂತೆ ಡಿಜಿಟಲ್ ಕರೆನ್ಸಿಯನ್ನು ಬಳಕೆ ಮಾಡಲು ಅನುವಾಗುವಂತೆ ಸಗಟು ಮತ್ತು ಚಿಲ್ಲರೆ ವಹಿವಾಟುಗಳಿಗೆ ಡಿಜಿಟಲ್ ರೂಪಾಯಿ ಬಳಕೆಯನ್ನು ತರುತ್ತಿದ್ದು, ಡಿಜಟಲ್ ರೂಪಾಯಿ ರಚನೆ, ವಿತರಣೆ ಮತ್ತು ಚಿಲ್ಲರೆ ವಹಿವಾಟುಗಳ ಬಳಕೆಯ ಸಂಪೂರ್ಣ ಪ್ರಕ್ರಿಯೆಯ ದೃಢತೆಯನ್ನು ನೈಜ ಸಮಯದಲ್ಲಿ ಪರೀಕ್ಷಿಸಲು ಆರ್ ಬಿಐ ಈ ಪೈಲೆಟ್ ಯೋಜನೆ ಜಾರಿಗೆ ತಂದಿದೆ. ಈ ಪ್ರಾಯೋಗಿಕ ಬಳಕೆಯಿಂದ ಕಲಿಯುವ ಅಂಶಗಳ ಆಧಾರದ ಮೇಲೆ ಭವಿಷ್ಯದ ಪೈಲಟ್‌ಗಳಲ್ಲಿ e₹-R ಟೋಕನ್ ಕುರಿತಂತೆ ಇದರ ವಿಭಿನ್ನ ವೈಶಿಷ್ಟ್ಯಗಳು ಮತ್ತು ಅಪ್ಲಿಕೇಶನ್‌ಗಳನ್ನು ಪರೀಕ್ಷಿಸಲಾಗುತ್ತದೆ ಎಂದು ಆರ್ ಬಿಐ ಹೇಳಿದೆ.
ಡಿಜಿಟಲ್ ಕರೆನ್ಸಿ ಕ್ರಿಪ್ಟೋಗಿಂತ ಹೇಗೆ ವಿಭಿನ್ನ? :
ಆರ್‌ಬಿಐ ಹಲವು ರೂಪದ ಹಣವನ್ನು ಚಲಾವಣೆಯಲ್ಲಿಟ್ಟಿದೆ. ಅದರಲ್ಲಿ ಕಾಗದದ ನೋಟು ಕೂಡ ಒಂದು. ಕ್ರಿಪ್ಟೋಕರೆನ್ಸಿ ಹವಾ ಶುರುವಾದ ಬಳಿಕ ಕೆಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಪ್ರತ್ಯೇಕ ಡಿಜಿಟಲ್ ಕರೆನ್ಸಿ ತಂದಿವೆ. ಆರ್‌ಬಿಐ ಕೂಡ ಡಿಜಿಟಲ್ ರುಪೀ ಅಭಿವೃದ್ಧಿಪಡಿಸಿದೆ. ಕ್ರಿಪ್ಟೋಕರೆನ್ಸಿಯ ತಂತ್ರಜ್ಞಾವನ್ನು ಆರ್ ಬಿಐ ಅಳವಡಿಸಿಕೊಂಡಿದೆಯಾದರೂ ಡಿಜಿಟಲ್ ರುಪಾಯಿ ಮತ್ತು ಕ್ರಿಪ್ಟೋಕರೆನ್ಸಿ ಮಧ್ಯೆ ಪ್ರಮುಖ ವ್ಯತ್ಯಾಸ ಇದೆ. ಕ್ರಿಪ್ಟೋಕರೆನ್ಸಿ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಇದ್ದರೆ, ಡಿಜಿಟಲ್ ರುಪಾಯಿಯು ಆರ್‌ಬಿಐ ನಿಯಂತ್ರಣದಲ್ಲಿ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಇರುತ್ತದೆ.
