ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಅಂತ ಸರ್ಕಾರ ಒಂದು ಕಡೆ ಹೇಳುತ್ತಿದೆ. ಆದರೆ ತಾಂತ್ರಿಕ ಅಡಚಣೆ ಮತ್ತಿತರ ಕಾರಣಗಳಿಂದ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಆಗುವುದು ಮಾತ್ರ ನಿಂತಿಲ್ಲ. ಈ ಮಧ್ಯೆ ಕರ್ನಾಟಕದಲ್ಲಿ ವಿದ್ಯುತ್ ಬಳಕೆಯು ಐತಿಹಾಸಿಕವಾಗಿ ಇದುವರೆಗಿನ ದಾಖಲೆಯನ್ನು ಸರಿಗಟ್ಟಿದೆ. ಮಾ.18ರಂದು ಒಂದೇ ದಿನ 14,818 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(KPTL)ದ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ಈ ಮಧ್ಯೆ ರಾಜ್ಯದ ಉಷ್ಣವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆಯು ಇನ್ನಿಲ್ಲದಂತೆ ಕಾಡುತ್ತಿರುವುದು ಸುಳ್ಳಲ್ಲ. ಸಾಮಾನ್ಯವಾಗಿ ಕರ್ನಾಟಕದಲ್ಲಿ ವಿದ್ಯುತ್ ಬಳಕೆ ಉಳಿದ ತಿಂಗಳುಗಳಿಗೆ ಹೋಲಿಸಿದಲ್ಲಿ ಈ ಉರಿ ಬಿಸಿಲಿನಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮಾರ್ಚ್ ತಿಂಗಳಿಗೆ ಹೋಲಿಸಿದರೆ ವಿದ್ಯುತ್ ಬೇಡಿಕೆ ಅಷ್ಟಾಗಿರದು. ಮಾರ್ಚ್ ತಿಂಗಳಿನಲ್ಲಿ ಈ ಬಾರಿ 15 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಬರಬಹುದೆಂದು ಅಂದಾಜಿಸಲಾಗಿತ್ತು. ಆದರೀಗ ಮಾ.18ರಂದು ವಿದ್ಯುತ್ ಗರಿಷ್ಠ ಬೇಡಿಕೆ 14,818 ಮೆಗಾವ್ಯಾಟ್ ಗೆ ತಲುಪಿದೆ. ಆನಂತರ ಕಳೆದ ಮೂರ್ಲಾಲ್ಕು ದಿನಗಳಿಂದ ಮಳೆಯಾಗುತ್ತಿರುವುದರಿಂದ ದಿನದ ವಿದ್ಯುತ್ ಬಳಕೆ ಪ್ರಮಾಣ 240 ದಶಲಕ್ಷ ಯೂನಿಟ್ ನಿಂದ 263 ದಶಲಕ್ಷ ಯೂನಿಟ್ ಆಸುಪಾಸಿನಲ್ಲಿದೆ.
ಮಾರ್ಚಿನಲ್ಲಿ 16 ದಿನ 14 ಸಾವಿರ ಮೆ.ವ್ಯಾ ದಾಟಿದ ಗರಿಷ್ಠ ವಿದ್ಯುತ್ ಲೋಡ್ :
ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ಬೆಳಗಿನ ಹೊತ್ತು ನಿರಂತರವಾಗಿ 7 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹಾಗೂ ನಗರ ಪ್ರದೇಶಗಳಲ್ಲಿ ತಾಂತ್ರಿಕ ಅಡಚಣೆ, ತೊಂದರೆಗಳ ನೆಪದಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ಮಾ.1ರಿಂದ ಮಾ.23ರ ತನಕದ ಅವಧಿಯಲ್ಲಿ ಪ್ರತಿ ನಿತ್ಯದ ವಿದ್ಯುತ್ ಬೇಡಿಕೆ ಪ್ರಮಾಣ ಒಂದೇ ಸಮನೆ ಏರಿಕೆಯಾಗುತ್ತಿದ್ದು, 264.26 ದಶಲಕ್ಷ ಯೂನಿಟ್ ನಿಂದ 284.99 ದಶಲಕ್ಷ ಯೂನಿಟ್ ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತಿದೆ. ಒಟ್ಟು 23 ದಿನಗಳಲ್ಲಿ 14,100 ಮೆಗಾವ್ಯಾಟ್ ಗಿಂತ ಹೆಚ್ಚು ವಿದ್ಯುತ್ ಪ್ರಸರಣ ಗರಿಷ್ಠ ಲೋಡ್ (Peak Load) 16 ದಿನಗಳ ಕಾಲ ದಾಖಲಾಗಿದೆ.
