ಬೆಂಗಳೂರು, (www.bengaluruwire.com) : ಆಡಳಿತಗಾರರ ನೇತೃತ್ವದ ಪಾಲಿಕೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ 2022-23ನೇ ಸಾಲಿನ ಬಜೆಟ್ ಮಂಡಿಸಲು ಹಣಕಾಸು ಇಲಾಖೆ ವಿಶೇಷ ಆಯುಕ್ತೆ ತುಳಸಿಮದ್ದಿನೇನಿ ಇನ್ನಿಲ್ಲದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದೇ ವಿಶೇಷ ಆಯುಕ್ತರು ಒಂದು ವರ್ಷಗಳ ಹಿಂದೆ ಅಂದರೆ ಮಾ.27ರಂದು ಬಜೆಟ್ ಮಂಡಿಸುವಾಗ ಪಾಲಿಕೆಯ “ಜನಸ್ನೇಹಿ ಬಜೆಟ್” ಎಂದು ಹೇಳಿದ್ದು ಹಸಿಸುಳ್ಳು ಎಂಬುದು ಒಟ್ಟಾರೆ ಆಯವ್ಯಯ ವಿಶ್ಲೇಷಣೆಗೆ ನಡೆಸಿದಾಗ ತಿಳಿದು ಬರುತ್ತಿದೆ.
ವಾಸ್ತವ ಬಜೆಟ್ ಮಂಡಿಸ್ತೀವಿ, ಆರ್ಥಿಕ ಶಿಸ್ತು ತರುತ್ತೇವೆ. ವಿಕೇಂದ್ರೀಕೃತ ವ್ಯವಸ್ಥೆ ಮಾಡುತ್ತೇವೆ, ಪಾರದರ್ಶಕ ಆಡಳಿತ ತರುತ್ತೇವೆ ಎಂದಿದ್ದೆಲ್ಲ ಕೇವಲ ಪುಸ್ತಕ ಹಾಗೂ ಅವರ ಭಾಷಣಕ್ಕೆ ಸೀಮಿತವಾಯ್ತಾ ಎಂಬುದು ಈಗ ವೇದ್ಯವಾಗುತ್ತಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿನ ಸುಮಾರು 5- 6 ಲಕ್ಷ ಬಿ-ಖಾತೆ ಆಸ್ತಿಗಳಿವೆ. ಅವುಗಳಿಗೆ ಸುಧಾರಣಾ ವೆಚ್ಚ ಕಟ್ಟಿಸಿಕೊಂಡು ಎ- ಖಾತಾ ಮಾಡಿಕೊಡಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಆದರೆ ಈ ಘೋಷಣೆ ಕೇವಲ ಬಜೆಟ್ ಪುಸ್ತಕದಲ್ಲಿ ಮಾತ್ರ ದಾಖಲಾಗಿದೆಯೇ ಹೊರತು ಜಾರಿಯಾಗಿಲ್ಲ. ಈ ವರ್ಷ ಪುನಃ ರಾಜ್ಯ ಸರ್ಕಾರದ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿ- ಖಾತಾವನ್ನು ಎ-ಖಾತಾ ಮಾಡುವುದಾಗಿ ಅದೇ ಹಳೇ ರಾಗವನ್ನು ಹಾಡಿದ್ದರು. ಇದು ಈ ವರ್ಷವೂ ಅನುಷ್ಠಾನಕ್ಕೆ ಬರುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳೇ ಸ್ವತಃ ಹೇಳುತ್ತಿದ್ದಾರೆ.
ಒಂದೊಮ್ಮ ಹಣಕಾಸು ವಿಶೇಷ ಆಯುಕ್ತರು ಹೇಳಿದಂತೆ ಬಿ- ಖಾತಾ ಎ-ಖಾತಾವಾಗಿ ಬದಲಾಯಿಸಿದ್ದರೆ, ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಸಂಪನ್ಮೂಲ ಕ್ರೋಢಿಕರಣ ಆಗುತ್ತಿತ್ತು. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತಿದ್ದವು.
