ಮನೆಯಲ್ಲಿಯೇ ಕುಳಿತು ದೂರದ ಆಕಾಶದಿಂದ ನಾವಿರುವ ಭೂಮಿಯ ಸೌಂದರ್ಯವನ್ನು ವಾಸ್ತವಿಕ ಸಮಯದ ಆಧಾರದಲ್ಲಿ (Real Time Basis) ನೋಡಬಹುದು. ಹೌದು ಇದು ನಿಜ. ಅಂತದ್ದೊಂದು ಅವಕಾಶವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಶೋಧನಾ ಸಂಸ್ಥೆ ನಾಸಾ (NASA) ಕಲ್ಪಿಸಿಕೊಟ್ಟಿದೆ.
ಭೂಮಿಯಿಂದ 420 ಕಿ.ಮೀ ಎತ್ತರದಲ್ಲಿರುವ ಕೆಳಹಂತದ ಭೂಕಕ್ಷೆಯಲ್ಲಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station – ISS) ದಿಂದ ನೀವು ದಿನದ 24 ಗಂಟೆಗಳ ಕಾಲ ಕುಳಿತಲ್ಲಿಂದಲೇ ಭುಮಿಯ ದೃಶ್ಯಗಳನ್ನು ನೋಡಬಹುದು. ಈ ಕೃತಕ ಉಪಗ್ರಹವು ಇಡೀ ಭೂಮಿಯನ್ನು 90 ನಿಮಿಷದಲ್ಲಿ ಒಂದು ಸುತ್ತು ಹಾಕುತ್ತದೆ. ಹೀಗೆ ಕಕ್ಷೆಯಲ್ಲಿ ಪ್ರಥ್ವಿಯ ಪರಿಭ್ರಮಣೆಯ ಸಂದರ್ಭದಲ್ಲಿ ಅರ್ಧ ಸಮಯ ಕತ್ತಲೆಯ ಪ್ರದೇಶದಲ್ಲಿ ಸಾಗುತ್ತದೆ. ಹೀಗೆ ಸಾಗುವ ಸಂದರ್ಭದಲ್ಲಿ ಭೂಮಿಯ ಮೇಲ್ಭಾಗ ಸಂಭವಿಸುವ ಸಿಡಿಲು, ವಿವಿಧ ನಗರ ಪಟ್ಟಣಗಳಲ್ಲಿನ ಬೆಳಕನ್ನು ಬಾಹ್ಯಾಕಾಶ ನಿಲ್ದಾಣದ ಉಪಗ್ರಹದಲ್ಲಿ ಅಳವಡಿಸಿರುವ ಅತ್ಯಾಧುನಿಕ ಕ್ಯಾಮರಾಗಳಲ್ಲಿ ಸೆರೆಯಾಗಿರುವುದನ್ನು ಲೈವ್ ಸ್ಟ್ರೀಮಿಂಗ್ ನಲ್ಲಿ ಕಾಣಬಹುದು.
ದಿನದ 24 ಗಂಟೆ 16 ಸೂರ್ಯೋದಯ ಹಾಗೂ ಸೂರ್ಯಾಸ್ತಗಳು :
ಕೆಲವೊಮ್ಮೆ ಸಂಪರ್ಕ ಕಡಿತಗೊಂಡಾಗ ಲೈವ್ ಸ್ಟ್ರೀಮಿಂಗ್ ಸಾಧ್ಯವಾಗದಿರಬಹುದು. ಪುನಃ ಸಂಪರ್ಕ ಲಭ್ಯವಾದಾಗ ಎಂದಿನಂತೆ ಉಪಗ್ರಹ ಚಲಿಸುವಾಗ ಭೂಮಿಯ ದೃಶ್ಯಗಳನ್ನು ಸೆರೆಹಿಡಿದು ಲೈವ್ ಸ್ಟ್ರೀಮಿಂಗ್ ಮೂಲಕ ಪ್ರಸಾರ ಮಾಡುತ್ತದೆ. ಸಂಪರ್ಕ ಕಡಿತಗೊಂಡಾಗ ಸಂಗ್ರಹಿತ ವಿಡಿಯೋ ದೃಶ್ಯಗಳು (Archived video) ಲೈವ್ ಸ್ಟ್ರೀಮಿಂಗ್ ನಲ್ಲಿ ಪ್ರಸಾರವಾಗುತ್ತದೆ. ನಾವು ಇದುವರೆಗೆ ದಿನವೊಂದಕ್ಕೆ ಕೇವಲ ಒಂದು ಬಾರಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವಿಷಯವನ್ನ ಕೇಳಿದ್ದೆವು. ಆದರೆ ದಿನದ 24 ಗಂಟೆ ಐಎಸ್ಎಸ್ ಉಪಗ್ರಹ ಚಲನೆಯಿಂದಾಗಿ 16 ಸೂರ್ಯೋದಯ ಹಾಗೂ ಸೂರ್ಯಾಸ್ತಗಳನ್ನು ನೀವು ಈ ಲೈಫ್ ಸ್ಟ್ರೀಮಿಂಗ್ ಮೂಲಕ ಕಣ್ತುಂಬಿಕೊಳ್ಳಬಹುದು. ಬಾಹ್ಯಾಕಾಶದ ಬಗ್ಗೆ ಅತೀವ ಆಸಕ್ತಿ ಇರುವವರಿಗೆ ಇದೊಂದು ವರದಾನವೇ ಸರಿ.