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಗೆ ಸಿಇಎ ವರದಿಯಲ್ಲಿದೆ ಸಾಕ್ಷಿ :
ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (CEA)ದ ಮಾ.22ರ ದೈನಂದಿನ ವರದಿಯನ್ನು ಗಮನಿಸಿದಾಗ ರಾಜ್ಯದಲ್ಲಿ ಕಲ್ಲಿದ್ದಲು ಸಂಗ್ರಹಣಾ ಪ್ರಮಾಣದ ಕೊರತೆಯಿರುವುದು ಗಮನಕ್ಕೆ ಬಂದಿದೆ. ಸಾಮಾನ್ಯವಾಗಿ ಉಷ್ಣವಿದ್ಯುತ್ ಉತ್ಪಾದನೆಗಾಗಿ ಕಲ್ಲಿದ್ದಲು ಸಂಗ್ರಹ 26 ದಿನಗಳ ಅಗತ್ಯ ಪೂರೈಸುವಂತೆ ಸಂಗ್ರಹಿಸಲಾಗುತ್ತದೆ. ಕರ್ನಾಟಕದಲ್ಲಿ ಥರ್ಮಲ್ ವಿದ್ಯುತ್ ಉತ್ಪಾದನೆಗೆ 16.99 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಿರಬೇಕಿದೆ.
ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಸ್ಥಾಪಿತ ಸಾಮರ್ಥ್ಯದ ಶೇ.85ರಷ್ಟು ವಿದ್ಯುತ್ ಉತ್ಪಾದನೆ ಮಾಡಬೇಕೆಂದರೆ ರಾಜ್ಯಕ್ಕೆ ಪ್ರತಿದಿನ 65,400 ಟನ್ ಕಲ್ಲಿದ್ದಲಿನ ಅವಶ್ಯಕತೆಯಿದೆ. ಆದರೆ ಕರ್ನಾಟಕದಲ್ಲಿ ವಾಸ್ತವವಾಗಿ 68,100 ಟನ್ ಗಳಷ್ಟು ಕಲ್ಪಿದ್ದಲು ಸಂಗ್ರಹವಿದೆ. ಅಂದರೆ ಸಾಮಾನ್ಯ ಸಂಗ್ರಹ ಪ್ರಮಾಣಕ್ಕಿಂತ ಕೇವಲ ಶೇ.4ರಷ್ಟು ಮಾತ್ರ ಹೆಚ್ಚಳವಿರುವುದನ್ನು ಕಾಣಬಹುದು. ಮಾ.22ರ ದಿನದ ಅಂತ್ಯಕ್ಕೆ 42,000 ಟನ್ ಕಲ್ಲಿದ್ದಲು ಬಳಕೆ ಮಾಡಿ ವಿದ್ಯುತ್ ಉತ್ಪಾದಿಸಲಾಗಿದೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಸಂಗ್ರಹ ಪ್ರಮಾಣ ಕೇವಲ ಶೇ.1ರಷ್ಟಿರುವುದನ್ನು ಸಿಇಎ ವರದಿಯಲ್ಲಿ ತಿಳಿಸಿದೆ. ಹೀಗಾಗಿಯೇ ರಾಯಚೂರಿನ ವೈಟಿಪಿಎಸ್ 5 ಮತ್ತು 7ನೇ ಘಟಕಗಳು ಕಲ್ಲಿದ್ದಲಿನ ಕೊರತೆಯಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿತ್ತು.