ಬಿಬಿಎಂಪಿ ಕಾಯ್ದೆ-2020 ಕಾಯ್ದೆ ಜಾರಿಗೆ ಬಂದರೂ ನಿಯಮ ರೂಪಿಸಿಲ್ಲ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020 ಏಪ್ರಿಲ್ 2021ರಿಂದ ಜಾರಿಗೆ ಬಂದಿದೆ. ಆದರೆ ಇಲ್ಲಿಯ ತನಕ ಆ ಕಾಯ್ದೆಗೆ ಅನುಗುಣವಾಗಿ ತಜ್ಞರ ನೇತೃತ್ವದಲ್ಲಿ ಸಮಿತಿ ರಚಿಸಿ ನಿಯಮಗಳನ್ನು ರೂಪಿಸಿ ಜಾರಿಗೆ ತರುವ ಪ್ರಯತ್ನವನ್ನು ಮಾಡಿಲ್ಲ. ಆದರೆ ಬಜೆಟ್ ಭಾಷಣದಲ್ಲಿ ಬಿಬಿಎಂಪಿ ಕಾಯ್ದೆ-2020 ಅನುಗುಣವಾಗಿ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಮರುಪರಿಶೀಲಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈತನಕ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಮರುಪರಿಶೀಲಿಸಿ ಸರ್ಕಾರಕ್ಕೆ ಒಪ್ಪಿಗೆಗಾಗಿ ಕಳುಹಿಸಿ ಕೊಟ್ಟಿಲ್ಲ. ಪಾಲಿಕೆಯ ಕೆಲಸ ಕಾರ್ಯಗಳು ಅನಗತ್ಯವಾಗಿ ನಿಧಾನವಾಗುವುದನ್ನು ಕಡಿತಗೊಳಿಸಲು ನಿವೃತ್ತ ತಜ್ಞ ಅಧಿಕಾರಿಗಳು ಮತ್ತು ಖಾಸಗಿ ಸಮಾಲೋಚಕರ ಸಲಹೆಯನ್ನು ಪಡೆದು ಅನುಷ್ಠಾನ ಮಾಡಿಲ್ಲ.
ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಎಳ್ಳುನೀರು ಬಿಟ್ಟ ಬಿಬಿಎಂಪಿ :
ಆಯವ್ಯಯದಲ್ಲಿ ಎಲ್ಲಾ ವರ್ಗಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ಬಜೆಟ್ ಭಾಷಣದಲ್ಲಿ ಹೇಳಲಾಗಿತ್ತು. ಆದರೆ ಆ ಮಾತನ್ನು ಬಿಬಿಎಂಪಿಯ ನೊಗವನ್ನು ಹೊತ್ತ ಮುಖ್ಯ ಆಯುಕ್ತ ಗೌರವ್ ಗುಪ್ತಾ ಆಗಲಿ, ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿಯಾಗಲಿ ಯಾವ ರೀತಿ ಈಡೇರಿಸಿದ್ದಾರೆಂಬ ಬಹುದೊಡ್ಡ ಪ್ರಶ್ನೆ ಎದುರಾಗುತ್ತೆ. ಯಾಕೆಂದರೆ ಬಿಬಿಎಂಪಿಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ಸಾಮಾಜಿಕ ನ್ಯಾಯ ಮತ್ತು ಅವರ ಕಲ್ಯಾಣಕ್ಕೆಂದು 2019-20ನೇ ಸಾಲಿನಲ್ಲಿ 514 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಆದರೆ 2021-22ನೇ ಸಾಲಿನಲ್ಲಿ 546.89 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರೂ ಒಂದು ರೂಪಾಯಿ ಹಣವನ್ನು ಕರ್ಚು ಮಾಡಿಲ್ಲ. ಯಾಕೆಂದರೆ ಕಲ್ಯಾಣ ಕಾರ್ಯಕ್ರಮಗಳಿಗೆ ಕ್ರಿಯಾ ಯೋಜನೆಗೆ ಕೌನ್ಸಿಲ್ ಒಪ್ಪಿಗೆ ಸಿಕ್ಕಿದ್ದೇ ಈ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ. ಹಾಗಾದರೆ ಇವರು ಕಲ್ಯಾಣ ಕಾರ್ಯಕ್ರಮದ ಅನುಷ್ಠಾನ ಶೂನ್ಯ ಸಾಧಿಸಿದಂತಾಗಿದೆ. 2011ರ ಜನಗಣತಿ ಸಮೀಕ್ಷೆಯಂತೆ ಬೆಂಗಳೂರಿನಲ್ಲಿ 11.23 ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಸಂಖ್ಯೆಯಿದೆ. ಆದರೆ ಈ ಸಂಖ್ಯೆ ಈಗ ನಾಲ್ಕೈದು ಪಟ್ಟು ಏರಿಕೆಯಾಗಿದೆ.