ಯೂಬ್ಯೂಟ್ ನಲ್ಲಿ ಲೈವ್ ಸ್ಟ್ರೀಮಿಂಗ್ ವಿಡಿಯೋ :
ಯೂಟ್ಯೂಬ್ ನಲ್ಲಿ ಕಾಣಸಿಗುವ ಲೈವ್ ಸ್ಟ್ರೀಮಿಂಗ್ ವಿಡಿಯೋದ ಡ್ಯಾಷ್ ಬೋರ್ಡ್ ಭಾಗದಲ್ಲಿ ನಿಮಗೆ ಪ್ರಸ್ತುತ ಐಸ್ಎಸ್ ಉಪಗ್ರಹ ಭೂಮಿಯ ಯಾವ ಭಾಗದಲ್ಲಿದೆ ಎಂಬುದನ್ನು ರಿಯಲ್ ಟೈಮ್ ಆಧಾರದಲ್ಲಿ ಅಕ್ಷಾಂಶ ಮತ್ತು ರೇಖಾಂಶದೊಂದಿಗೆ ಅಂತರಾಷ್ಟ್ರೀಯ ಸಮಯದೊಂದಿಗೆ ತಿಳಿಸುತ್ತಿರುತ್ತದೆ. ಈ ವಿಡಿಯೋದ ಕೆಳ ಭಾಗದಲ್ಲಿ ಹಳದಿ ಬಣ್ಣದ ಗೆರೆಯು ಉಪಗ್ರಹ 90 ನಿಮಿಷಗಳ ಹಿಂದೆ ಸಂಚರಿಸಿದ ಮಾರ್ಗ ಹಾಗೂ ಬಿಳಿ ರೇಖೆಯು ಮುಂದೆ 90 ನಿಮಿಷಗಳ ಅವಧಿಯಲ್ಲಿ ಸಂಚರಿಸುವ ಪಥವನ್ನು ಸೂಚಿಸುತ್ತೆ. ಅಲ್ಲದೆ ಸದ್ಯ ಉಪಗ್ರಹವು ಯಾವ ದೇಶದ ಮೇಲಿದೆ? ಯಾವ ವೇಗದಲ್ಲಿ ಈ ಸ್ಪೇಸ್ ಕ್ರಾಫ್ಟ್ ಚಲಿಸುತ್ತಿದೆ? ನೀವು ನೋಡುತ್ತಿರುವುದು ಲೈವ್ ದೃಶ್ಯವೇ? (Red Box- Live Now) ಅಥವಾ ಆಫ್ ಲೈನ್ ದೃಶ್ಯವೇ? (Blue box – Offline) ಎಂಬುದನ್ನು ಈ ವಿಡಿಯೋ ಸ್ಟ್ರೀಮಿಂಗ್ ನಲ್ಲಿ ಸೂಚಿಸುತ್ತದೆ.
ಬಾಹ್ಯಾಕಾಶ ಕೇಂದ್ರವನ್ನು ನಾವು ಬರಿಗಣ್ಣಿನಲ್ಲೂ ನೋಡಬಹುದು….!
ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಕಕ್ಷೆಯ ಆಧಾರದಲ್ಲಿ ಈ ಉಪಗ್ರಹವು ಭೂಮಿಯನ್ನು ಪಶ್ಚಿಮದಿಂದ ಪೂರ್ವ ಭಾಗದ ಮೂಲಕ ಹಾದು ಹೋಗುತ್ತಿರುವಂತೆ ತೋರುತ್ತದೆ. ಆದರೆ ಭೂಮಿಯ ತನ್ನ ಸ್ವಂತ ಗತಿಯಲ್ಲಿ ಸುತ್ತುತ್ತಿದ್ದು, ಐಸ್ಎಸ್ ತನ್ನ ಪ್ರತಿ ಪರಿಭ್ರಮಣೆಯ ಸಮಯದಲ್ಲಿ 2200 ಕಿ.ಮೀ ಪಶ್ಚಿಮ ದಿಕ್ಕಿನತ್ತ ಚಲಿಸುತ್ತಿರುತ್ತದೆ. ನೀವು ರಾತ್ರಿ ಹೊತ್ತಿನಲ್ಲಿ ಸರಿಯಾದ ದಿಕ್ಕಿನಲ್ಲಿ ಐಸ್ಎಸ್ ಸುತ್ತುತ್ತಿರುವ ಸ್ಥಳವನ್ನು ಖಚಿತಪಡಿಸಿಕೊಂಡಿದ್ದಲ್ಲಿ ಬರಿಗಣ್ಣಿನಲ್ಲಿ ಈ ಉಪಗ್ರಹವನ್ನು ತಲೆ ಎತ್ತಿ ನೋಡಬಹುದು…!
ಆಫ್ ಲೈನ್ ವಿಡಿಯೋದಲ್ಲೂ ಭರ್ಜರಿ ಸರ್ ಪ್ರೈಸ್ :
ಬಾಹ್ಯಾಕಾಶ ಕೇಂದ್ರದ ಉಪಗ್ರಹದಲ್ಲಿ ಅಳವಡಿಸಿರುವ ಕ್ಯಾಮರಾವು ಭೂಮಿ ಮತ್ತು ಸ್ಟೇಸ್ ಸ್ಟೇಷನ್ ಮುಂಭಾಗದ ದೃಶ್ಯಗಳನ್ನು ಪ್ರಸಾರ ಮಾಡಲಿದೆ. ಅಥವಾ ಐಎಸ್ಎಸ್ ಕೇಂದ್ರದಲ್ಲಿರುವ ಗಗನಯಾತ್ರಿಗಳು ಕೆಲಸ ಮಾಡುತ್ತಿರುವ ವಿಡಿಯೋಗಳನ್ನು ಪ್ರಸಾರ ಮಾಡಲಿದೆ. ಲೈವ್ ದೃಶ್ಯಗಳು ಲಭ್ಯವಾಗದ ಸಂದರ್ಭಲ್ಲಿ, ಸೌರ ಬಿರುಗಾಳಿ, ಸೌರಜ್ವಾಲೆಗಳು, ಸೌರ ಕಲೆಗಳು ಕಂಡು ಬಂದಾಗ ನಾಸಾದ ಸೋಲಾರ್ ಡೈನಮಿಕ್ಸ್ ವೀಕ್ಷಣಾಲಯ ತೆಗೆದ ಫೊಟೋಗಳನ್ನು ಪ್ರತಿ ಗಂಟೆಗೊಮ್ಮೆ ನವೀಕರಿಸುತ್ತಿದ್ದು, ಈಗಾಗಲೇ ತೆಗೆದಿರುವ ಸೂರ್ಯನ ಮೇಲ್ಪದರದ ವಿಡಿಯೋಗಳನ್ನು ಪ್ರಸಾರ ಮಾಡಲಿದೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಉದ್ದೇಶವೇನು? :
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕೃತಕ ಉಪಗ್ರಹ ನಿರ್ಮಾಣವು ಅಂತರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಬಾಹ್ಯಾಕಾಶ ಸಂಶೋಧನೆ ಮತ್ತು ಅವಿಷ್ಕಾರ ನಡೆಸುವ ಕಾರಣದಿಂದ 1998ರಲ್ಲಿ ರಚಿಸಲಾಗಿದೆ. ಅಮೆರಿಕ, ರಷ್ಯಾ, ಜಪಾನ್ ಹಾಗೂ ಯುರೋಪ್ ದೇಶಗಳ ಬಾಹ್ಯಾಕಾಶಯಾನಿಗಳು ಈ ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿದ್ದುಕೊಂಡು ನಿರಂತರವಾಗಿ ಆಕಾಶದ ಕುರಿತಂತೆ ವೈಜ್ಞಾನಿಕ ಅಧ್ಯಯನ ಹಾಗೂ ಪ್ರಯೋಗಗಳನ್ನು ನಡೆಸುತ್ತಿರುತ್ತಾರೆ.