ಉಷ್ಣವಿದ್ಯುತ್ ಸ್ಥಾವರಗಳು ಸಾಮರ್ಥ್ಯಕ್ಕಿಂತ ಕಡಿಮೆ ಉತ್ಪಾದನೆ :
ಪ್ರಸ್ತುತ ಮಾ.22ರ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ವರದಿ ಪ್ರಕಾರ ಆರ್ ಟಿಪಿಎಸ್ ತನ್ನ ಉತ್ಪಾದನಾ ಸಾಮರ್ಥ್ಯಕ್ಕಿಂತ ಕೇವಲ ಶೇ.40.54ರಷ್ಟು, ಬಿಟಿಪಿಎಸ್ ಕೇವಲ ಶೇ.60.41ರಷ್ಟು ಹಾಗೂ ವೈಟಿಪಿಎಸ್ ಕೇವಲ ಶೇ.60.65ರಷ್ಟು ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದನೆ ಮಾಡಿದೆ. ರಾಜ್ಯದ ಒಟ್ಟಾರೆ ವಿದ್ಯುತ್ ಪೂರೈಕೆಯಲ್ಲಿ ಉಷ್ಣವಿದ್ಯುತ್ ಸ್ಥಾವರಗಳಿಂದ ಕರ್ನಾಟಕದ ಬೇಡಿಕೆಯ ಶೇ.40ರಷ್ಟು ವಿದ್ಯುತನ್ನು ಪೂರೈಸಲಾಗುತ್ತದೆ. ಹೀಗಿರುವಾಗ ಕಲ್ಲಿದ್ದಲೂ ಪೂರೈಕೆಯಲ್ಲಿನ ಕೊರೆತೆಯಿಂದಾಗಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಹೀಗಾಗಿ ರಾಜ್ಯ ಹಲವು ಕಡೆಗಳಲ್ಲಿ ಆಗಾಗ ವಿದ್ಯುತ್ ಕಡಿತ ಸಾಮಾನ್ಯ ಎಂಬಂತಾಗಿದೆ.
ಸೌರವಿದ್ಯುತ್- ಪವನ ವಿದ್ಯುತ್ ಉತ್ಪಾದನೆಯಿಂದ ಬಚಾವ್ :
ಈ ನಡುವೆ ಕರ್ನಾಟಕ ಮೂರು ಸ್ಥಾವರಗಳಿಂದ ಕಲ್ಲಿದ್ದಲು ಪೂರೈಕೆಯಾಗಿದ್ದಕ್ಕೆ ಹಣ ಪಾವತಿ ಬಾಕಿಯಿರುವುದನ್ನು ಉಲ್ಲೇಖಿಸಲಾಗಿದೆ. ರಾಜ್ಯದ ಪರಿಸ್ಥಿತಿ ಹೇಗಿದೆಯೆಂದರೆ ಕಲ್ಲಿದ್ದಲು ಬಂದಲ್ಲಿ ಮಾತ್ರ ವಿದ್ಯುತ್ ಪೂರೈಸುವಂತಾಗಿದೆ. ಸೌರವಿದ್ಯುತ್ ಮತ್ತು ಪವನ ವಿದ್ಯುತ್ ಮೂಲಗಳಿಂದ ಸರಾಸರಿ 5 ಸಾವಿರ ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗುತ್ತಿರುವುದರಿಂದ ಬಚಾವ್ ಆದಂತಾಗಿದೆ.