ಪಾಲಿಕೆ ಶಾಲಾ-ಕಾಲೇಜು ಕಟ್ಟಡ ನವೀಕರಣದಲ್ಲಿ ಒಂದು ಪಿಲ್ಲರ್ ಕೂಡ ಮೇಲೆದ್ದಿಲ್ಲ :
ಕರೋನಾ ಎರಡನೇ ಅಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆಯ ಶಾಲಾ- ಕಾಲೇಜುಗಳು ಸರಿಯಾಗಿಲ್ಲ ನಡೆದಿಲ್ಲ. ಆದರೆ ಇದೇ ಸಂದರ್ಭದಲ್ಲಿ ಪಾಲಿಕೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ನವೀಕರಣವನ್ನು ಹಾಗೂ ಹೊಸ ಕಟ್ಟಡ ಅಥವಾ ಕೊಠಡಿಗಳನ್ನು ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸಲೆಂದು ನೀಡಿದ್ದ 33 ಕೋಟಿ ರೂ. ಅನುದಾನವನ್ನು ಬಳಸಿಕೊಂಡು ನಿರ್ಮಿಸಬಹುದಿತ್ತು. ಆದರೆ ಆ ಕಾರ್ಯವೂ ನಡೆದಿಲ್ಲ. ಈ ಸಂಬಂಧ 37 ಯೋಜನೆಗಳು ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆಯೇ ವಿನಃ ಒಂದು ಕಟ್ಟಡದ ಪಿಲ್ಲರ್ ಕೂಡ ಮೇಲೆದ್ದಿಲ್ಲ. ಪಾಲಿಕೆಯ ಕ್ಯೂಲ್ಯಾಂಡ್ ಶಾಲೆಯಲ್ಲಿ ಹೆಚ್ಚು ಮಕ್ಕಳ ದಾಖಲಾತಿಯಿಂದಾಗಿ ಶಾಲೆಯಲ್ಲಿ ಕುಳಿತುಕೊಳ್ಳಲು ಮಕ್ಕಳಿಗೆ ಕೊಠಡಿಯಿಲ್ಲ, ಒಂದು ಕೊಠಡಿ ಕಟ್ಟಿಕೊಡಿ ಎಂದು ಎರಡು ವರ್ಷದಿಂದ ಆ ಶಾಲೆಯ ಪ್ರಿನ್ಸಿಪಾಲ್ ಬಿಬಿಎಂಪಿ ಹಿರಿಯ ಅಧಿಕಾರಿಗಳಿಗೆ ಇನ್ನಿಲ್ಲದ ರೀತಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಇದ್ಯಾವ ಪರಿಯ ಬಜೆಟ್ ಇವರು ತಯಾರಿಸಿದ್ದಾರೋ ಆ ದೇವರಿಗೇ ಗೊತ್ತು.
ಘನತ್ಯಾಜ್ಯ ನಿರ್ವಹಣಾ ಕಂಪನಿ ಕೇವಲ ಹೆಸರಿಗಷ್ಟೇ- ಇನ್ನೂ ಕೆಲಸ ಆರಂಭಿಸಿಲ್ಲ :
ಪ್ರತಿವರ್ಷ ನಗರದಲ್ಲಿನ ಘನತ್ಯಾಜ್ಯ ನಿರ್ವಹಣೆಗಾಗಿಯೇ ಬಿಬಿಎಂಪಿ ಬರೋಬ್ಬರಿ 1,500 ಕೋಟಿ ರೂ. ಗೂ ಹೆಚ್ಚು ಹಣವನ್ನು ವೆಚ್ಚ ಮಾಡುತ್ತೆ. ಆದರೂ ನಗರದಲ್ಲಿನ ಸ್ವಚ್ಛತೆ ಅಷ್ಟಕಷ್ಟೆ. ಸಾವಿರಾರು ಕೋಟಿ ರೂ. ಅನುದಾನ ಕೊಟ್ಟರೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡುವಲ್ಲಿ ಸಮಸ್ಯೆಯಾಗಿ ಕಸದ ಕಾಂಟ್ರಾಕ್ಟರ್ ಗಳು ಪ್ರತಿಭಟನೆ ಹಾದಿ ಹಿಡಿದಿದ್ದರು. 2021-22ನೇ ಸಾಲಿನ ಬಜೆಟ್ ನಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಕಂಪನಿಯೊಂದನ್ನು ಸ್ಥಾಪಿಸಿ ಜಾರಿಗೆ ತರಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈತನಕ “ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್” ಎಂಬ ಸಂಸ್ಥೆಯನ್ನು ಪ್ರಾರಂಭಿಸಿ, ಪ್ರಧಾನ ಕಾರ್ಯನಿರ್ವಹಣಾಧಿಕಾರಿ, ಪ್ರಧಾನ ಕಾರ್ಯಾಚರಣೆ ಅಧಿಕಾರಿ ಹಾಗೂ ಕಂಪನಿ ಕಾರ್ಯದರ್ಶಿಯವರನ್ನು ನೇಮಕ ಮಾಡಿದ್ದು ಬಿಟ್ಟರೆ ಈತನಕ ಕಂಪನಿ ತನ್ನ ಕೆಲಸವನ್ನು ಆರಂಭಿಸಿಲ್ಲ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾಗಿರುವ ಅಧಿಕಾರಿ, ಸಿಬ್ಬಂದಿ, ಅವರ ಕಾರ್ಯಭಾರವನ್ನು ಒಳಗೊಂಡ ಚಾರ್ಟ್ ಅನ್ನು ಇಲ್ಲಿಯ ತನಕ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಂತಿಮಗೊಳಿಸಿ ಒಪ್ಪಿಗೆ ನೀಡಿಲ್ಲ.
ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶ ಅನುಷ್ಠಾನವಾಗಿಲ್ಲ :
2021-22ನೇ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 19 ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಇ- ಆಸ್ತಿ ತಂತ್ರಾಂಶವನ್ನು ಅನುಷ್ಠಾನ ಮಾಡಲಾಗುವುದು. ಇದಕ್ಕಾಗಿ 10 ಕೋಟಿ ರೂ ಅನುದಾನವನ್ನು ಒದಗಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈತನಕ ಪಾಲಿಕೆಯಲ್ಲಿನ 8 ವಲಯಗಳ ಪೈಕಿ ಕೇವಲ ಪೂರ್ವ ವಲಯದಲ್ಲಷ್ಟೆ ಇ- ಆಸ್ತಿ ತಂತ್ರಾಂಶ ಜಾರಿಗೆ ಬಂದಿದೆ. ಇ- ಆಸ್ತಿ ತಂತ್ರಾಂಶದ ಮೂಲಕ ಪಾಲಿಕೆಯು ಕಂಪ್ಯೂಟರೀಕೃತ ಖಾತಾ ಪ್ರಮಾಣ ಪತ್ರ, ಖಾತಾ ಉದೃತ ಭಾಗ (ಖಾತಾ ಎಕ್ಸ್ ಟ್ರ್ಯಾಕ್ಟ್) ಮತ್ತಿತರ ಸೌಲಭ್ಯಗಳನ್ನು ಈ ಸಾಫ್ಟ್ ವೇರ್ ಮೂಲಕ ಪಡೆಯಬಹುದಾಗಿದೆ.
ಪಾಲಿಕೆ ಕಂದಾಯ ವಿಭಾಗವು ಆಸ್ತಿ ತೆರಿಗೆ ಮತ್ತು ಕರದೊಂದಿಗೆ ಈತನಕ 3,500 ಕೋಟಿ ರೂ. ಗುರಿಯ ಪೈಕಿ ಕೇವಲ 2,891 ಕೋಟಿ ರೂ. ಆದಾಯ ಸಂಗ್ರಹಿಸಿದೆ. ಮಾರ್ಚ್ 31ರ ಒಳಗೆ 200 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆಯಿದೆ. ಒಟ್ಟಾರೆ 3,100 ಕೋಟಿ ರೂ. ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರ ಯೋಜನೆ ವಿಭಾಗದಲ್ಲಿ ಅಧಿಕಾರಿಗಳದ್ದೇ ಕಾರುಬಾರು :