ಆರು ಕೊಠಡಿಗಳು- ವಿಜ್ಞಾನದ ಪ್ರಯೋಗಾಲಯ ಐಸ್ಎಸ್ ನಲ್ಲಿದೆ :
2000 ಇಸವಿಯಿಂದ ಇಲ್ಲಿಯ ತನಕ ಈ ಐಎಸ್ಎಸ್ ನಿಲ್ದಾಣದಲ್ಲಿ 67 ಬಾರಿ ವಿವಿಧ ದೇಶಗಳ ವಿಜ್ಞಾನಿಗಳು ಭೂಮಿಯಿಂದ ಇಲ್ಲಿಗೆ ಹಂತ ಹಂತವಾಗಿ ಗಗನಯಾತ್ರೆಗಳನ್ನು ಕೈಗೊಂಡಿದ್ದಾರೆ. ಹೀಗೆ ಈ ಕೇಂದ್ರಕ್ಕೆ ಬಂದವರು 11 ದಿನದಿಂದ 340 ದಿನಗಳ ಕಾಲ ಈ ಬಾಹ್ಯಾಕಾಶ ಕೇಂದ್ರದಲ್ಲಿ ನೆಲೆಸಿ ಆಗಸದ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಈ ಬಾಹ್ಯಾಕಾಶ ಉಪಗ್ರಹವನ್ನು ಹಂತ ಹಂತವಾಗಿ ಹಲವು ಭಾಗಗಳನ್ನು ಸೇರಿಸಿ ರಚಿಸಲಾಗಿದೆ. 2011ರಲ್ಲಿ ಪೂರ್ಣ ರೂಪದಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಾಣವಾಯಿತು. ಈ ನಿಲ್ದಾಣದಲ್ಲಿ ವಿವಿಧ ವೈಜ್ಞಾನಿಕ ಪ್ರಯೋಗಾಲಯಗಳಿವೆ. 6 ಕೊಠಡಿಗಳನ್ನು ಹೊಂದಿರುವ ಈ ಉಪಗ್ರಹದಲ್ಲಿ ಏಕಕಾಲಕ್ಕೆ 6 ಗಗನಯಾತ್ರಿಗಳು ನೆಲಸಬಹುದಾಗಿದೆ. ಸೌರ ಫಲಕಗಳ ಮೂಲಕ ಉತ್ಪಾದಿಸಲಾದ ವಿದ್ಯುತ್ ನಿಂದ ಈ ನಿಲ್ದಾಣ ಕಾರ್ಯನಿರ್ವಹಿಸುತ್ತದೆ.
ಬಾಹ್ಯಾಕಾಶ ಕೇಂದ್ರ ನಮಗೆಷ್ಟು ಮುಖ್ಯ ?
ಆಕಾಶದಲ್ಲಿ ಮಾನವನು ಹೇಗೆ ಜೀವಿಸಬಹುದು? ಹೀಗೆ ಜೀವನ ಮಾಡುವಾಗ ಏನೆಲ್ಲಾ ಸವಾಲುಗಳು ಎದುರಾಗಬಹುದು? ಅದನ್ನು ಹೇಗೆ ಸಶಕ್ತವಾಗಿ ಎದುರಿಸಬಹುದು? ಎಂಬೆಲ್ಲಾ ವಿಚಾರವಾಗಿ ಆಕಾಶದಲ್ಲಿನ ಈ ಐಎಸ್ಎಸ್ ನಿಲ್ದಾಣದಲ್ಲಿದ್ದುಕೊಂಡು ನಿರಂತರವಾಗಿ ಸಂಶೋಧನೆ ಕೈಗೊಳ್ಳಲಾಗುತ್ತಿದೆ. ಈ ಸಂಶೋಧನೆಯನ್ನು ಭೂಮಿಯಲ್ಲಿದ್ದುಕೊಂಡು ಕೈಗೊಳ್ಳಲು ಸಾಧ್ಯವಾಗದು ಎಂಬುದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ನಾಸಾ ಸಂಸ್ಥೆಯು ಈ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಉಪಗ್ರಹ ದೀರ್ಘಕಾಲ ಬಾಳಿಕೆ ಬರುವುದು ಹೇಗೆ ಎಂಬುದನ್ನು ಕಲಿತುಕೊಂಡಿದೆ. ಭವಿಷ್ಯದ ದೃಷ್ಟಿಯಲ್ಲಿ ಈ ವಿದ್ಯಮಾನಗಳು ಪ್ರಮುಖವಾಗಿದೆ.
ಮುಂದಿನ ದಿನಗಳಲ್ಲಿ ಗಗನಯಾತ್ರಿಗಳು ವಿವಿಧ ಗ್ರಹಗಳಿಗೆ ತೆರಳಿ ಬಾಹ್ಯಾಕಾಶ ಯಾನ ಕೈಗೊಳ್ಳುವ ನಿಟ್ಟಿನಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿನ ಪ್ರಯೋಗಗಳು ಮೊದಲ ಹೆಜ್ಜೆಯಾಗಿದೆ.