ರಾಜ್ಯದಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ಉಷ್ಣವಿದ್ಯುತ್ ಸ್ಥಾವರ ಹಾಗೂ ಸೌರವಿದ್ಯುತ್ ಗಳಿಂದ ಹೆಚ್ಚಾಗಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ ಕರ್ನಾಟಕದ 1,720 ಮೆಗಾವ್ಯಾಟ್ ಸಾಮರ್ಥ್ಯದ ರಾಯಚೂರು ಉಷ್ಣವಿದ್ಯುತ್ ಸ್ಥಾವರ ( RTPS ಒಟ್ಟು 8 ಘಟಕಗಳು), 1,700 ಮೆಗಾವ್ಯಾಟ್ ಸಾಮರ್ಥ್ಯದ ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರ (BTPS ಒಟ್ಟು 3 ಘಟಕಗಳು) ಹಾಗೂ 1,600 ಮೆಗಾವ್ಯಾಟ್ ಸಾಮರ್ಥ್ಯದ ಯಮರಸ್ ವಿದ್ಯುತ್ ಸ್ಥಾವರ (YTPS ಒಟ್ಟು 2 ಘಟಕ)ಗಳ ವಿದ್ಯುತ್ ಉತ್ಪಾದನಾ ಸ್ಥಾಪಿತ ಸಾಮರ್ಥವನ್ನು ಹೊಂದಿದೆ. ಅಂದರೆ ಒಟ್ಟಾರೆ 3 ಉಷ್ಣವಿದ್ಯುತ್ ಸ್ಥಾವರಗಳ ಒಟ್ಟಾರೆ ಸ್ಥಾಪಿತ ಸಾಮರ್ಥ್ಯ 5,020 ಮೆಗಾವ್ಯಾಟ್ ಆಗಿದೆ.
ರಾಜ್ಯ ರೈತ ಸಂಘದವರು ಈ ಬಗ್ಗೆ ಏನಂತಾರೆ ?
“ರಾಜ್ಯದಲ್ಲಿ ಯಾವಾಗ ಅಂದರೆ ಆವಾಗ ವಿದ್ಯುತ್ ಕಡಿತ ಆಗುತ್ತಿದೆ. ರಾಜಧಾನಿ ಬೆಂಗಳೂರಿನ ಗಾಂಧಿನಗರದಲ್ಲೇ ಹಗಲು ಹೊತ್ತು ಎರಡು ಮೂರು ಬಾರಿ ವಿದ್ಯುತ್ ಕಡಿತವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹಗಲು- ರಾತ್ರಿಯೆನ್ನದೆ ಕರೆಂಟ್ ಕಟ್ ಆಗ್ತಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬರುತ್ತಿದೆ. ಕೆಲವು ಕಡೆ ಈಗಾಗಲೇ ಪರೀಕ್ಷೆಗಳು ನಡೆಯುತ್ತಿದೆ. ರೈತರು, ಕೈಗಾರಿಕೆ ಹಾಗೂ ಸಾಮಾನ್ಯ ನಾಗರೀಕರಿಗೆ ವಿದ್ಯುತ್ ಕಡಿತದಿಂದ ಸಮಸ್ಯೆ ಆಗಿದೆ. ಈ ಬಗ್ಗೆ ಸರ್ಕಾರ ಕೇಂದ್ರದ ಗ್ರಿಡ್ ನಿಂದ ಹಾಗೂ ಖಾಸಗಿಯವರಿಂದ ವಿದ್ಯುತ್ ಖರೀದಿಸಿ ವಿದ್ಯುತ್ ಬೇಡಿಕೆ ಸರಿದೂಗಿಸಿ ಕೊರತೆ ನೀಗಿಸಬೇಕು. ಅದರ ಬದಲು ಅನಧಿಕೃತವಾಗಿ ವಿದ್ಯುತ್ ತೆಗೆದು, ಅದನ್ನು ಸಾರಾಸಗಟಾಗಿ ನಿರಾಕರಿಸಿ ಸಮರ್ಥನೆ ನೀಡುವುದು ಸರ್ಕಾರದ ಸರಿಯಾದ ನಡವಳಿಕೆಯಲ್ಲ.”
- ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ
ರಾಜ್ಯದ ಒಟ್ಟಾರೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 30,076 ಮೆ.ವ್ಯಾಟ್ :
ಉಷ್ಣವಿದ್ಯುತ್ ಸ್ಥಾಪಿತ ಸಾಮರ್ಥ್ಯ 5,020 ಮೆಗಾವ್ಯಾಟ್, ಜಲವಿದ್ಯುತ್ 3,830 ಮೆಗಾವ್ಯಾಟ್, ಸೌರವಿದ್ಯುತ್ 7,418 ಮೆಗಾವ್ಯಾಟ್, ಕೇಂದ್ರೀಯ ಗ್ರಿಡ್ ನಿಂದ 4,415 ಮೆಗಾವ್ಯಾಟ್, 4,967 ಮೆಗಾವ್ಯಾಟ್ ಪವನ ವಿದ್ಯುತ್ ಮೂಲಗಳು ಸೇರಿದಂತೆ ಒಟ್ಟು 30,076 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ರಾಜ್ಯವು ಹೊಂದಿದೆ. ಹಗಲಿನ ವೇಳೆ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯ ತನಕ ಗ್ರಿಡ್ ಗೆ 5,500 ಮೆಗಾವ್ಯಾಟ್ ಸೌರವಿದ್ಯುತ್ ಮೂಲಗಳಿಂದ ವಿದ್ಯುತ್ ಪೂರೈಕೆಯಾದರೆ ಆನಂತರ ಉಷ್ಣವಿದ್ಯುತ್, ಜಲವಿದ್ಯುತ್ ಮತ್ತಿತರ ಮೂಲಗಳಿಂದ ರಾಜ್ಯಕ್ಕೆ ವಿದ್ಯುತ್ ಪೂರೈಕೆಯಾಗಲಿದೆ. ಜುಲೈ ನಿಂದ ಸೆಪ್ಟೆಂಬರ್ ತನಕ ಪ್ರತಿದಿನ 3,000 ರಿಂದ 4,000 ಮೆಗಾವ್ಯಾಟ್ ಪವನ ವಿದ್ಯುತ್ ಲಭ್ಯವಾಗುತ್ತದೆ.
ಇಂಧನ ಸಚಿವರು ಬುಧವಾರ ಹೀಗೆ ಹೇಳಿದ್ದರು :
ಇಂಧನ ಸಚಿವ ವಿ.ಸುನಿಲ್ ಕುಮಾರ್ ಬುಧವಾರವಷ್ಟೆ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದರು. ಕಾಂಗ್ರೆಸ್ ಸದಸ್ಯ ಹರೀಶ್ ಕುಮಾರ್ ಶೂನ್ಯ ವೇಳೆಯಲ್ಲಿ, ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಕಲ್ಲಿದ್ದಲಿನ ಕೊರತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ ಎಂದು ಹೇಳಿದ್ದರು.
ಆಗ ಇಂಧನ ಸಚಿವರು, ಕಲ್ಲಿದ್ದಲಿನ ಪೂರೈಕೆಯಲ್ಲಿ ಕೆಲಕಾಲ ಸಮಸ್ಯೆ ಎದುರಾಗಿದ್ದು ನಿಜ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ ಬಳಿಕ ಕಲ್ಲಿದ್ದಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಬೇಡಿಕೆಯಷ್ಟು ಪ್ರಮಾಣದಲ್ಲಿ ಉಷ್ಣವಿದ್ಯುತ್ ಸ್ಥಾವರಗಳು ವಿದ್ಯುತ್ ಉತ್ಪಾದಿಸುತ್ತಿವೆ. ಈಗ ವಿದ್ಯುತ್ ಉತ್ಪಾದನೆ ಸಮರ್ಪಕವಾಗಿರುವುದರಿಂದ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವ ಅನಿವಾರ್ಯತೆ ಎದುರಾಗಿಲ್ಲ ಎಂದು ತಿಳಿಸಿದ್ದರು.