ಕೋವಿಡ್ ಮೊದಲನೇ ಅಲೆಯಲ್ಲಿ ನಗರದಲ್ಲಿ ನಿರೀಕ್ಷಿತ ಪ್ರಮಾಣದಷ್ಟು ನಿರ್ಮಾಣ ಚಟುವಟಿಕೆಗಳು ನಡೆಯಲಿಲ್ಲ. ಆದರೆ 2021-22ನೇ ಸಾಲಿನಲ್ಲಿ ನಿರ್ಮಾಣ ಚಟುವಟಿಕೆಗಳು ನಡೆದಿದೆ. ಪಾಲಿಕೆ ಬಜೆಟ್ ನಲ್ಲಿ ನಗರ ಯೋಜನೆ ವಿಭಾಗದಿಂದ ಕಟ್ಟಡ ನಕ್ಷೆ ಮಂಜೂರಾತಿ ಮತ್ತಿತರ ಶುಲ್ಕಗಳಿಂದ 405 ಕೋಟಿ ರೂ. ಸಂಗ್ರಹವಾಗುವ ಗುರಿ ಹೊಂದಲಾಗಿತ್ತು. ಆ ಪೈಕಿ ಈತನಕ 340 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಈ ಇಲಾಖೆಯಲ್ಲಿ ಸಖತ್ ಹಣದ ಗಣಿಗಾರಿಕೆ ಮಾಡಬಹುದೆಂಬ ಕಾರಣಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳು ಡೆಪ್ಯುಟೇಷನ್ ಮೇಲೆ ಇಲ್ಲಿಗೆ ಲಕ್ಷ ಲಕ್ಷ ರೂ. ಲಂಚದ ಹಣ ಚೆಲ್ಲಿ ಇಲ್ಲಿಗೆ ಬಂದು ಹಣ ಮಾಡುವ ಚಿಂತೆಯಲ್ಲಿರುತ್ತಾರೆ ಬಿಟ್ಟರೆ ಅನಧಿಕೃತ ಕಟ್ಟಡಗಳ ಪರಿಶೀಲನೆ, ಶಿಥಿಲ ಕಟ್ಟಡಗಳ ತೆರವಿಗೆ ಹೆಚ್ಚಿನ ಆಸ್ತೆವಹಿಸುತ್ತಿಲ್ಲ. ಒಟ್ಟಾರೆ ಈ ಆರ್ಥಿಕ ವರ್ಷ ಪೂರ್ಣಗೊಳ್ಳಲು ಒಂದು ವಾರದ ಸಮಯವೂ ಇಲ್ಲ. ಹೀಗಿರುವಾಗ ನಗರ ಯೋಜನೆ ವಿಭಾಗ ಗುರಿಗಿಂತ 65 ಕೋಟಿಯಷ್ಟು ಶುಲ್ಕ ಸಂಗ್ರಹಿಸುವಲ್ಲಿ ಹಿನ್ನಡೆ ಅನುಭವಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಬಜೆಟ್ ಅನುಷ್ಠಾನ ಹೆಸರಿಗಷ್ಟೆ :
- ಬೆಂಗಳೂರಿನಲ್ಲಿ ಒಟ್ಟು 4.85 ಲಕ್ಷ ಬೀದಿದೀಪಗಳನ್ನು ಎಲ್ ಇಡಿ ಬೀದಿ ದೀಪಗಳಾಗಿ ಪರಿವರ್ತಿಸುವ ಕಾರ್ಯ ವಿಫಲ. ಮೊದಲ ಹಂತದಲ್ಲಿ ಜುಲೈ 2021ರ ಒಳಗೆ 1 ಲಕ್ಷ ಎಲ್ ಇಡಿ ಬೀದಿ ದೀಪ ಅಳವಡಿಸುತ್ತೇವೆ ಎಂದು ಹೇಳಲಾಗಿತ್ತು. ಅಸಲಿಗೆ ಕಂಪನಿಯೊಂದಕ್ಕೆ ಯೋಜನೆ ಜಾರಿಗೆ ನೀಡಲಾಗಿದ್ದ ಒಪ್ಪಂದವನ್ನೇ ಮುಖ್ಯ ಆಯುಕ್ತರು 3.12.2021ರ ಆದೇಶದಲ್ಲಿ ರದ್ದು ಮಾಡಿದ್ದಾರೆ.