ಪ್ರೋಗ್ರಾಮಿಂ ಪ್ರತಿಯೊಂದು ಡಿಜಿಟಲ್ ರುಪಾಯಿಯನ್ನೂ ವಿಶೇಷವಾಗಿ ಗುರುತಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು. ಇದರ ಪ್ರೋಗ್ರಾಮಿಂಗ್ ಕೂಡ ಮಾಡಬಹುದು. ಅಂದರೆ ನಿರ್ದಿಷ್ಟ ಕಾರ್ಯಕ್ಕೆ ಅನುಗುಣವಾಗಿ ಡಿಜಿಟಲ್ ರುಪಾಯಿಯನ್ನು ರೂಪಿಸಬಹುದು. ಚಲಾವಣೆಯ ಕಾಲಮಿತಿ, ಯಾವ ವರ್ಗಕ್ಕೆ ಸೀಮಿತವಾಗಬೇಕು ಇತ್ಯಾದಿಯನ್ನು ಪ್ರೋಗ್ರಾಮಿಂಗ್ ಮಾಡಲು ಸಾಧ್ಯ. ಬ್ಲಾಕ್‌ಚೈನ್‌ನ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್‌ಗಳಲ್ಲಿ ಡಿಜಿಟಲ್ ರುಪಾಯಿ ನಮೂದಾಗುತ್ತಾ ಹೋಗುತ್ತದೆ. ಈ ಲೆಡ್ಜರ್‌ಗಳಲ್ಲಿ ಡಿಜಿಟಲ್ ರುಪಾಯಿಯ ವಹಿವಾಟು ಮತ್ತು ಬ್ಯಾಲೆನ್ಸ್ ಅನ್ನು ದಾಖಲಿಸಲು ಅವಕಾಶ ನೀಡಲಾಗುತ್ತದೆ. ಮೇಲೆ ಹೇಳಿದ ಈ ಮೂರು ಅಂಶಗಳು ಹಣದ ಚಲಾವಣೆಯಲ್ಲಿ ಗಮನಾರ್ಹ ಪರಿವರ್ತನೆ ಹಾಗೂ ಸುಧಾರಣೆ ತರಲು ಸಾಧ್ಯ ಎಂಬುದು ತಜ್ಞರ ಅನಿಸಿಕೆ.
ವಂಚನೆ ತಪ್ಪಿಸಲು ಸಹಾಯಕ ಡಿಜಿಟಲ್ ಕರೆನ್ಸಿ :
ಡಿಜಿಟಲ್ ರುಪಾಯಿ ನಮ್ಮ ದೇಶದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗೆ ಹೆಚ್ಚು ಕಾರ್ಯಕ್ಷಮತೆ, ಪಾರದರ್ಶಕತೆಯನ್ನು ಒದಗಿಸಿ ಬಲಪಡಿಸುವ ನಿರೀಕ್ಷೆ ಇದೆ. 2018ರಿಂದ 2020ರ ಅವಧಿಯಲ್ಲಿ ಭಾರತೀಯ ಬ್ಯಾಂಕುಗಳು ವಂಚನೆಯಿಂದಾಗಿ ಸುಮಾರು 50 ಬಿಲಿಯನ್ ಡಾಲರ್ (4 ಲಕ್ಷ ಕೋಟಿ ರುಪಾಯಿ) ಹಣ ಕಳೆದುಕೊಂಡಿವೆ ಎಂದು ಒಂದು ವರದಿ ಹೇಳುತ್ತದೆ. ಇದಕ್ಕೆ ಪ್ರಮುಖ ಕಾರಣ, ಸಾಲ ಪಡೆದವರು ಉದ್ದೇಶಿತ ಕಾರ್ಯಕ್ಕೆ ಆ ಹಣ ವಿನಿಯೋಗಿಸದೇ ದುರ್ಬಳಕೆ ಮಾಡಿಕೊಂಡಿರುವುದು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಗೃಹ ಸಾಲವಾದರೆ ಮನೆ ಕಟ್ಟಲು ಬಳಕೆ ಮಾಡಬೇಕು. ಗೃಹ ಸಾಲ ಪಡೆದು ನೀವು ಬೇರೆಯದಕ್ಕೆ ಅದನ್ನು ಬಳಸುವುದು ವಂಚನೆ ಎನಿಸುತ್ತದೆ. ಅದೇ ರೀತಿ ಒಂದು ಸಂಸ್ಥೆ ಸಾಲ ಪಡೆಯಲು ಕಾರಣಗಳನ್ನು ನೀಡಬೇಕಾಗುತ್ತದೆ. ಆ ಕಾರ್ಯಕ್ಕೆ ಸಾಲದ ಬಳಕೆ ಆಗಿದೆಯೇ ಎಂಬುದನ್ನು ಸಂಸ್ಥೆಯ ಆಡಿಟ್ ರಿಪೋರ್ಟ್ ಇತ್ಯಾದಿಯನ್ನು ಬ್ಯಾಂಕು ಪರಿಶೀಲಿಸುತ್ತದೆ. ಡಿಜಿಟಲ್ ಕರೆನ್ಸಿಯ ಹರಿವಿನ ಮೇಲೆ ನಿಗಾ ಇಡಲು ಸಾಧ್ಯವಾಗುವುದರಿಂದ ಈ ಮೇಲಿನ ಸಮಸ್ಯೆ ನೀಗಿಸುವ ಸಾಧ್ಯತೆ ಇದೆ.