- ಬೃಹತ್ ನೀರುಗಾಲುವೆ ತಡೆಗೋಡೆ ನಿರ್ಮಾಣಕ್ಕೆ ಕೋಟಿ ಕೋಟಿ ರೂ. ಕರ್ಚು ಮಾಡಿದರೂ ಮಳೆಗಾಲದಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗದಂತೆ ತಡೆಯುವ “ಶೂನ್ಯ ಪ್ರವಾಹ” ಎಂಬ ಪಾಲಿಕೆ ಗುರಿಯು ಕೊಳಚೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಕೆರೆ ದತ್ತು ಯೋಜನೆ ಬಗ್ಗೆ ಅಧಿಕಾರಿಗಳಿಗೇ ಅರಿವಿಲ್ಲ :
- ಬೆಂಗಳೂರಿನಲ್ಲಿರುವ 210 ಕೆರೆಗಳಲ್ಲಿ ಕೆಲವು ಕೆರಗಳಿಗಷ್ಟೇ ಮೇಲಿಂದ ಮೇಲೆ ಅನುದಾನ ಲಭ್ಯವಾಗುತ್ತದೆ. ಪಾಲಿಕೆ ಅಭಿವೃದ್ಧಿಪಡಿಸಿದ 36ಕ್ಕೂ ಹೆಚ್ಚು ಕೆರೆಗಳಿಗೆ ಬಜೆಟ್ ನಲ್ಲಿ ಮೀಸಲಿಟ್ಟ ಅನುದಾನ ಯಾತಕ್ಕೂ ಸಾಲದು. 2019-20ನೇ ಸಾಲಿನಲ್ಲಿ 210 ಕೆರೆಗಳ ವಾರ್ಷಿಕ ನಿರ್ವಹಣೆಗೆ 7.40 ಕೋಟಿ ರೂ. ಸಿಕ್ಕಿದ್ದರೆ 2021-22ರಲ್ಲಿ ಕೇವಲ 31 ಕೋಟಿ ರೂ. ಹಣ ಅನುದಾನ ನೀಡಲಾಗಿತ್ತು. ಇದರಿಂದ ಪಾಲಿಕೆ ಅಭಿವೃದ್ಧಿಪಡಿಸಿದ ಎಷ್ಟೋ ಕೆರೆಗಳು ಮತ್ತೆ ನಿರ್ವಹಣೆ ಕೊರತೆ ಅನುಭವಿಸುತ್ತಿದ್ದರೆ, ಉಳಿದ ಕೆರೆಗಳು ಮಾಲಿನ್ಯದಿಂದ ನಲಗುತ್ತಿವೆ. 100 ಕೋಟಿ ರೂ. ಅಧಿಕ ವಹಿವಾಟು ನಡೆಸುವ ಕಂಪನಿಗಳಿಗೆ ಪಾಲಿಕೆ ಕೆರೆ ದತ್ತು ನೀಡುವ ಯೋಜನೆ ಜಾರಿಯೇ ಆಗಿಲ್ಲ. ಆ ಯೋಜನೆ ಬಗ್ಗೆ ಕೆರೆ ವಿಭಾಗದ ಬಹುತೇಕ ಅಧಿಕಾರಿಗಳಿಗೆ ಅರಿವೇ ಇಲ್ಲ.
ಜೋಗದ ಗುಂಡಿಗಳಾದ 110 ಹಳ್ಳಿ ರಸ್ತೆಗಳು :
- 110 ಹಳ್ಳಿಗಳಿಗೆ ಬೆಂಗಳೂರು ಜಲಮಂಡಳಿಯಿಂದ ನೀರು ಹಾಗೂ ಒಳಚರಂಡಿ ನಿರ್ಮಾಣಕ್ಕೆ ಅಗೆದಿರುವ ರಸ್ತೆಗಳ ದುರಸ್ಥಿಗೆ 1,000 ಕೋಟಿ ರೂ. ಪಾಲಿಕೆ ಬಜೆಟ್ ನಲ್ಲಿ ಮೀಸಲಿಟ್ಟರೂ. ಎಷ್ಟೋ ಕಡೆಗಳಲ್ಲಿ ಇನ್ನೂ ಪೂರ್ತಿ ಕೆಲಸವಾಗಿಲ್ಲ. ರಸ್ತೆಗಳೆಲ್ಲಾ ಜೋಗದ ಗುಂಡಿಗಳಂತಾಗಿದೆ. ಹೈಕೋರ್ಟ್ ಮೇಲಿಂದ ಮೇಲೆ ಛೀಮಾರಿ ಹಾಕಿದರೂ ಪಾಲಿಕೆ ಅಧಿಕಾರಿಗಳಿಗೆ ಬುದ್ದಿ ಬದ್ದಿಲ್ಲ.
- “ನಾಗರೀಕರಿಗಾಗಿ ಪಾದಚಾರಿ ಮಾರ್ಗ” ಅಭಿಯಾನದ ಅಂಗವಾಗಿ ಪ್ರತಿ ವಾರ್ಡ್ ಸಮಿತಿಗೆ, 20 ಲಕ್ಷ ರೂ.ಗಳನ್ನು ಪಾದಚಾರಿ ಮಾರ್ಗದ ದುರಸ್ತಿಗಾಗಿ ನೀಡಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಲಾಗಿತ್ತು. ಆದರೆ ನಗರದ 198 ವಾರ್ಡ್ ಗಳ ಪಾದಚಾರಿ ಮಾರ್ಗಗಳ ಮಕ್ಕಳು, ವಯೋವೃದ್ಧರು ರಸ್ತೆಯಲ್ಲಿ ನಡೆಯೋದಿರಲಿ ಫುಟ್ ಪಾತ್ ಮೇಲೂ ಕಾಲು ಹಾಕಲು ಸಾಧ್ಯವಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ?
ಒಂದೂ ಗಿಡವನ್ನು ನೆಡದ ಅರಣ್ಯ ಇಲಾಖೆ :
- ಅರಣ್ಯ ಇಲಾಖೆಯಲ್ಲಿ ಅಪಾಯಕಾರಿ ಮರಗಳ ಹೆಸರಿನಲ್ಲಿ ಬೆಲೆಬಾಳುವ ಮರಗಳನ್ನು ಸದ್ದಿಲ್ಲದೆ ಪಾಲಿಕೆ ಗುತ್ತಿಗೆದಾರರು ಕಡಿದು ಮಾರುವ ದಂಧೆಯ ಬಗ್ಗೆ ಈ ಹಿಂದೆ ಬೆಂಗಳೂರು ವೈರ್ ತನಿಖಾ ವರದಿಯಲ್ಲಿ ತಿಳಿಸಿತ್ತು. ಇಂತಹ ಅರಣ್ಯ ಇಲಾಖೆಯಲ್ಲಿ ಗಿಡ ನೆಡಲು ಹಾಗೂ ಅವುಗಳ ನಿರ್ವಹಣೆಗಾಗಿ ಕೊಟ್ಟಿರುವ 39 ಕೋಟಿ ರೂ. ಹಣ ಮೀಸಲಿಡಲಾಗಿತ್ತು. ಆದರೆ ಈ ವರ್ಷ ಸಸಿ ನೆಡಲು ಟೆಂಡರ್ ವಿಚಾರ ಕೋರ್ಟ್ ಮೆಟ್ಟಿಲೇರಿದ ಕಾರಣ ಪಾಲಿಕೆಯಿಂದ ಒಂದು ಗಿಡವನ್ನೂ ನೆಟ್ಟಿಲ್ಲ. ನಗರದ ನಾಗರೀಕರಿಗೆ ಈತನಕ 3.5 ಲಕ್ಷ ಗಿಡಗಳನ್ನು ನೀಡಲಾಗಿದೆ ಎಂದು ಪಾಲಿಕೆ ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಏಕೀಕೃತ ಡಿಜಿಟಲ್ ಪೋರ್ಟಲ್ ವ್ಯವಸ್ಥೆಗೆ ಗ್ರಹಣ :
ಬಿಬಿಎಂಪಿಯಿಂದ ನೀಡಲಾಗುವ ಆಸ್ತಿ ಖಾತೆ, ಆಸ್ತಿ ತೆರಿಗೆ, ಜನನ ಮತ್ತು ಮರಣ ಪ್ರಮಾಣ ಪತ್ರ, ಟ್ರೇಡ್ ಲೈಸೆನ್ಸ್, ಕಟ್ಟಡ ನಕ್ಷೆ ಲೈಸೆನ್ಸ್ ಸೇರಿದಂತೆ ಇನ್ನಿತರ ಆನ್ ಲೈನ್ ಸೇವೆಗಳನ್ನು ಒಂದೇ ಸೂರಿನಡಿ ಏಕೀಕೃತ ಡಿಜಿಟಲ್ ಪೋರ್ಟಲ್ ಕಲ್ಪಿಸುವ ವ್ಯವಸ್ಥೆ ಬಜೆಟ್ ಆರ್ಥಿಕ ವರ್ಷ ಮುಗಿಯುತ್ತಾ ಬಂದರೂ ಇನ್ನೂ ಜಾರಿಗೆ ಬಂದಿಲ್ಲ.