ಡಿಜಿಟಲ್ ಕರೆನ್ಸಿ ಟ್ರ್ಯಾಕಿಂಗ್ ಮಾಡುವುದು ಸುಲಭ :
ಡಿಜಿಟಲ್ ರುಪಾಯಿಗೆ ಜಾಗತಿಕ ಮಾನ್ಯತೆ ಇರುತ್ತದೆ. ಅನಿವಾಸಿ ಭಾರತೀಯರೂ ಸಿಬಿಡಿಸಿಯನ್ನು ಹೊಂದಿ ವಹಿವಾಟು ನಡೆಸಬಹುದು. ಡಿಜಿಟಲ್ ರುಪಾಯಿ ಬಳಸಲು ನಿಮಗೆ ಬ್ಯಾಂಕ್ ಖಾತೆಯೇ ಇರಬೇಕೆಂದಿಲ್ಲ. ಇದು ಬಹಳಷ್ಟು ಮಂದಿಗೆ ಅನುಕೂಲ ಮಾಡಿಕೊಡುತ್ತದೆ. ಡಿಜಿಟಲ್ ರುಪಾಯಿಯ ವಹಿವಾಟು ರಿಯಲ್ ಟೈಮ್‌ನಲ್ಲಿ ನಡೆಯುವುದರಿಂದ ಮತ್ತು ಅದನ್ನು ಟ್ರ್ಯಾಕ್ ಮಾಡುವುದೂ ಸುಲಭವಾದ್ದರಿಂದ ಸರ್ಕಾರಕ್ಕೆ ಹಣಕಾಸು ನೀತಿ ರೂಪಿಸುವುದು ಹೆಚ್ಚು ಸುಲಭವಾಗುತ್ತದೆ. ಈಗಾಗಲೆ ಜಾರಿಗೆ ಬಂದಿರುವ ನೇರ ಹಣ ವರ್ಗಾವಣೆ (DBT) ವ್ಯವಸ್ಥೆ ಇನ್ನಷ್ಟು ಸದೃಢವಾಗಲಿದೆ.
ಪದೇ ಪದೇ ನೋಟುಗಳ ಮುದ್ರಣ ಆರ್ ಬಿಐಗೆ ತಲೆನೋವು :
ದೇಶದಲ್ಲಿ ನೋಟುಗಳನ್ನು ಮುದ್ರಿಸುವ ಜವಾಬ್ದಾರಿಯಿರುವುದು ಆರ್ ಬಿಐಗೆ ಮಾತ್ರ. ಇದೊಂದು ಮಹತ್ವದ ಹಾಗೂ ಆರ್‌ಬಿಐಗೆ ದೊಡ್ಡ ತಲೆನೋವಿನ ಕೆಲಸ. ಇದಕ್ಕೆ ವೆಚ್ಚವೂ ಹೆಚ್ಚು. ಹಣದ ದುರ್ಬಳಕೆ ಆದರೆ ಗೊತ್ತಾಗುವುದಿಲ್ಲ. ಡಿಜಿಟಲ್ ಕರೆನ್ಸಿಯಿಂದ ಆರ್‌ಬಿಐಗೆ ನೋಟು ಮುದ್ರಿಸುವ ಒತ್ತಡ ಕಡಿಮೆ ಆಗುತ್ತದೆ. ಸದಾ ವರ್ಚುವಲ್ ಆಗಿ ಹಣ ಚಲಾವಣೆಯಲ್ಲಿರುತ್ತದೆ. ನೋಟುಗಳಂತೆ ಡಿಜಿಟಲ್ ಕರೆನ್ಸಿಯನ್ನು ಹಾಳು ಮಾಡಲು ಆಗುವುದಿಲ್ಲ. ಎಲ್ಲಿಯಾದರೂ ಕಳೆದುಹೋದೀತೆಂಬ ಆತಂಕ ಇರುವುದಿಲ್ಲ.