ವಿಶೇಷ ಆಯುಕ್ತೆ ಮೊದಲ ಬಜೆಟ್ ವಿಫಲ? :
ಒಟ್ಟಾರೆ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಮೊದಲ ಬಾರಿಗೆ 2021ರ ಮಾರ್ಚ್ 27ರಂದು ಮಲ್ಲೇಶ್ವರ ಐಪಿಪಿ ಕೇಂದ್ರದಲ್ಲಿ ಮಂಡಿಸಿದ 9,291.33 ಕೋಟಿ ರೂ. (ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು 10,295 ಕೋಟಿ ರೂ.) ಮೊದಲ ಬಜೆಟ್ ಫ್ಲಾಪ್ ಶೋ ಎಂಬುದು ಇದರಿಂದ ಅರಿವಿಗೆ ಬಂದಿದೆ. ಹೊಸ ಕಾಮಗಾರಿಗಳ ಪ್ರಸ್ತಾವವಿಲ್ಲದ, ನಿರ್ವಹಣಾ ಕಾಮಗಾರಿಗಳಿಗೆ ಅಗತ್ಯ ಅನುದಾನ ಲಭಿಸದೆ, ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಈ ಬಜೆಟ್ ಬಹುತೇಕ ವಿಫಲವಾಗಿರುವುದು ಕಂಡುಬರುತ್ತಿದೆ. ಇದೀಗ ಮತ್ತೆ ಎರಡನೇ ಬಾರಿ ವಾಸ್ತವ ಬಜೆಟ್ ಮಂತ್ರ ಜಪಿಸುತ್ತಾ ಆಯವ್ಯಯ ಭಾಷಣಕ್ಕೆ ಮತ್ತದೇ ಅಧಿಕಾರಿಗಳ ಗಣ ಸಿದ್ದವಾಗುತ್ತಿದೆ. ಈ ಬಾರಿ 9,000 ಕೋಟಿ ರೂ. ಆಸುಪಾಸಿನ ಒಳಗೆ ಬಜೆಟ್ ಗಾತ್ರವಿರಲಿದೆ, ಶಿಕ್ಷಣ, ಕಲ್ಯಾಣ, ಆರೋಗ್ಯ, ಘನತ್ಯಾಜ್ಯ ವಿಲೇವಾರಿಗೆ ಒತ್ತು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಬಿಬಿಎಂಪಿಯ ಸಮರ್ಥ ಆಡಳಿತಕ್ಕೆ ಬೇಕಿದೆ ಮೇಜರ್ ಸರ್ಜರಿ :
ಎರಡು ವರ್ಷಗಳ ಕೋವಿಡ್ ಸಂಕಷ್ಟದಿಂದ ಬೆಂಗಳೂರು ನಗರ ನಲುಗಿದ್ದು, ಜನರಿಗೆ ಗುಣಮಟ್ಟದ ನಾಗರೀಕ ಸೇವೆ, ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಪದೇ ಪದೇ ಎಡುವುತ್ತಿರುವ ಪಾಲಿಕೆ ಆಡಳಿತಕ್ಕೆ ಮೇಜರ್ ಸರ್ಜರಿ ಅಗತ್ಯವಿರುವುದು ಇದರಿಂದ ತಿಳಿದುಬರುತ್ತಿದೆ. ನಗರದ ಸ್ಥಳೀಯಾಡಳಿತ ಸಂಸ್ಥೆಯಾದ ಬಿಬಿಎಂಪಿಗೆ ಸಮರ್ಥ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಆಢಳಿತಕ್ಕೆ ಚುರುಕು ಮುಟ್ಟಿಸಿದರೆ ಒಳಿತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಹೇಳಿದ್ದೇನು?
“ಬಿಬಿಎಂಪಿ 2020-21ರಲ್ಲಿ ಆಡಳಿತಗಾರರ ನೇತೃತ್ವದ ಪಾಲಿಕೆಯ ಬಜೆಟ್ ಅನುಷ್ಠಾನ ಶೇ.40ರಷ್ಟು ಆಗಿಲ್ಲ. ವಾಸ್ತವ ಬಜೆಟ್ ಅಂತ ಹೇಳಿದ್ದರು. ಹಾಗಿದ್ದರೆ ಪಾಲಿಕೆಯ ಬಳಿ ಉಳಿತಾಯದ ಲೆಕ್ಕ ಇರಬೇಕಲ್ಲ. ಇದು ಜನಸ್ನೇಹಿ ಬಜೆಟ್ ಅಲ್ಲ. ಜನರಿಂದ ಆಸ್ತಿತೆರಿಗೆ ಕಟ್ಟಿಸಿಕೊಂಡು ಸೂಕ್ತ ರೀತಿಯ ಮೂಲಸೌಕರ್ಯ ಕಲ್ಪಿಸದ ಹೊರೆಯಾದ ಬಜೆಟ್ ಆಗಿದೆ. ರಾಜ್ಯ ಸರ್ಕಾರದಿಂದ ಕೋವಿಡ್ ಸೋಂಕು ನಿಯಂತ್ರಣ, ಪರಿಹಾರ ಮತ್ತಿತರ ಕಾರ್ಯಕ್ಕೆ 400 ಕೋಟಿ ರೂ. ಪಾಲಿಕೆಗೆ ಕೊಡಲಾಗಿದೆ. ಆದರೂ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ವಿತರಣೆ ಸರಿಯಾಗಿ ಆಗಿಲ್ಲ.”
- ಎಂ.ಶಿವರಾಜು, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರು